ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಉಡುಪಿ ಇವರ ಸಹಯೋಗದಲ್ಲಿ ಕಾಪು ಪುರಸಭೆ ವ್ಯಾಪ್ತಿಯ ಕೊಂಬಗುಡ್ಡೆಯಲ್ಲಿ ನೂತನವಾಗಿ ಆರಂಭಿಸಲಾದ ನಮ್ಮ ಕ್ಲಿನಿಕ್ ಆರೋಗ್ಯ ಘಟಕವನ್ನು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಂಗಳವಾರ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ನಗರ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ರೂಪದಲ್ಲಿ ನಮ್ಮ ಕ್ಲಿನಿಕ್ ಯೋಜನೆಯು ತಾಲೂಕಿನ ಜನತೆಗೆ ಆರೋಗ್ಯಕ್ಕೆ ಸಂಬಂಧಿಸಿದ ಮೂಲಭೂತ ಸೌಲಭ್ಯಗಳನ್ನು ನೀಡಲಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ನಮ್ಮ ಕ್ಲಿನಿಕ್ ನಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಹಾಗೂ ಆಯುಷ್ಮಾನ್, ಆರೋಗ್ಯ ಶ್ರೀ ಸೇವೆಗಳ ಸದುಪಯೋಗ ಪಡೆದುಕೊಳ್ಳಲು ಜನರಿಗೆ ಹೆಚ್ಚು ಅರಿವು ಮೂಡಿಸಬೇಕು ಎಂದರು.
ತಾಲೂಕು ಆರೋಗ್ಯ ಅಧಿಕಾರಿ ಡಾ. ವಾಸುದೇವ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಭಾಗದ ಜನರ ಉಪಯೋಗಕ್ಕಾಗಿ ಸರಕಾರ ನಮ್ಮ ಕ್ಲಿನಿಕ್ ಅನ್ನು ಆರಂಭಿಸಿದ್ದು ಇದರಲ್ಲಿ 12 ವಿಧದ ಆರೋಗ್ಯ ಸೇವೆಗಳ ಪ್ಯಾಕೇಜ್ ಸೌಲಭ್ಯವಿರುತ್ತದೆ. ಉಚಿತ ಆರೋಗ್ಯ ತಪಾಸಣೆ, ಔಷಧ, ಪ್ರಯೋಗಾ ಶಾಲಾ ಸೇವೆ, ಟೆಲಿ ಕನ್ಸಲ್ಟೇಶನ್ ಸೇವೆ, ಕ್ಷೇಮ ಚಟುವಟಿಕೆ, ಉಚಿತ ರೆಫರಲ್ ಸೇವೆ ಸಹಿತ ವಿವಿಧ ಸೇವೆಗಳನ್ನು ಒದಗಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ನಮ್ಮ ಕ್ಲಿನಿಕ್‌ಗೆ ಸ್ಥಳಾವಕಾಶವನ್ನು ನೀಡಿದ ಗೌಸಿಯ ಮಸೀದಿಯ ಅಧ್ಯಕ್ಷ ನಸಿರ್ ಅಹಮದ್ ಇವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಪುರಸಭೆಯ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಸ್ಥಳೀಯ ವಾರ್ಡ್ ಸದಸ್ಯೆ ವಿದ್ಯಾಲತಾ, ಮಲ್ಲಾರ್ ಗ್ರಾಮದ ಸದಸ್ಯರಾದ ಉಮೇಶ್ ಕರ್ಕೆರ, ನುರುದ್ದೀನ್, ರುಪೋಸ್, ಮೋಹಿನಿ ಶೆಟ್ಟಿ, ನಗರ ಯೋಜನಾ ಪ್ರಾಧಿಕಾರದ ಸದಸ್ಯ ಮಹಮ್ಮದ್ ಸಾಧಿಕ್ ಕೊಂಬಗುಡ್ಡೆ, ಆಡಳಿತ ವೈದ್ಯಾಧಿಕಾರಿಯಾದ ಡಾ.ರಾಜಶ್ರೀ ಕಿಣಿ, ಡಾ. ಧೃತಿ ಆಳ್ವ, ಡಾ. ಪೂಜಿತ, ಆರೋಗ್ಯ ರಕ್ಷಾ ಸಮಿತಿಯ ವಿಜಯಲಕ್ಷ್ಮಿ, ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತೆಯರು. ಅಂಗನವಾಡಿ ಕಾರ್ಯಕರ್ತೆಯರು. ಸ್ಥಳೀಯರು ಉಪಸ್ಥಿತರಿದ್ದರು.
ಬಸವರಾಜ್ ಸ್ವಾಗತಿಸಿ, ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ನಿರೂಪಿಸಿದರೆ, ರಂಜಿತ್ ಕುಮಾರ್ ವಂದಿಸಿದರು.