- ಪಶ್ಚಿಮ ಬಂಗಾಳದ ಖರಗ್‌ಪುರ-ಬಂಕುರಾ-ಆದ್ರ ರೈಲು ಮಾರ್ಗದ ಓಂಡಾ ನಿಲ್ದಾಣದ ಬಳಿ ಘಟನೆ
- ಜೂನ್ 2 ರಂದು ಒಡಿಶಾದ ಬಾಲಾಸೋರ್ನಲ್ಲಿ ತ್ರಿವಳಿ ರೈಲು ಅಪಘಾತ ಸಂಭವಿಸಿ 275 ಸಾವು
ಪಶ್ಚಿಮ ಬಂಗಾಳ ರಾಜ್ಯದ ಬಂಕುರಾ ಬಳಿ ಎರಡು ಗೂಡ್ಸ್ ರೈಲುಗಳ ನಡುವೆ ಭಾನುವಾರ (ಜೂನ್ 25) ಡಿಕ್ಕಿ ಸಂಭವಿಸಿದೆ. ಆದರೆ ಯಾವುದೇ ಪ್ರಾಣಹಾನಿ ಉಂಟಾಗಿಲ್ಲ.
ಬಂಕುರಾ ಬಳಿಯ ಖರಗ್‌ಪುರ-ಬಂಕುರಾ-ಆದ್ರ ರೈಲು ಮಾರ್ಗದ ಓಂಡಾ ನಿಲ್ದಾಣದ ಬಳಿ ನಸುಕಿನ ಜಾವ 4 ಗಂಟೆಗೆ ಈ ಘಟನೆ ಸಂಭವಿಸಿದೆ. ಗೂಡ್ಸ್ ರೈಲುಗಳ ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ರೈಲ್ವೆ ನಿಲ್ದಾಣದ ಬಳಿ ಒಂದು ಗೂಡ್ಸ್ ರೈಲು ನಿಂತಿತ್ತು. ಇನ್ನೊಂದು ಗೂಡ್ಸ್ ರೈಲು ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಎರಡು ಗೂಡ್ಸ್ ರೈಲುಗಳ ಸುಮಾರು 11 ಬೋಗಿಗಳು ಹಳಿ ತಪ್ಪಿದ್ದು ಘಟನೆಯಲ್ಲಿ ಪಶ್ಚಿಮ ಬಂಗಾಳ ಗೂಡ್ಸ್ ರೈಲುಗಳ ಇಬ್ಬರು ಲೊಕೋ ಪೈಲಟ್‌ಗಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಗೂಡ್ಸ್ ರೈಲುಗಳ ಡಿಕ್ಕಿ ಹಿನ್ನೆಲೆಯಲ್ಲಿ ಖರಗ್ಪುರ-ಬಂಕುರಾ-ಆದ್ರಾ ಮಾರ್ಗದಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಮಣಿಪುರ ಹಿಂಸಾಚಾರ | ಸಚಿವ ಸುಸಿಂದ್ರೋ ಗೋದಾಮಿಗೆ ಉದ್ರಿಕ್ತರಿಂದ ಬೆಂಕಿ
“ಗೂಡ್ಸ್ ರೈಲು ಮುಖ್ಯ ಹಳಿಯಲ್ಲಿ ತೆರಳದೆ ಲೂಪ್ ಲೈನ್‌ನಲ್ಲಿ ಹೋಗಿ ನಿಂತಿದ್ದ ಮತ್ತೊಂದು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ತನಿಖೆ ನಂತರ ಹೆಚ್ಚಿನ ಮಾಹಿತಿ ತಿಳಿಸಲಾಗುವುದು” ಎಂದು ಓಂಡಾ ರೈಲ್ವೆ ನಿಲ್ದಾಣದ ಸುರಕ್ಷತಾ ಅಧಿಕಾರಿ ದಿಬಾಕರ್ ಮಾಝಿ ಹೇಳಿದ್ದಾರೆ.
ಒಡಿಶಾದ ಬಾಲಾಸೋರ್‌ನಲ್ಲಿ ಜೂನ್ 2 ರಂದು ಬೆಂಗಳೂರು-ಹೌರಾ ಸೂಪರ್ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲುಗಳ ನಡುವೆ ಅಪಘಾತ ಸಂಭವಿಸಿ ಕನಿಷ್ಠ 275 ಮೃತಪಟ್ಟಿದ್ದರು.
ಕೋಲ್ಕತ್ತದಿಂದ ದಕ್ಷಿಣಕ್ಕೆ 250 ಕಿಮೀ ಮತ್ತು ಭುವನೇಶ್ವರದಿಂದ 170 ಕಿಮೀ ಉತ್ತರಕ್ಕೆ ಬಹನಾಗಾ ಬಜಾರ್ ನಿಲ್ದಾಣದ ಬಳಿ ಸಂಜೆ 7 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿತ್ತು.
ಚೆನ್ನೈ ಕಡೆಗೆ ಹೋಗುತ್ತಿದ್ದ ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್ಪ್ರೆಸ್, ಪಕ್ಕದ ಹಳಿಯಲ್ಲಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ನಂತರ ಹಳಿತಪ್ಪಿ, ಕೋರಮಂಡಲ್ ಎಕ್ಸ್‌ಪ್ರೆಸ್‌ನ ಹಿಂಬದಿಯ ಗಾಡಿ ಮೂರನೇ ಹಳಿಗೆ ತಿರುಗಿದಾಗ ಈ ಅಪಘಾತ ಸಂಭವಿಸಿದೆ.
ಮೂರನೇ ಹಳಿಯಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬೆಂಗಳೂರು-ಹೌರಾ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಹಳಿತಪ್ಪಿದ ಬೋಗಿಗಳಿಗೆ ಡಿಕ್ಕಿ ಹೊಡೆದಿತ್ತು.
ಈ ಘಟನೆ ಮಾಸುವ ಮುನ್ನವೇ ಪಶ್ಚಿಮ ಬಂಗಾಳದಲ್ಲಿ ಈ ದುರಂತ ನಡೆದಿದೆ.