ಸಹಕಾರ ಸಚಿವ ಕೆ ಎನ್ ರಾಜಣ್ಣ ಪುತ್ರ ಮತ್ತು ವಿಧಾನ ಪರಿಷತ್ ಸದಸ್ಯ ಆರ್ ರಾಜೇಂದ್ರ ಕೊಲೆ ಸಂಚು ಪ್ರಕರಣದ ಪ್ರಮುಖ ಆರೋಪಿ, ರೌಡಿಶೀಟರ್ ಸೋಮ ಮತ್ತು ಇನ್ನೋರ್ವ ಆರೋಪಿ ಅಮಿತ್ ಬುಧವಾರ ತುಮಕೂರು ಜಿಲ್ಲೆಯ ಕ್ಯಾತ್ಸಂದ್ರ ಠಾಣೆ ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.
“ನನ್ನ ಕೊಲೆ ಮಾಡಿಸಲು 70 ಲಕ್ಷ ರೂಪಾಯಿ ಸುಪಾರಿ ನೀಡಲಾಗಿದೆ. ಅದಕ್ಕಾಗಿ 5 ಲಕ್ಷ ರೂಪಾಯಿ ಮುಂಗಡ ಪಾವತಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಆಡಿಯೋ ನನ್ನ ಬಳಿ ಲಭ್ಯವಿದೆ. ಪರಿಶೀಲಿಸಿ ತನಿಖೆ ನಡೆಸಬೇಕು” ಎಂದು ಕೋರಿ ಆರ್ ರಾಜೇಂದ್ರ ಮಾರ್ಚ್ 29ರಣದಯ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನನ್ವಯ ಸೋಮ, ಭರತ್, ಅಮಿತ್, ಗುಂಡಾ, ಯತೀಶ್ ಇತರರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಇದನ್ನು ಓದಿದ್ದೀರಾ? ಬಿಜೆಪಿ ಬೆಳೆಸಿದ ಗೂಂಡ ಸಂಸ್ಕೃತಿಗೆ ಸಾತನೂರಿನಲ್ಲಿ ಮುಸ್ಲಿಂ ಯುವಕನ ಕೊಲೆ: ಸಿದ್ದರಾಮಯ್ಯ ಕಿಡಿ
ಈ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಮುಖ್ಯ ಆರೋಪಿ ಸೋಮ ತಲೆ ಮರೆಸಿಕೊಂಡಿದ್ದ. ಈ ನಡುವೆ ಪ್ರಮುಖ ಆರೋಪಿ ಸೋಮನಿಗೆ ಐದು ಲಕ್ಷ ರೂಪಾಯಿ ಹಣ ವರ್ಗಾವಣೆ ಮಾಡಿದ ಆರೋಪದಲ್ಲಿ ಮನು ಎಂಬುವವರ ವಿಚಾರಣೆಯನ್ನು ಪೊಲೀಸರು ನಡೆಸಿದ್ದಾರೆ.
ಇನ್ನು ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದ್ದು, ಆರೋಪಿಗಳಾದ ಯತೀಶ್, ಪುಷ್ಪಾ, ಯಶೋದ ಮತ್ತು ಭರತ್ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಈ ಬೆನ್ನಲ್ಲೇ ಸೋಮ ಮತ್ತು ಅಮಿತ್ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ.
