ಬಸವಕಲ್ಯಾಣ ನಗರಸಭೆ ಪೌರ ಕಾರ್ಮಿಕಳಾಗಿದ್ದ ರೇಷ್ಮಾ ಶೇಖ್ ಹೈದರ್ (34) ಕೊಲೆಗೆ ಸಂಬಂಧಿಸಿದಂತೆ ಆರೋಪಿ ಸಂತೋಷ ಪವಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಬಸವಕಲ್ಯಾಣ ಸಮೀಪದ ಪ್ರತಾಪುರ ಗ್ರಾಮದ ನಿವಾಸಿಯಾದ ಸಂತೋಷ್ ಕೂಡ ಬಸವಕಲ್ಯಾಣ ನಗರಸಭೆ ಪೌರ ಕಾರ್ಮಿಕನಾಗಿದ್ದಾನೆ.
ಮಾರ್ಚ್ 29 ರಂದು ರಾತ್ರಿ ಬಸವಕಲ್ಯಾಣ ನಗರದ ಶಹಾ ಹುಸೇನ ಓಣಿಯಲ್ಲಿನ ಬಾಡಿಗೆ ಮನೆಯಲ್ಲಿ ರೇಷ್ಮಾ ಮಲಗಿದ್ದ ವೇಳೆ ಕೊಲೆ ನಡೆದಿತ್ತು. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲಿಸಿ ತನಿಖೆ ಕೈಗೊಂಡಿದ್ದರು.
ಆರೋಪಿ ಮತ್ತು ಮೃತಳ ಮಧ್ಯೆ ಅನೈತಿಕ ಸಂಬಂಧವಿತ್ತು. ಆಕೆ ಮದುವೆಗಾಗಿ ಆಗಾಗ ಒತ್ತಾಯಿಸುತ್ತಿದ್ದಳು. ಆದರೂ ಈತ ನಿರಾಕರಿಸಿದ್ದಾನೆ. ಶನಿವಾರ ರಾತ್ರಿ ಆಕೆಯ ಕೊಠಡಿಗೆ ಹೋಗಿದ್ದ ಈತ ಈ ಸಂಬಂಧ ಜಗಳ ನಡೆದಾಗ ಮೊಬೈಲ್ ಚಾರ್ಜರ್ ನ ವೈರ್ ನಿಂದ ಆಕೆಯ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಳ ತಾಯಿ ನೀಡಿದ್ದ ದೂರಿನಲ್ಲಿ ಬಂಧಿತ ಆರೋಪಿ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರಿಂದ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.