ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಜಾತ್ರೆಗೆ ಬಂದಿದ್ದ ಮಹಿಳೆ ತನ್ನ ಇಬ್ಬರು ಮಕ್ಕಳ ಜೊತೆಗೆ ಮಂಗಳವಾರ ರಾತ್ರಿ ಖಾಸಗಿ ಬಸ್‌ನಲ್ಲಿ ಮರಳುತ್ತಿದ್ದ ವೇಳೆ ಅತ್ಯಾಚಾರದ ಯತ್ನ ನಡೆದಿದೆ. ಈ ಸಂಬಂಧ ಮೂವರು ಆರೋಪಿಗಳನ್ನು ಅರಸೀಕೆರೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೊಟ್ಟೂರು ತಾಲೂಕು ಅಲಬೂರಿನ ಚಾಲಕ ಪ್ರಕಾಶ ಮಡಿವಾಳ, ಡಗ್ಗಿ ಬಸಾಪುರ ಗ್ರಾಮದ ರಾಜಶೇಖರ ಮತ್ತು ಅರಸೀಕೆರೆಯ ಬಾರಿಕರ ಸುರೇಶ್ ಬಂಧಿತ ಆರೋಪಿಗಳು.
ಇದನ್ನೂ ಓದಿ: ವಿಜಯನಗರ | ರಾಜ್ಯ ಬಜೆಟ್‌ನಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಶೇ.30ರಷ್ಟು ಅನುದಾನ ಮೀಸಲಿಡಲು ಎಸ್‌ಎಫ್‌ಐ ಆಗ್ರಹ
ದಾವಣಗೆರೆ ಮೂಲದ ಸಂತ್ರಸ್ತ ಮಹಿಳೆ ‘ಮಂಜುನಾಥ’ ಹೆಸರಿನ ಖಾಸಗಿ ಬಸ್‌ನಲ್ಲಿ ತೆರಳುತ್ತಿದ್ದರು. ಆರೋಪಿ ಚಾಲಕ, ಚೆನ್ನಾಪುರ ಗ್ರಾಮದ ರಸ್ತೆಯಲ್ಲಿ ಬಸ್ ನಿಲ್ಲಿಸಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ. ರಾಜಶೇಖರ ಮತ್ತು ಸುರೇಶ ಸಹಕರಿಸಿದರು. ಮಹಿಳೆ ಹಾಗೂ ಮಕ್ಕಳು ಚೀರಾಡುವುದನ್ನು ಕೇಳಿಸಿಕೊಂಡ ಬೈಕ್ ಸವಾರರು ಬಸ್ ಒಳಗೆ ಪ್ರವೇಶಿಸಿದಾಗ, ಮಹಿಳೆ ಸ್ಥಿತಿ ಕಂಡು ಮಾಹಿತಿ ನೀಡಿದರು. ಅದರಂತೆ ಬಸ್ ಜಪ್ತಿ ಮಾಡಿ, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ʼಅತ್ಯಾಚಾರʼ, ʼಲೈಂಗಿಕ ದೌರ್ಜನ್ಯʼಗಳಂತಹ ಶಬ್ಧಗಳು ಇತ್ತೀಚೆಗಂತೂ ಸರ್ವೇ ಸಾಮಾನ್ಯವಾಗಿ ಬಳಕೆಯಲ್ಲಿರುವುದು ಕರ್ಣ ಕಠೋರ. ಭೋಗಕ್ಕೆ ಇಂತಹ ಅಮಾನವೀಯ ಕೃತ್ಯವನ್ನೆಸಗಲು ಒಬ್ಬ ವ್ಯಕ್ತಿಯನ್ನು ಪ್ರಚೋದಿಸುವುದಾದರೂ ಏನು? ಎನ್ನುವುದರ ಬಗೆಗೆ ಸ್ಪಷ್ಟ ಉತ್ತರವಿಲ್ಲ. ನೈತಿಕ ಶಿಕ್ಷಣದ ಕೊರತೆ, ವ್ಯವಸ್ಥೆಯಲ್ಲಿ ತಪ್ಪಿತಸ್ಥರು ನಾಜೂಕಾಗಿ ನುಣುಚಿಕೊಳ್ಳಲು ಅವಕಾಶವಿರುವುದೂ ಇದ್ದಿರಬಹುದು. ಹಾಗಾದರೆ ಬದಲಾವಣೆ ಮೊದಲಾಗುವುದು ಯಾವಾಗ?