ಈ ನಾಡಿನ ನಿತ್ಯದ ರೋಗಕ್ಕೆ ‘ಕುವೆಂಪು’ ಎಂಬ ಮದ್ದು

Date:

Advertisements
ಇಂದು ನಮ್ಮ ಶಾಲಾ-ಕಾಲೇಜು ಪಠ್ಯಗಳಲ್ಲಿ ಬೇಕಾಗಿರುವುದು ಹಿಂಸೆಯನ್ನು ಬೋಧಿಸುವ ಭಗವದ್ಗೀತೆಯಲ್ಲ. ಸಮಸಮಾಜ, ವಿಶ್ವಮಾನವತೆ ಬೋಧಿಸುವ ಕುವೆಂಪು ಪಠ್ಯಗಳು ಹಾಗೂ ಅವರ ವಿಚಾರಧಾರೆಗಳು. ಆಗ ತನಗೆ ತಾನೆ ಭಾರತ ಸರ್ವಜನಾಂಗದ ಶಾಂತಿಯ ತೋಟವಾಗಿ ಬದಲಾಗುತ್ತದೆ. 

ಎಲ್ಲಾ ರೋಗಗಳಿಗೂ ಔಷಧವಿರುತ್ತದೆ, ಆದರೆ ಅದನ್ನು ಹುಡುಕುವ ಹಾಗೂ ಸರಿಯಾದ ಸಮಯಕ್ಕೆ ಬಳಸುವ ಪ್ರಜ್ಞೆ ನಮ್ಮಲ್ಲಿರಬೇಕಷ್ಟೆ. ಆ ಪ್ರಜ್ಞೆ ಎಲ್ಲಾ ಮತ ಧರ್ಮಗಳ ಲಿಂಗಗಳ ಹಾಗೂ ಭಾಷೆಗಳ ಮಡಿವಂತಿಕೆಯಿಂದ ದೂರವಿದ್ದು ತನ್ನನ್ನು ತಾನೇ ಸಾಕ್ಷಾತ್ಕರಿಸಿಕೊಂಡಿರಬೇಕು. ಈ ಸಾಕ್ಷಿಕರಿಸಿಕೊಂಡ ಪ್ರಜ್ಞೆ ಪ್ರಭುತ್ವವೀರೋಧಿ ಕೂಡ ಆಗಿರಬಹುದು.

ನಾವೀಗ ಹಸಿಸುಳ್ಳುಗಳನ್ನು ನೆಚ್ಚಿಕೊಂಡು ಬದುಕುತ್ತಿದ್ದೇವೆ. ಭಾರತ ಪ್ರಕಾಶಿಸುತ್ತಿದೆ, ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಎನ್ನುವ ಸುಳ್ಳನ್ನು ಹೇಳಿಕೊಳ್ಳುತ್ತಲೇ ಮೂಲ ಸಮಸ್ಯೆಗಳನ್ನು ಮರೆತು ಬಿಟ್ಟಿದ್ದೇವೆ. ಭಾರತ ಪ್ರಕಾಶಿಸುತ್ತಿದೆ ಎನ್ನುವ ಸಮಯದಲ್ಲಿ ದಲಿತರ ಮನೆಗಳು ಹೊತ್ತಿ ಉರಿಯುತ್ತಿವೆ, ಬೀದಿಗಳಲ್ಲಿ ಅಸಹಾಯಕ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ. ದೇಶ ಭಕ್ತಿಯ ಸೋಗಿನಲ್ಲಿ ಮತ್ತೊಬ್ಬರ ಆಹಾರದ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಭಾರತದ ಭ್ರೂಣದೊಳಗಿನ ಅಸಮಾನತೆಯ ಪಿಂಡ ಕಾಲಕಾಲಕ್ಕೂ ಹೊಸ ರೂಪದಲ್ಲಿ ಬೆಳೆಯುತ್ತಿದೆ. ಈ ದೇಶ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ ಎನ್ನುವ ಹೇಳಿಕೆಗಳಿಂದ ಯಾವ ಪ್ರಯೋಜನವೂ ಇಲ್ಲ. ಇದು ಒಳಗೆ ಎಂದೂ ಮಾಯದ ಗಾಯದಿಂದ ನರಳುತ್ತಿದೆ. ಗಾಯದ ಕೀವು ವಸರುತ್ತಿದೆ. ಇದಕ್ಕೆ ಬುದ್ಧನಿಂದ ಹಿಡಿದು ನಮ್ಮ ಕುವೆಂಪುರಂತಹ ಸಾಮಾಜಿಕ ವೈದ್ಯರು ಮದ್ದು ಅರೆದಿದ್ದಾರೆ. ಆದರೆ ಆ ಮದ್ದುಗಳನ್ನು ಸರಿಯಾಗಿ ಬಳಸುವಲ್ಲಿ ನಾವು ಸೋತಿದ್ದೇವೆ.

ಪ್ರಸ್ತುತ ಭಾರತ ಅತ್ಯಂತ ಅಪಾಯಕಾರಿಯಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ಕುವೆಂಪು ಅವರ ಚಿಂತನೆಗಳು, ಬರಹಗಳು, ಪ್ರಭುತ್ವ ಹಾಗೂ ಪುರೋಹಿತಶಾಹಿ ವಿರುದ್ಧವಿರುವ ಅವರ ಆಕ್ರೋಶ, ನಮ್ಮಲ್ಲಿ ವಿಶ್ವಮಾನವತೆಯ ಸಸಿ ನೆಡಬಲ್ಲವು. ನಾವು ನಮ್ಮನ್ನು ಎಷ್ಟು ಕಲುಷಿತಗೊಳಿಸಿಕೊಂಡಿದ್ದೇವೆ ಎನ್ನುವ ಸತ್ಯವನ್ನು ಅರಿಯಲು ಕುವೆಂಪು ನೆರವಾಗಬಲ್ಲರು. ತೀರಾ ಇತ್ತೀಚಿಗೆ ಸುಪ್ರೀಂ ಕೋರ್ಟ್ ಶಬರಿಮಲೆ ಪ್ರವೇಶಕ್ಕೆ ಎಲ್ಲರಿಗೂ ಮುಕ್ತ ಅವಕಾಶ ನೀಡಿತು. ಆದರೆ ಕೆಲ ಬಲಪಂಥೀಯ ಸಂಘಟನೆಗಳು, ಪಟ್ಟಭದ್ರ ಹಿತಾಸಕ್ತಿಗಳು, ಸಂಪ್ರದಾಯದ ಹೆಸರಿನಲ್ಲಿ ಇದಕ್ಕೆ ಬಲವಾದ ವಿರೋಧ ವ್ಯಕ್ತಪಡಿಸಿದರು. ಕುವೆಂಪು ತಮ್ಮ ರಾಮಾಯಣ ದರ್ಶನಂ ಕೃತಿಯಲ್ಲಿ ಲಿಂಗ ಸಮಾನತೆಯ ಅಗತ್ಯ ಹಾಗೂ ಅನಿವಾರ್ಯತೆಯನ್ನು ತೋರಿಸಿಕೊಟ್ಟಿದ್ದಾರೆ. ಎಲ್ಲರ ಕಣ್ಣಿಗೆ ಕೇಡಿಗಳಂತೆ ಕಾಣುವ, ಅವಕೃಪೆಗೆ ಒಳಗಾಗುವ ಮಂಥರೆ ಕುವೆಂಪು ಕಣ್ಣಲ್ಲಿ ಮಮತೆಯ ಝರಿಯಾಗಿ ಹರಿಯುತ್ತಾಳೆ. ಶೂರ್ಪನಖಿ ಚಂದ್ರನಖಿಯಾಗಿ ಬೆಳಗುತ್ತಾಳೆ. ಸೀತೆಯ ಜೊತೆ ರಾಮನನ್ನೂ ಅಗ್ನಿಪ್ರವೇಶ ಮಾಡಿಸುವ ಕುವೆಂಪು ಲಿಂಗ ಸಮಾನತೆಗೆ ಮುನ್ನುಡಿ ಬರೆಯುತ್ತಾರೆ. ಆದರೆ ಇವತ್ತಿನ ರಾಮನ ಚಿತ್ರಪಟದಲ್ಲಿ ಸೀತೆ ಕಾಣೆಯಾಗಿದ್ದಾಳೆ, ಲಕ್ಷ್ಮಣ ಮರೆತುಹೋಗಿದ್ದಾನೆ, ಶಬರಿಯ ರಾಮ, ಬಿಲ್ಲು ಹಿಡಿದು ಮುಖದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾನೆ.

Advertisements

ಇದನ್ನು ಓದಿದ್ದೀರಾ?: ಸತ್ಯದರ್ಶನದ ದ್ರಷ್ಟಾರರು- ಬೀರ್ಬಲ್, ತೆನಾಲಿ ಮತ್ತು ಕುನಾಲ್ ಕಾಮ್ರಾ

ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ ಎನ್ನುವ ಕುವೆಂಪುರವರ ದಾರ್ಶನಿಕತೆಯ ಅರಿವು ಇವತ್ತಿನ ಸಮಾಜಕ್ಕೆ ಬಹು ಅಗತ್ಯ ಹಾಗೂ ಅನಿವಾರ್ಯವೆನಿಸುತ್ತದೆ. ಭಾರತದಲ್ಲಿ ಎಲ್ಲಾ ಧರ್ಮದ, ಭಾಷೆಯ, ಜಾತಿಯ ಜನರಿದ್ದಾರೆ. ಅವರಲ್ಲಿ ಒಂದು ರೀತಿಯ ವ್ಯಕ್ತ-ಅವ್ಯಕ್ತ ಸಂಬಂಧಗಳಿವೆ. ಇದೊಂದು ರೀತಿಯ ಸರಪಳಿಯ ಸಂಬಂಧ. ಆದರೆ ಇವತ್ತಿನ ಭಾರತೀಯ ಸಮಾಜ ಈ ಸರಪಳಿಯ ಕೊಂಡಿಯನ್ನು ಇಡಿಯಾಗಿ ಒಂದು ಧರ್ಮದಡಿಯಲ್ಲಿ ವ್ಯಾಖ್ಯಾನಿಸಲು ಹೊರಟಿದೆ. ಅದಕ್ಕೆ ಆಳುವ ಸರ್ಕಾರದ ಬೆಂಬಲವಿರುವುದು ಅತ್ಯಂತ ನೋವಿನ ಸಂಗತಿ. ಅಲ್ಪಸಂಖ್ಯಾತ ಸಮುದಾಯಗಳು ಅತ್ಯಂತ ಭಯದ ವಾತಾವರಣದಲ್ಲಿ ಬದುಕುತ್ತಿವೆ. ಇದನ್ನು ಪ್ರಶ್ನಿಸುವ ಬುದ್ದಿಜೀವಿಗಳಿಗೆ ನಗರ ನಕ್ಸಲೈಟ್ ಪಟ್ಟಕಟ್ಟಿ ಕೊಲ್ಲಲಾಗುತ್ತಿದೆ. ಇಂತಹ ಕೊಲೆಗಳು ನಮ್ಮ ಮಹಾಕಾವ್ಯಗಳಲ್ಲಿ ಲೆಕ್ಕವಿಲ್ಲದಷ್ಟು ನಡೆದುಹೋಗಿವೆ. ಅದು ಶಂಭೂಕನ ರೂಪದಲ್ಲಿ, ಏಕಲವ್ಯನ ರೂಪದಲ್ಲಿ. ಆದರೆ ಕುವೆಂಪು ತಮ್ಮ ಕಾವ್ಯಶಕ್ತಿಯ ಮೂಲಕ ಅದನ್ನು ವರ್ತಮಾನದ ಅವಶ್ಯಕತೆಗೆ ಒಗ್ಗಿಸುತ್ತಾರೆ. ತಮ್ಮ ಶೂದ್ರ ತಪಸ್ವಿ ನಾಟಕದಲ್ಲಿ ಒಬ್ಬ ಶೂದ್ರನನ್ನ ಕೂಡ ಮಹಾ ತಪಸ್ವಿಯಾಗಿ ಚಿತ್ರಿಸುವ ಕುವೆಂಪು ಇವತ್ತಿನ ಸಮಾಜ ಕಾಣಬೇಕಾದ ಕಾಣ್ಕೆಯನ್ನು ನೀಡಿದ್ದಾರೆ.

ಇಂದು ಭಾರತೀಯ ಸಮಾಜ ಹಾಗೂ ಇಲ್ಲಿನ ಆಳುವ ಪಕ್ಷಗಳು ಯಾವ ದಿಕ್ಕಿನಲ್ಲಿ ಸಾಗುತ್ತಿವೆ ಎನ್ನುವ ಪ್ರಶ್ನೆಯನ್ನು ನಾವು ಮತ್ತೆ ಮತ್ತೆ ಕೇಳಿಕೊಳ್ಳಬೇಕು. ಭಾರತದ ಸಂವಿಧಾನವನ್ನೇ ಬದಲಾಯಿಸಬೇಕು ಎನ್ನುವವರ ನಡುವೆ ನಾವು ಬದುಕುತ್ತಿದ್ದೇವೆ. ಯಾವ ಕಾರಣಕ್ಕೆ ಬದಲಾಯಿಸಬೇಕು ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಇವತ್ತು ಗೋವು ಒಂದು ಪಕ್ಷದ ಚುನಾವಣೆಯ ಅಜೆಂಡವಾಗಿದೆ. ಅಮಾಯಕರನ್ನು ಕೊಲ್ಲಲು ಅಸ್ತ್ರವಾಗುತ್ತದೆ. ಇಂತಹವರನ್ನ ಕುರಿತೆ ಕುವೆಂಪು ಬರೆದಿದ್ದು “ಯಾವ ಶಾಸ್ತ್ರ ಪುರಾಣ ಹೇಳಿದರೇನು ಎದೆಯ ದನಿಗೂ ಮಿಗಿಲಾದ ಶಾಸ್ತ್ರ ಇಹುದೇನು?” ಹೌದು ನಾವು ಮನುಷ್ಯನಲ್ಲಿ ಮಾನವೀಯತೆಯನ್ನು ಹಾಗೂ ಪ್ರೀತಿಯ ಸೆಲೆಯನ್ನು ಹುಡುಕಬೇಕೇ ವಿನಃ ಮತ್ತೆ ಬೇರೆಯೇನೂ ಅಲ್ಲ. ನಮ್ಮಲ್ಲಿ ಇರುವ ಬಹುಮುಖ್ಯ ಸಮಸ್ಯೆಗಳನ್ನು ಕುವೆಂಪು ತುಂಬಾ ಚೆನ್ನಾಗಿಯೇ ಅರಿತಿದ್ದರು. ನಾವು ಧರ್ಮ, ಜಾತಿ, ದೇವರ ವಿಷಯವಾಗಿ ಯುದ್ಧಕ್ಕೆ ನಿಲ್ಲುತ್ತೇವೆ. ಇವತ್ತಿನ ಎಲೆಕ್ಟ್ರಾನಿಕ್ ಮಾಧ್ಯಮಗಳು ಸಾಮಾಜಿಕ ಜಾಲತಾಣಗಳು ಅವುಗಳಿಗೆ ಗೊಬ್ಬರ ಹಾಕಿ ಬೆಳೆಸುತ್ತವೆ. ಅದು ನಮ್ಮಲ್ಲಿ ಮಾನಸಿಕ ಯುದ್ಧಕ್ಕೆ ಪ್ರಚೋದನೆ ನೀಡುತ್ತದೆ. ಇವುಗಳಿಂದ ಹೊರಬರುವುದು ಹೇಗೆ ಎನ್ನುವ ಪ್ರಶ್ನೆಗೆ ಕುವೆಂಪುರವರ “ನೂರು ದೇವರುಗಳನ್ನು ನೂಕಾಚೆ ದೂರ ಭಾರತಾಂಬೆಯನ್ನು ಪೂಜಿಸುವ ಬಾರ” ಹಾಗೂ ”ಗುಡಿ ಚರ್ಚು ಮಸೀದಿಗಳನ್ನು ಬಿಟ್ಟು ಹೊರಬನ್ನಿ” ಎನ್ನುವ ಕವಿತೆಗಳು ಉತ್ತರವನ್ನು ನೀಡುತ್ತವೆ. ನಾವು ರಾಷ್ಟ್ರೀಯ ನೆಲೆಯಲ್ಲಿ ಒಗ್ಗೂಡಬೇಕೇ ವಿನಃ ಧರ್ಮದ ಹೆಸರಿನಲ್ಲಿ ಅಲ್ಲ ಎನ್ನುವ ಮಾರ್ಮಿಕತೆ ಅಲ್ಲಿದೆ.

ಕುವೆಂಪು1

ಭಾರತದಂತ ಪ್ರಜಾಪ್ರಭುತ್ವ ಹಾಗೂ ಬಹುಧರ್ಮಗಳ ರಾಷ್ಟ್ರಗಳಲ್ಲಿ ತೀರಾ ಈಚಿನ ದಿನಗಳಲ್ಲಿ ಫ್ಯಾಸಿಸಮ್ ತಲೆ ಎತ್ತುತ್ತಿರುವುದು ಕಳವಳಕಾರಿಯಾದ ಸಂಗತಿ. ಯುದ್ಧವನ್ನು ವೈಭವೀಕರಿಸುವ ದೂರದ ಅಮೆರಿಕ ಅಧ್ಯಕ್ಷ ಟ್ರಂಪ್ ಇಂದು ನಮ್ಮ ಯುವ ಸಮುದಾಯಕ್ಕೆ ಐಕಾನ್‌ನಾಗಿದ್ದು, ಅದೇ ದೇಶದ ಮಾರ್ಟಿನ್ ಲೂಥರ್ ಕಿಂಗ್ ಮರೆತುಹೋಗಿದ್ದಾನೆ. ನಮ್ಮ ದೇಶದ ಸೈನಿಕರು ಪಾಕಿಸ್ತಾನದ ಸೈನಿಕರನ್ನು ಅವರ ಗಡಿಯೊಳಗೆ ನುಸುಳಿ ಕೊಲ್ಲುವುದು ನಮಗೆ ಗರ್ವದ ವಿಷಯವಾಗಿದೆ. ಆದರೆ ಇವುಗಳ ನಡುವೆ ನಾಗರಿಕರು ಬೀದಿಯ ಹೆಣವಾಗುತ್ತಿರುವ ವಿಷಯ ನಮ್ಮ ಗಮನಕ್ಕೆ ಬಾರದಷ್ಟು ಫ್ಯಾಸಿಸ್ಟ್ ರಾಷ್ಟ್ರೀಯವಾದಿಗಳಾಗಿ ಬೆಳೆಯುತ್ತಿದ್ದೇವೆ. ಅದಕ್ಕಾಗಿಯೇ ಯುದ್ಧದ ಭಯಾನಕತೆಯನ್ನು ಕುವೆಂಪು ತಮ್ಮ ‘ಸ್ಮಶಾನ ಕುರುಕ್ಷೇತ್ರ’ ನಾಟಕದಲ್ಲಿ, ವಸ್ತುನಿಷ್ಠವಾಗಿ ಚರ್ಚಿಸಿದ್ದಾರೆ.

ಇವತ್ತಿನ ಯುವ ಸಮುದಾಯ ಪೇಸ್ಬುಕ್ ವಾಟ್ಸ್ ಆಪ್‌ಗಳಲ್ಲಿ ಮುಳುಗಿದ್ದು ವಿಚಾರಹೀನವಾಗಿ ಬದುಕುತ್ತಿದೆ. ಅವರಲ್ಲಿರುವ ಅಂತಃಶಕ್ತಿಯನ್ನು ಬಡಿದೆಬ್ಬಿಸುವ ಕೆಲಸವನ್ನು ಕುವೆಂಪು ‘ಆತ್ಮಶ್ರಿಗಾಗಿ ನಿರಂಕುಶಮತಿಗಳಾಗಿ’ ಎನ್ನುವ ಅವರ ವಿದ್ವತ್ಪೂರ್ಣ ಬರಹದಲ್ಲಿ ಮಾಡಿದ್ದಾರೆ. ಬಹುಶಃ ‌ಅವರ ಈ ಮಾತುಗಳು, ‘ನಾನು ಹೇಳಿದೆ ಎಂದು ಒಪ್ಪಬೇಡ ಶಾಸ್ತ್ರಗಳು ಹೇಳಿದ ಕಾರಣಕ್ಕೆ ಒಪ್ಪಬೇಡ ನಿನ್ನನ್ನು ನೀನು ಕೇಳಿಕೋ’ ಎನ್ನುವ ಬುದ್ಧನ ಮಾತುಗಳನ್ನು ನೆನಪಿಸುತ್ತದೆ.

ಇದನ್ನು ಓದಿದ್ದೀರಾ?: ಏಪ್ರಿಲ್ – ದಲಿತ ಇತಿಹಾಸವನ್ನು ಸಂಭ್ರಮಿಸುವ ತಿಂಗಳು

ಇಡೀ ಕನ್ನಡ ಸಾಹಿತ್ಯ ಸಂಪ್ರದಾಯದ ಗೆರೆಯೊಳಗೆ ನರಳುತ್ತಿದ್ದಾಗ ಹಾಗೂ ಇಡೀ ಸಮುದಾಯದ ಸ್ವಾಸ್ಥ ಹದಗೆಟ್ಟಾಗ ಕುವೆಂಪು ಕನ್ನಡ ಸಾಹಿತ್ಯವನ್ನು ಸಂಪ್ರದಾಯದ ಗೆರೆಗಳಿಂದ ಮುಕ್ತಿಗೊಳಿಸಿ, ಸ್ವಸ್ಥ ಸಮಾಜಕ್ಕಾಗಿ ಬರೆದರು, ಯೋಚಿಸಿದರು. Art for Art sake and literature is a political ಎನ್ನುವ ಮಾತು ಕುವೆಂಪುರವರಿಗೆ ಅನ್ವಯಸುವುದಿಲ್ಲ. ಅವರು ತಮ್ಮ ಸಾಹಿತ್ಯವನ್ನು ಕಲಾ ಆಸ್ವಾದನೆಗೂ ಬಳಸಿದರು ಹಾಗೂ ಒಂದು ರಾಜಕೀಯ – ಸಾಮಾಜಿಕ ಅಸ್ತ್ರವನ್ನಾಗಿಯೂ ಕೂಡ ಬಳಸಿದರು. ಅವರ ‘ಮಲೆಗಳಲ್ಲಿ ಮದುಮಗಳು’ ಕೃತಿ ಬಹುಶಃ ಭಾರತೀಯ ಸಂವಿಧಾನದ ಮೂಲ ಆಶಯವಾದ ‘ಜಾತ್ಯತೀತ’ ಕಲ್ಪನೆಗೆ ಪೂರಕವಾಗಿದೆ. ಅದು ಕಾದಂಬರಿಯೂ ಹೌದು ಹಾಗೂ ಮನಶಾಸ್ತ್ರೀಯ ವಿಶ್ಲೇಷಣೆಯೂ ಹೌದು. ಇಂದು ನಮ್ಮ ಶಾಲಾ-ಕಾಲೇಜು ಪಠ್ಯಗಳಲ್ಲಿ ಬೇಕಾಗಿರುವುದು ಹಿಂಸೆಯನ್ನು ಬೋಧಿಸುವ ಭಗವದ್ಗೀತೆಯಲ್ಲ. ಸಮಸಮಾಜ, ವಿಶ್ವಮಾನವತೆ ಬೋಧಿಸುವ ಕುವೆಂಪು ಪಠ್ಯಗಳು ಹಾಗೂ ಅವರ ವಿಚಾರಧಾರೆಗಳು. ಆಗ ತನಗೆ ತಾನೇ ಭಾರತ ಸರ್ವಜನಾಂಗದ ಶಾಂತಿಯ ತೋಟವಾಗಿ ಬದಲಾಗುತ್ತದೆ.

Dr Shivakumar
ಡಾ. ಶಿವಕುಮಾರ್
+ posts

‍ಸಹಾಯಕ ಪ್ರಾಧ್ಯಾಪಕ, ಲೇಖಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ. ಶಿವಕುಮಾರ್
ಡಾ. ಶಿವಕುಮಾರ್
‍ಸಹಾಯಕ ಪ್ರಾಧ್ಯಾಪಕ, ಲೇಖಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

Download Eedina App Android / iOS

X