“ಬೇಸಿಗೆ ಕಾಲದಲ್ಲಿ ಬರಗಾಲವಿದೆಯೆಂದು ಗ್ರಾಮೀಣ ಪ್ರದೇಶದ ಕೂಲಿಕಾರರು ವಲಸೆ ಹೋಗುವ ಅವಶ್ಯಕತೆಯಿಲ್ಲ. ತಾಲೂಕಿನಲ್ಲಿ ಏಪ್ರಿಲ್ ಮೊದಲ ವಾರರಿಂದ ಉದ್ಯೋಗ ಖಾತ್ರಿ ಕೆಲಸ ಆರಂಭವಾಗುತ್ತಿದ್ದು, ನರೇಗಾ ಯೋಜನೆಯಡಿ ಅನೇಕ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಅವಕಾಶವಿದೆ. ಗ್ರಾಮೀಣ ಪ್ರದೇಶಗಳ ಜನರಿಗೆ ಯೋಜನೆಯ ಸದುಪಯೋಗ ಮಾಡಿ ಕೊಡುವ ಕೆಲಸ ನಿಮ್ಮಿಂದ ಆಗಬೇಕು. ಎಂದು ಕಾಯಕ ಬಂಧುಗಳ ಸಭೆಯಲ್ಲಿ ತಾಲೂಕು ಪಂಚಾಯತ ಇಓ ಚಂದ್ರಶೇಖರ ಬಿ ಕಂದಕೂರ ಹೇಳಿದರು.
ಗದಗ ಜಿಲ್ಲೆಯ ರೋಣ ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಸಭಾ ಭವನದಲ್ಲಿ ಪಿಡಿಓ, ಕಾಯಕ ಬಂಧುಗಳ ಹಾಗೂ ನರೇಗಾ ಸಿಬ್ಬಂದಿಗೆ ಆಯೋಜಿಸಿದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
“ವರ್ಷದಲ್ಲಿ ನೂರು ದಿನಗಳವರೆಗೆ ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಕೆಲಸ ಸಿಗುವಂತಾಗಬೇಕು. ಈ ಮೂಲಕ ಗ್ರಾಮೀಣ ಪ್ರದೇಶದ ಮೂಲಭೂತ ಸಮಸ್ಯೆಗಳನ್ನು ನಿವಾರಿಸಲು ನರೇಗಾ ವರದಾನವಾಗಲಿದೆ. ರೋಣ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಗಳಲ್ಲಿ ಆರಂಭ ಆಗುತ್ತದೆ” ಎಂದು ಹೇಳಿದರು.
“ಬೇಸಿಗೆ ಅವಧಿಯ 60 ದಿನಗಳ ಕಾಲ ನರೇಗಾ ಯೋಜನೆಯಡಿ ಕೆಲಸ ಮಾಡಿದ್ರೆ ಕೂಲಿಕಾರರಿಗೆ 22,200 ರೂಪಾಯಿ ಸಿಗುತ್ತದೆ. ಕೂಲಿಕಾರರು ನರೇಗಾ ಯೋಜನೆಯಿಂದಾಗಿ ಬರುವ ಹಣವನ್ನು ಮುಂಗಾರಿನ ಕೃಷಿ ಭಿತ್ತನೆಯ ಕಾರ್ಯಕ್ಕೆ ಸದುಪಯೋಗಪಡಿಸಿಕೊಳ್ಳಲು ನೆರವಾಗಲಿದೆ” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಪೊಲೀಸ್ ನಿವೃತ್ತರಿಗೆ ಆರೋಗ್ಯಭಾಗ್ಯದ ಹೆಚ್ಚಿನ ಸೌಲಭ್ಯ ನೀಡಬೇಕು: ವೈ.ಡಿ.ಅಗಸಿಮನಿ
“ಬೇಸಿಗೆ ದಿನದಲ್ಲಿ ಕೆಲಸದ ಸಂದರ್ಭದಲ್ಲಿ ನರೇಗಾ ಕೂಲಿಕಾರರಿಗೆ ಕೆಲಸದ ಸ್ಥಳದಲ್ಲಿಯೇ ನೀರು ಮತ್ತು ನೆರಳಿನ ವ್ಯವಸ್ಥೆ ಬಗ್ಗೆ ಕಾಳಜಿ ವಹಿಸಬೇಕು. ಆಯುಕ್ತಾಲಯದ ಆದೇಶದಂತೆ ಎನ್ಎಂಎಂಎಸ್ ಆ್ಯಪ್ನಲ್ಲಿ ಎರಡು ಸಾರಿ ಹಾಜರಾತಿ ಹಾಕುವುದನ್ನು ತಪ್ಪಿಸಬಾರದು” ಎಂದು ಚಂದ್ರಶೇಖರ ಬಿ ಕಂದಕೂರ ಪಿಡಿಓ ಗಳಿಗೆ ಸೂಚನೆ ನೀಡಿದರು.