ಬೀದರ್ ಲೋಕಸಭಾ ಕ್ಷೇತ್ರವನ್ನು ಗುಡಿಸಲು ಮುಕ್ತವನ್ನಾಗಿಸುವ ಆಶಯ ಹೊಂದಿದ್ದು, ಹೆಚ್ಚುವರಿಯಾಗಿ 50 ಸಾವಿರ ಮನೆಗಳನ್ನು ಮಂಜೂರು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸಂಸದ ಸಾಗರ ಖಂಡ್ರೆ ಒತ್ತಾಯಿಸಿದ್ದಾರೆ.
ಸಂಸತ್ ಕಲಾಪದಲ್ಲಿ ಗುರುವಾರ ಗಮನ ಸೆಳೆದ ಅವರು, ‘ಕಳೆದ 5 ವರ್ಷದ ಅವಧಿಯಲ್ಲಿ 5 ಸಾವಿರಕ್ಕಿಂತ ಕಡಿಮೆ ಮನೆ ಮಂಜೂರು ಆಗಿದ್ದವು. ಆದರೆ ನಾನು ಸಂಸದನಾಗಿ ಆಯ್ಕೆಯಾದ ಮೇಲೆ ಕೇವಲ 1ವರ್ಷದ ಅವಧಿಯಲ್ಲಿ ಪಿಎಂಎವೈ (ಗ್ರಾಮೀಣ) ಯೋಜನೆಯಡಿ ಸುಮಾರು 50 ಸಾವಿರ ಮನೆಗಳನ್ನು ಮಂಜೂರಾತಿ ಮಾಡಿಸಿದ್ದೇನೆ’ ಎಂದರು.
ಅನುಮೋದಿತ ಮನೆಗಳಿಗೆ ಇದುವರೆಗೂ ಕೇವಲ ಶೇ.35ರಷ್ಟು ಮಂಜೂರಾತಿ ದೊರೆತಿದೆ. ಜತೆಗೆ ಮನೆಗಳ ಸರ್ವೇ ಅವಧಿಯನ್ನು ಮಾ.31ಕ್ಕೆ ಪೂರ್ಣಗೊಂಡಿದೆ. ಹಾಗಾಗಿ ಈ ಅವಧಿಯನ್ನು ವಿಸ್ತರಿಸುವುದರ ಜತೆಗೆ ನನ್ನ ಕ್ಷೇತ್ರಕ್ಕೆ ಹೆಚ್ಚುವರಿ ಇನ್ನೂ 50 ಸಾವಿರ ಮನೆಗಳನ್ನು ಮಂಜೂರು ಮಾಡುವಂತೆ ಕೇಂದ್ರಕ್ಕೆ ಒತ್ತಾಯಿಸಿದರು.