ಪ್ರಯಾಣ ದರ ಏರಿಕೆಯಿಂದ ಭಾರೀ ಸುದ್ದಿಯಲ್ಲಿದ್ದ ಬೆಂಗಳೂರಿನ ‘ನಮ್ಮ ಮೆಟ್ರೋ’ ಇದೀಗ ಮತ್ತೆ ಸುದ್ದಿಯಾಗುತ್ತಿದೆ. ಈ ಬಾರಿ ಸುದ್ದಿಯಾಗುತ್ತಿರುವುದು ಮೆಟ್ರೋದ ಧೋರಣೆಯಿಂದಲ್ಲ, ಬದಲಾಗಿ ಪ್ರಯಾಣಿಕರ ನಡೆ-ನುಡಿ, ಚಟುವಟಿಕೆಗಳಿಂದ. ಬೆಂಗಳೂರಿನ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಸಂಚಾರ ದಟ್ಟಣೆಯ ರಗಳೆ ಇಲ್ಲದೆ ಪ್ರಯಾಣಿಸಲು ಮೆಟ್ರೋ ನೆರವಾಗುತ್ತಿದೆ. ಆದರೂ, ಹಲವಾರು ಪ್ರಯಾಣಿಕರು ತಮ್ಮ ಸಹ ಪ್ರಯಾಣಿಕರಿಂದಾಗಿ ಕಿರಿಕಿರಿ ಅನುಭವಿಸುವಂತಾಗಿದೆ. ಅದಕ್ಕೆ ಸಾಕ್ಷಿಯಾಗಿ ಕಳೆದ 6 ತಿಂಗಳಲ್ಲಿ ಬರೋಬ್ಬರಿ 27,000 ಪ್ರಯಾಣಿಕರು ನಿಯಮ ಉಲ್ಲಂಘನೆ ಮಾಡಿರುವ ಪ್ರಕರಣಗಳಿವೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ಒದಗಿಸಿದೆ.
2024ರ ಸೆಪ್ಟಂಬರ್‌ನಿಂದ 2025ರ ಮಾರ್ಚ್‌ವರೆಗೆ (6 ತಿಂಗಳು) ಮೆಟ್ರೋದಲ್ಲಿ ಅತೀ ಹೆಚ್ಚು ಜನಸಂದಣಿ ಇಲ್ಲದ ಸಮಯದಲ್ಲಿ ಮೆಟ್ರೋ ಭದ್ರತಾ ದಳವು ಭದ್ರತಾ ತಪಾಸಣೆ ನಡೆಸಿದೆ. ಈ ವೇಳೆ, ಸಹ ಪ್ರಯಾಣಿಕರಿಗೆ ಅನಾನುಕೂಲತೆ ಉಂಟುಮಾಡಿರುವುದು ಮತ್ತು ಮೆಟ್ರೋದ ಮಾರ್ಗಸೂಚಿ, ನಿಯಮಗಳ ಉಲಂಘನೆ ಮಾಡಿರುವ 27,000ಕ್ಕೂ ಹೆಚ್ಚು ಘಟನೆಗಳು ಕಂಡುಬಂದಿವೆ ಎಂದು ಮೆಟ್ರೋ ಸಂಸ್ಥೆ ತಿಳಿಸಿದೆ.
ನಿಯಮ ಉಲ್ಲಂಘನೆಗಳಲ್ಲಿ ಮೊಬೈಲ್ ಕಿರುಚಾಟದ ಪ್ರಕರಣಗಳೇ ಹೆಚ್ಚಿವೆ. ಸಹ ಪ್ರಯಾಣಿಕರಿಗೆ ಹೆಚ್ಚು ಕಿರಿಕಿರಿ ಮಾಡಿವೆ. ಮೆಟ್ರೋದಲ್ಲಿ ಪ್ರಯಾಣಿಸುವ ವೇಳೆ ಪ್ರಯಾಣಿಕರು ತಮ್ಮ ಮೊಬೈಲ್‌ಗಳಲ್ಲಿ ಜೋರು ಧ್ವನಿಯೊಂದಿಗೆ ಹಾಡು ಕೇಳುವ, ವಿಡಿಯೋಗಳನ್ನು ನೋಡುವ ಸುಮಾರು 11,922 ಪ್ರಕರಣಗಳು ದಾಖಲಾಗಿವೆ.
ಇನ್ನು, ವಿಶೇಷ ಚೇತನರು, ಹಿರಿಯ ನಾಗರಿಕರು, ಗರ್ಭಿಣಿಯರು ಮತ್ತು ಪುಟ್ಟ ಮಕ್ಕಗಳೊಂದಿಗೆ ಪ್ರಯಾಣಿಸುವವರಿಗೆ ಮೀಸಲಾದ ಆಸನಗಳನ್ನು ಬಿಟ್ಟುಕೊಡದೆ, ತೊಂದರೆ ಉಂಟುಮಾಡಿರುವ 14,162 ಪ್ರಕರಣಗಳು ದಾಖಲಾಗಿವೆ. ಉಳಿದಂತೆ, ಮೆಟ್ರೋ ಪ್ರಯಾಣದ ವೇಳೆ ಆಹಾರ ಸೇವಿಸಿರುವ 554 ಪ್ರಕರಣಗಳು ಮತ್ತು ಬೃಹತ್ ಸರಂಜಾಮುಗಳನ್ನು ಸಾಗಿಸಿರುವ 474 ಪ್ರಕರಣಗಳು ಕಂಡುಬಂದಿವೆ ಎಂದು ಮೆಟ್ರೋ ಹೇಳಿದೆ.
ಈ ವರದಿ ಓದಿದ್ದೀರಾ?: ಗಚ್ಚಿಬೌಲಿ ಅರಣ್ಯದಲ್ಲಿ ಐಟಿ ಪಾರ್ಕ್: ವಿದ್ಯಾರ್ಥಿಗಳ ಹೋರಾಟಕ್ಕೆ ಬಿಆರ್‌ಎಸ್ ಬೆಂಬಲ; ರಾಹುಲ್ ಗಾಂಧಿ ಮೌನ
ಆದಾಗ್ಯೂ, ನಿಯಮ ಉಲ್ಲಂಘಿಸಿದ ಯಾವುದೇ ಪ್ರಯಾಣಿಕರಿಗೆ ದಂಡ ವಿಧಿಸಿಲ್ಲ ಎಂದು ಬಿಎಂಆರ್‌ಸಿಎಲ್ ಹೇಳಿಕೊಂಡಿದೆ. ಆದರೆ, ಇಂತಹ ನಡವಳಿಕೆಗಳನ್ನು ನಿರುತ್ಸಾಹಗೊಳಿಸಲು ಮತ್ತು ಸಾಮರಸ್ಯದ ಪ್ರಯಾಣವನ್ನು ಖಾತ್ರಿಪಡಿಸಿಕೊಳ್ಳಲು ಭದ್ರತಾ ದಳವು ಕಠಿಣ ಎಚ್ಚರಿಕೆಗಳನ್ನು ನೀಡಿದೆ. ಪ್ರಯಾಣಿಕರಲ್ಲಿ ಅರಿವು ಮೂಡಿಸುವ ಕ್ರಮಕ್ಕೆ ಮುಂದಾಗಿದೆ.
ಇಂತಹ ಕಿರಿಕಿರಿಗಳು, ನಿಯಮ ಉಲ್ಲಂಘನೆಗಳು ಕೇವಲ ಮೆಟ್ರೋದಲ್ಲಿ ಮಾತ್ರವಲ್ಲ, ಬಸ್, ರೈಲು ಸೇರಿದಂತೆ ಸಾರ್ವಜನಿಕರು ಪ್ರಯಾಣಿಸುವ ಎಲ್ಲ ಸಾರಿಗೆಗಳಲ್ಲೂ ಇದ್ದೇ ಇದೆ. ನಿಯಮ ಉಲ್ಲಂಘನೆಗಳಿಗೆ ದಂಡ ವಿಧಿಸದೇ ಇರಬಹುದು ಅಥವಾ ಕ್ರಮ ಕೈಗೊಳ್ಳದೇ ಬಿಡಬಹುದು. ಆದರೆ, ಸಾರ್ವಜನಿಕ ನಡವಳಿಕೆ (ಪಬ್ಲಿಕ್ ಮ್ಯಾನರಿಸಂ) ಎಂಬುದನ್ನು ಪ್ರತಿಯೊಬ್ಬರು ಪಾಲಿಸಬೇಕಾದ ಸಾಮಾನ್ಯ ಜ್ಞಾನ. ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಸಾರ್ವಜನಿಕ ಸಾರಿಗೆಗಳಲ್ಲಿ ಜೋರು ದನಿಯಲ್ಲಿ ಮಾತನಾಡುವುದು, ಮೊಬೈಲ್‌ಗಳಲ್ಲಿ ಜೋರು ಶಬ್ದದೊಂದಿಗೆ ಹಾಡು ಕೇಳುವುದು, ವಿಚಿತ್ರವಾಗಿ ನಡೆದುಕೊಳ್ಳುವುದು ಸಾರ್ವಜನಿಕ ನಡವಳಿಕೆ ಅಲ್ಲ ಎಂಬ ಅರಿವಿರಬೇಕು. ಅಂತಹ ಅರಿವು ಬೆಳೆಸಿಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ನಡವಳಿಕೆಯು ಇತರರಿಗೆ ಕಿರಿಕಿರಿ ಆಗದಂತೆ ಎಚ್ಚರಿಕೆ ವಹಿಸಬೇಕು. ಇದಕ್ಕಿರುವ ಏಕೈಕ ದಾರಿ, ಸಾರ್ವಜನಿಕರೇ ಎಚ್ಚೆತ್ತುಕೊಳ್ಳಬೇಕು. ಅರಿತುಕೊಳ್ಳಬೇಕು.