2025-26ನೇ ಸಾಲಿನ ಶೈಕ್ಷಣಿಕ ವರ್ಷವು ಮೇ 29ರಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿನ ಶೈಕ್ಷಣಿಕ ಅವಧಿಗಳು ಮತ್ತು ರಜಾ ಅವಧಿಗಳ ಕುರಿತು ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ. ಅದರಂತೆ, 2025-26ನೇ ಸಾಲಿನಲ್ಲಿ ಬರೋಬ್ಬರಿ 123 ರಜಾ ದಿನಗಳು ಇರಲಿವೆ ಎಂದು ತಿಳಿಸಿದೆ.
ಶಿಕ್ಷಣ ಇಲಾಖೆಯು ರಜಾ ದಿನಗಳ ಕುರಿತು ಪ್ರಕರಣೆ ಬಿಡುಗಡೆ ಮಾಡಿದೆ. “ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ಅವಧಿಗಳು ಮತ್ತು ರಜಾ ಅವಧಿಗಳು ಅನ್ವಯವಾಗಲಿದೆ” ಎಂದು ಹೇಳಿದೆ.
ಮುಂದಿನ ಶಿಕ್ಷಣಿಕ ವರ್ಷವು ಎಂದಿನಂತೆ 2025 ಮೇ 29ರಿಂದ ಆರಂಭವಾಲಿದೆ. ಈ ವರ್ಷದಲ್ಲಿ ಎಲ್ಲ ಶಾಲೆಗಳಲ್ಲಿಯೂ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಸಹಾಯವಾಗುವಂತೆ ಒಟ್ಟು ವಾರ್ಷಿಕ ದಿನಗಳಲ್ಲಿ ಲಭ್ಯವಾಗುವ ಶೈಕ್ಷಣಿಕ ಚಟುವಟಿಕೆ ಅವಧಿಗಳು, ಕರ್ತವ್ಯದ ದಿನಗಳು ಮತ್ತು ರಜಾ ದಿನಗಳನ್ನಾಧರಿಸಿ ಕಾರ್ಯಸೂಚಿಯನ್ನು ನೀಡಲಾಗಿದೆ ಎಂದು ಇಲಾಖೆ ತಿಳಿಸಿದೆ.
2025-26ನೇ ಸಾಲಿನ ಶಾಲಾ ಕರ್ತವ್ಯದ ದಿನಗಳು
ಮೊದಲನೇ ಅವಧಿ: 2025ರ ಮೇ 29ರಿಂದ ಸೆಪ್ಟೆಂಬರ್ 19 ರವರೆಗೆ
ಎರಡನೇ ಅವಧಿ: 2025ರ ಅಕ್ಟೋಬರ್ 08ರಿಂದ 2026 ಏಪ್ರಿಲ್ 10ರವರೆಗೆ
ಪ್ರಮುಖ ರಜಾ ದಿನಗಳು
ದಸರಾ ರಜೆ: 2025ರ ಸೆಪ್ಟೆಂಬರ್ 20ರಿಂದ ಅಕ್ಟೋಬರ್ 07 ರವರೆಗೆ – ಒಟ್ಟು 18 ದಿನಗಳು
ಬೇಸಿಗೆ ರಜೆ: 2026ರ ಏಪ್ರಿಲ್ 11ರಿಂದ ಮೇ 28ರವರೆಗೆ – ಒಟ್ಟು 48 ದಿನಗಳು
ಬೇಸಿಗೆ ಮತ್ತು ದಸರಾ ರಜೆಗಳು ಒಟ್ಟು 66 ದಿನಗಳ ಇರಲಿವೆ. ಈ ರಜೆಗಳ ಜೊತೆಗೆ ಭಾನುವಾರಗಳು, ರಾಷ್ಟ್ರೀಯ ರಜಾ ದಿನಗಳು, ಪ್ರಮುಖ ಹಬ್ಬಗಳು ಸೇರಿದಂತೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ 123 ರಜೆಗಳು ಇರಲಿವೆ.
ಉಳಿದಂತೆ, 242 ಶೈಕ್ಷಣಿಕ ಚಟುವಟಿಕೆಯ ದಿನಗಳು ಇರಲಿವೆ. ಅದರಲ್ಲಿಯೂ 4 ದಿನ ಸ್ಥಳೀಯ ರಜೆಗಳನ್ನು ನೀಡಲು ಅವಕಾಶ ಇರುತ್ತದೆ. ಅಲ್ಲದೆ, ಪರೀಕ್ಷೆ ಮತ್ತು ಮೌಲ್ಯಾಂಕನ ಕಾರ್ಯಕ್ಕೆ 26 ದಿನಗಳು, ಪಠ್ಯೇತರ ಚಟುವಟಿಕೆ, ಪಠ್ಯ ಚಟುವಟಿಕೆ, ಸ್ಪರ್ಧೆಗಳ ನಿರ್ವಹಣಾ ಕಾರ್ಯಕ್ಕಾಗಿ 22 ದಿನ, ಮೌಲ್ಯಮಾಪನ ಮತ್ತು ಫಲಿತಾಂಶ ವಿಶ್ಲೇಷಣೆ ಕಾರ್ಯಕ್ಕಾಗಿ 10 ದಿನಗಳನ್ನು ಮೀಸಲಿಡಲಾಗಿದೆ. ಹೀಗಾಗಿ, ಬೋಧನಾ ಕಲಿಕಾ ಪ್ರಕ್ರಿಯೆಗೆ 178 ದಿನಗಳು ಮಾತ್ರವೇ ಉಳಿಯಲಿವೆ ಎಂದು ಇಲಾಖೆ ತಿಳಿಸಿದೆ.