ಮಳೆಗೆ ಪ್ರಾರ್ಥಿಸಿ ನಾನಾ ರೀತಿಯ ಜನಪದ ಆಚರಣೆಗಳು ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ರೂಢಿಯಲ್ಲಿದೆ. ಆದರೆ, ಇಲ್ಲೊಂದು ಗ್ರಾಮದಲ್ಲಿ ಸ್ಮಶಾನದಲ್ಲಿ ಹೂತಿರುವ ಶವಗಳ ಬಾಯಿಗೆ ನೀರುಣಿಸಿ ಮಳೆಗಾಗಿ ಪ್ರಾರ್ಥಿಸಿರುವ ವಿಚಿತ್ರ ಘಟನೆ ವಿಜಯಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆ ದುರ್ಬಲವಾಗಿದ್ದು ರೈತರು ಕಂಗಾಲಾಗಿದ್ದಾರೆ. ಜೂನ್ ಮುಗಿಯುತ್ತಾ ಬಂದರೂ ಮಳೆಯಾಗದೇ ಬರದ ಛಾಯೆ ಆವರಿಸಿರುವುದರಿಂದ ಕಂಗಲಾದ ವಿಜಯಪುರ ಜಿಲ್ಲೆ ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ ಜನರು ಹಿರೇಮಠದ ವೇದಮೂರ್ತಿ ವಾಗೀಶ ಸ್ವಾಮಿಗಳ ನೇತೃತ್ವದಲ್ಲಿ, ಗ್ರಾಮದ ಹಿಂದೂ ಸ್ಮಶಾನದಲ್ಲಿ ಕಳೆದ ಐದಾರು ತಿಂಗಳ ಈಚೆಗೆ ಹೂತಿರುವ ಶವಗಳಿಗೆ ಕೊಳವೆ ಮೂಲಕ ನೀರುಣಿಸಿದ್ದಾರೆ.
ನೀರು ತುಂಬಿದ ಟ್ಯಾಂಕರ್‌ನೊಂದಿಗೆ ಸ್ಮಶಾನಕ್ಕೆ ತೆರಳಿದ ಗ್ರಾಮಸ್ಥರು ಸಮಾದಿಗಳನ್ನು ಅಗೆದು ಕೊಳವೆ ಮೂಲಕ ಶವಗಳ ಬಾಯಿಗೆ ನೀರುಣಿಸಿ, ಮಳೆಗಾಗಿ ಪ್ರಾರ್ಥಿಸಿದರು. ಕಾಕತಾಳಿಯ ಎಂಬಂತೆ 20 ನಿಮಿಷಗಳ ಬಳಿಕ ಗ್ರಾಮದಲ್ಲಿ ಧಾರಾಕಾರ ಮಳೆಯಾಗಿದೆ.
“ಮನುಷ್ಯರು ಸಾಯುವಾಗ ಬಾಯಿ ತೆರೆದುಕೊಂಡು ಸತ್ತಿದ್ದರೆ ಮಳೆ ಆಗುವುದಿಲ್ಲ ಎಂಬುದು ನಮ್ಮ ಹಿರಿಯರ ನಂಬಿಕೆ. ಅಂತಹ ಶವಗಳಿಗೆ ಪೂಜೆ ಸಲ್ಲಿಸಿ, ನೀರುಣಿಸಿದರೆ ಮಳೆ ಬರುತ್ತದೆ ಎಂಬ ನಂಬಿಕೆಯಿಂದ ಮಾಡಿದ್ದೇವೆ” ಎಂದು ಹಿರೇಮಠದ ವೇದಮೂರ್ತಿ ವಾಗೀಶ ಸ್ವಾಮಿ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ಕಲಹದ ಬಳಿಕ ಹೊಂಡಕ್ಕೆ ಹಾರಿದ ಪತ್ನಿ, ರಕ್ಷಿಸಲು ಹೋದ ಪತಿಯೂ ನೀರು ಪಾಲು
ಈ ವೇಳೆ ಗ್ರಾಮಸ್ಥಾರ ಬಸಯ್ಯ ಕಪ್ಪಡಿಮಠ, ಬಸವರಾಜ ಗುಮಶೆಟ್ಟಿ, ಮಲ್ಲು ಜಂಬಗಿ, ಮಂಜು ಗುಮಶೆಟ್ಟಿ, ಮಡಿವಾಳಯ್ಯ ಲಕ್ಕುಂಡಿಮಠ, ರಾಜಶೇಖರ ಅಲಗೂರ, ಶ್ರೀಶೈಲ ಅಡಕಿ, ಸುದಾಕರ ಕವದಿ, ಸಿದ್ದಲಿಂಗ ಗುಡಗುಂಟಿ, ಈರಪ್ಪ ಬೈಚಬಾಳ, ಮಲ್ಲು ದೇಸಾಯಿ, ಮಡೆಪ್ಪ ಗುಮಶೆಟ್ಟಿ, ದೇವಿಂದ್ರ ವಡ್ಡರ, ಮಹಿಬೂಬ ಬಾಷಾ ಮನಗೂಳಿ ಹಾಗೂ ಇತರರು ಇದ್ದರು.