ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ 12 ಗಂಟೆಗಳ ಚರ್ಚೆಯ ನಂತರ ಅಂಗೀಕರಿಸಲಾದ ವಿವಾದಾತ್ಮಕ ವಕ್ಫ್ (ತಿದ್ದುಪಡಿ) ಮಸೂದೆ 2024ರ ವಿರುದ್ಧವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಕಾಂಗ್ರೆಸ್ ಶುಕ್ರವಾರ ಘೋಷಿಸಿದೆ.
ಈಗಾಗಲೇ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಈ ಮಸೂದೆಯನ್ನು ಪ್ರಶ್ನಿಸಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸುಪ್ರೀಂ ಕೋರ್ಟ್ ಕದ ತಟ್ಟಲಿದೆ ಎಂದು ರಾಜ್ಯ ಸಭೆಯಲ್ಲಿ ಹೇಳಿದ್ದಾರೆ. ಇದಾದ ಒಂದು ದಿನದ ಬಳಿಕ ಕಾಂಗ್ರೆಸ್ ಕೂಡಾ ಈ ನಿರ್ಧಾರ ತೆಗೆದುಕೊಂಡಿದೆ.
ಇದನ್ನು ಓದಿದ್ದೀರಾ? ವಕ್ಫ್ ಮಸೂದೆಗೆ 572 ತಿದ್ದುಪಡಿಗಳನ್ನು ಸೂಚಿಸಿದ ಸಂಸದೀಯ ಸಮಿತಿ
ಈ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. “ಕಾಂಗ್ರೆಸ್ ಶೀಘ್ರದಲ್ಲೇ ವಕ್ಫ್ (ತಿದ್ದುಪಡಿ) ಮಸೂದೆ 2024ರ ಸಾಂವಿಧಾನಿಕತೆಯನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಿದೆ” ಎಂದು ತಿಳಿಸಿದ್ದಾರೆ.
“ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಲಾದ ತತ್ವಗಳು, ನಿಬಂಧನೆಗಳು ಮತ್ತು ಪಾಲಿಸುತ್ತಾ ಬಂದಿರುವ ಆಚರಣೆಗಳ ಮೇಲೆ ಮೋದಿ ಸರ್ಕಾರ ನಡೆಸುತ್ತಿರುವ ಎಲ್ಲಾ ದಾಳಿಗಳನ್ನು ನಾವು ವಿರೋಧಿಸುತ್ತೇವೆ” ಎಂದು ಹೇಳಿದ್ದಾರೆ.
ಮೋದಿ ಸರ್ಕಾರ ಅಂಗೀಕರಿಸಿದ ಪ್ರಮುಖ ಮಸೂದೆಗಳನ್ನು ಪ್ರಶ್ನಿಸಿ ಕಾಂಗ್ರೆಸ್ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿರುವ ಬಗ್ಗೆಯೂ ರಮೇಶ್ ಉಲ್ಲೇಖಿಸಿದ್ದಾರೆ. 2019ರ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು 2019ರಲ್ಲಿ ಆರ್ಟಿಐ ಕಾಯ್ದೆ 2005ರ ತಿದ್ದುಪಡಿಗಳ ವಿರುದ್ಧ ಕಾಂಗ್ರೆಸ್ ಸಲ್ಲಿಸಿದ ಅರ್ಜಿಗಳ ವಿಚಾರಣೆಯು ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿದೆ. ಚುನಾವಣಾ ನಿಯಮಗಳ (2024) ತಿದ್ದುಪಡಿಗಳ ಸಿಂಧುತ್ವಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದಿದ್ದಾರೆ.
12 ಗಂಟೆಗಳ ಕಾಲ ನಡೆದ ಚರ್ಚೆಯ ನಂತರ ಲೋಕಸಭೆ ಮತ್ತು ರಾಜ್ಯಸಭೆ ಎರಡೂ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿದವು. ನಿರೀಕ್ಷೆಯಂತೆ 288 ಮತಗಳು ಮಸೂದೆ ಪರವಾಗಿ, 232 ಮತಗಳು ಮಸೂದೆ ವಿರುದ್ಧವಾಗಿ ಚಲಾವಣೆಯಾದವು. ರಾಜ್ಯಸಭೆಯಲ್ಲಿ, ಮಸೂದೆ ಪರವಾಗಿ 128 ಸದಸ್ಯರು ಮತ್ತು ವಿರುದ್ಧವಾಗಿ 95 ಸದಸ್ಯರು ಮತ ಚಲಾಯಿಸಿದರು. ಈ ಮಸೂದೆಗೆ ರಾಷ್ಟ್ರಪತಿ ಸಹಿ ಹಾಕಬೇಕಿದೆ. ಮಸೂದೆ ಪರ ಮತ್ತು ವಿರುದ್ಧ ತೀವ್ರ ಚರ್ಚೆ ನಡೆದಿದೆ.
