ಡೆಮಾಕ್ರಟಿಕ್ ಪಕ್ಷದ ಸಂಸದ ಕೋರಿ ಬುಕರ್ ಅಮೆರಿಕ ಸಂಸತ್ತಿನಲ್ಲಿ ಸತತ 25 ಗಂಟೆಗಳಿಗೂ ಹೆಚ್ಚು ಕಾಲ ಮಾತನಾಡುವ ಮೂಲಕ ಐತಿಹಾಸಿಕ ದಾಖಲೆ ಮಾಡಿದ್ದಾರೆ.
55 ವರ್ಷದ ಕೋರಿ ಬುಕರ್ ಕೋರಿ ಬುಕರ್ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಸೆನೆಟ್‌ನಲ್ಲಿ ಸತತ 25 ಗಂಟೆಗಳಿಗೂ ಹೆಚ್ಚು ಕಾಲ ಮಾತನಾಡಿದರು. ಬುಕರ್ ಸೋಮವಾರ ಸಂಜೆ ತಮ್ಮ ಭಾಷಣವನ್ನು ಪ್ರಾರಂಭಿಸಿ, ಮಂಗಳವಾರ ಸಂಜೆ ಮುಗಿಸಿದರು.
ಭಾಷಣದ ನಡುವೆ ಅವರು ಒಂದೇ ಒಂದು ವಿರಾಮ ತೆಗೆದುಕೊಳ್ಳಲಿಲ್ಲ, ಕುಳಿತುಕೊಳ್ಳಲಿಲ್ಲ, ಶೌಚಾಲಯಕ್ಕೂ ಹೋಗಲಿಲ್ಲ, ಏನನ್ನೂ ಸೇವಿಸಿಲ್ಲ, ಕನಿಷ್ಠ ನೀರನ್ನೂ ಕುಡಿದಿಲ್ಲ. ಮಾತನಾಡಲು ಪ್ರಾರಂಭಿಸಿದ 25 ಗಂಟೆ 5 ನಿಮಿಷಗಳ ನಂತರ ಟ್ರಂಪ್ ಆಡಳಿತವನ್ನು ಖಂಡಿಸಿ ತಮ್ಮ ಭಾಷಣವನ್ನು ಬುಕರ್ ಮುಕ್ತಾಯಗೊಳಿಸಿದರು. ತಮ್ಮ ಭಾಷಣದ ಕೊನೆಯಲ್ಲಿ ಅವರು ಅಮೆರಿಕನ್ ನಾಗರಿಕ ಹಕ್ಕುಗಳ ಐಕಾನ್ ಜಾನ್ ಲೂಯಿಸ್ ಅವರನ್ನು ಸ್ಮರಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬೆಲೆ ಏರಿಸಿ ಆರಿಸಿದವರನ್ನೇ ಮೂರ್ಖರನ್ನಾಗಿಸುತ್ತಿರುವ ಸರ್ಕಾರಗಳು
ಟ್ರಂಪ್ ಅವರ ನೀತಿಗಳನ್ನು ವಿರೋಧಿಸುವ ತಮ್ಮ ಈ ಭಾಷಣದ ಉದ್ದಕ್ಕೂ ಅವರು ಸಹಿಷ್ಣುತೆ ಪ್ರದರ್ಶಿಸಿದರು. ಈ ದೀರ್ಘ ಭಾಷಣದೊಂದಿಗೆ ಅವರು 67 ವರ್ಷಗಳ ಹಿಂದಿನ ಸ್ಟ್ರೋಮ್ ಥರ್ಮಂಡ್ ಅವರ ಭಾಷಣದ ದಾಖಲೆ ಮುರಿದಿದ್ದಾರೆ. 1957 ರಲ್ಲಿ ಬಲಪಂಥೀಯ ರಿಪಬ್ಲಿಕನ್ ಸ್ಟ್ರೋಮ್ ಥರ್ಮಂಡ್ ನಾಗರಿಕ ಹಕ್ಕುಗಳ ಕಾಯ್ದೆಯನ್ನು ವಿರೋಧಿಸಿ 24 ಗಂಟೆ 18 ನಿಮಿಷಗಳ ಕಾಲ ಮಾತನಾಡಿದ್ದರು.
ಕೋರಿ ಬುಕರ್ ನ್ಯೂಜೆರ್ಸಿಯ ಡೆಮಾಕ್ರಟಿಕ್ ಸಂಸದರಾಗಿದ್ದಾರೆ. 2006 ರಿಂದ 2013 ರವರೆಗೆ ಅವರು ನೇವಾರ್ಕ್ ಮೇಯರ್ ಆಗಿ ಸೇವೆ ಸಲ್ಲಿಸಿದ್ದಾರೆ. ಅಕ್ಟೋಬರ್ 2013 ರಲ್ಲಿ ಯುಎಸ್ ಸೆನೆಟ್‌ನಲ್ಲಿ ನ್ಯೂಜೆರ್ಸಿಯನ್ನು ಪ್ರತಿನಿಧಿಸಲು ವಿಶೇಷ ಚುನಾವಣೆಯಲ್ಲಿ ಜಯಗಳಿಸಿದರು. ನವೆಂಬರ್ 2014 ರಲ್ಲಿ ಅವರು ಪೂರ್ಣ ಆರು ವರ್ಷಗಳ ಅವಧಿಗೆ ಮರು ಆಯ್ಕೆಯಾದರು.