ಸಂಘಪರಿವಾರದ ಕೆಂಗಣ್ಣಿಗೆ ಗುರಿಯಾಗಿರುವ, ನಟ ಮೋಹನ್ ಲಾಲ್ ಅಭಿನಯದ ‘ಎಂಪುರಾನ್’ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಗೋಕುಲಂ ಗೋಪಾಲನ್ ಅವರ ಮನೆ, ಕಚೇರಿ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ದಾಳಿ ನಡೆಸಿದೆ.
ಗೋಧ್ರಾ ಹತ್ಯಾಕಾಂಡದ ವಿಷಯವನ್ನು ‘ಎಂಪುರಾನ್’ ಸಿನಿಮಾ ಒಳಗೊಂಡಿದೆ. ಈ ಕಾರಣಕ್ಕಾಗಿ ಸಂಘಪರವಾರವು ಸಿನಿಮಾವನ್ನು ವಿರೋಧಿಸುತ್ತಿದೆ. ಇದೇ ಕಾರಣಕ್ಕೆ ಸಿನಿಮಾದ ನಿರ್ಮಾಪಕ ಗೋಪಾಲನ್ ಅವರ ಮನೆ-ಕಚೇರಿಗಳ ಮೇಲೆ ಇಡಿ ದಾಳಿ ನಡೆಸಲಾಗಿದೆ ಎಂದು ಅನುಮಾನಿಸಲಾಗಿದೆ.
ಚೆನ್ನೈನ ಕೊಡಂಬಕ್ಕಂನಲ್ಲಿರುವ ಗೋಪಾಲನ್ ಅವರ ಕಚೇರಿ ಮತ್ತು ನೀಲಂಕರೈನಲ್ಲಿರುವ ಮನೆ ಮೇಲೆ ಇಡಿ ದಾಳಿ ನಡೆಸಿದೆ. ಕೊಚ್ಚಿ ವಿಭಾಗದ ಅಧಿಕಾರಿಗಳ ತಂಡ ಎರಡೂ ಕಡೆ ಶೋಧ ನಡೆಸುತ್ತಿದೆ ಎಂದು ವರದಿಗಳು ಹೇಳಿವೆ. ಆದಾಗ್ಯೂ, ಗೋಪಾಲನ್ ಅವರ ಕಚೇರಿ ಮೇಲೆ ದಾಳಿ ಮಾಡಿರುವ ಕುರಿತ ಇಡಿ ಅಧಿಕಾರಿಗಳು ವಿವರಗಳನ್ನು ಬಹಿರಂಗಪಡಿಸಿಲ್ಲ.
ಗೋಪಾಲನ್ ಅವರ ಮಾಲೀಕತ್ವದ ‘ಶ್ರೀ ಗೋಕುಲಂ ಚಿಟ್ಸ್ ಅಂಡ್ ಫೈನಾನ್ಸ್’ ಸಂಸ್ಥೆಯು ಮೇಲೆ ಇಡಿ ದಾಳಿ ಮಾಡಿದೆ ಎಂದು ಹೇಳಲಾಗಿದೆ. ಈ ಸಂಸ್ಥೆಯು ಹಾಸ್ಪಿಟಾಲಿಟಿ, ಮಾಧ್ಯಮ, ಆರೋಗ್ಯ, ಶಿಕ್ಷಣ, ಸಾರಿಗೆ ಹಾಗೂ ಲಾಜಿಸ್ಟಿಕ್ಸ್ ವಲಯಗಳಲ್ಲಿ ಪಾಲನ್ನು ಹೊಂದಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
‘ಎಂಪುರಾನ್’ ಚಿತ್ರದಲ್ಲಿ ನಟ ಮೋಹನ್ ಲಾಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ನಟ ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿದ್ದು, ಅವರೂ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರವು 2019ರ ‘ಲೂಸಿಫರ್’ ಚಿತ್ರದ ಮುಂದುವರಿದ ಭಾಗವಾಗಿದೆ.
ಸಿನಿಮಾದಲ್ಲಿ ಗೋಧ್ರಾ ನರಮೇಧದ ಬಗ್ಗೆ ಉಲ್ಲೇಖಿಸಿರುವ ಕಾರಣಕ್ಕೆ, ಚಿತ್ರವು ಬಿಜೆಪಿ, ಆರ್‌ಎಸ್‌ಎಸ್ ಸೇರಿದಂತೆ ಸಂಘ ಪರಿವಾರದ ಕೆಂಗಣ್ಣಿಗೆ ಗುರಿಯಾಗಿದೆ. ಚಿತ್ರದ ಬರಹಗಾರ ಮುರಳಿ ಗೋಪಿ ಮತ್ತು ನಿರ್ಮಾಪಕ ಆಂಥೋನಿ ಪೆರುಬ್ಮಾವೂರ್ (ಚಿತ್ರದಲ್ಲಿ ಸಣ್ಣ ಪಾತ್ರವನ್ನು ನಿರ್ವಹಿಸಿದ್ದಾರೆ) ಸೇರಿದಂತೆ ಇಡೀ ಚಿತ್ರತಂಡ ಟೀಕೆಗೆ ಗುರಿಯಾಗಿದೆ. ಅವರನ್ನು ‘ಹಿಂದು ವಿರೋಧಿ’ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ.
ವಿವಾದದ ನಂತರ ಚಿತ್ರದ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಲು ನಿರ್ಮಾಪಕರು ಸ್ವಯಂ ಪ್ರೇರಿತರಾಗಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿತ್ತು. ನಟ ಮೋಹನ್ ಲಾಲ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿ, ಚಿತ್ರದಲ್ಲಿರುವ ವಿವಾದಾತ್ಮಕ ದೃಶ್ಯಗಳನ್ನು ಚಿತ್ರದಿಂದ ತೆಗೆದುಹಾಕಲಾಗುವುದು ಎಂದು ಹೇಳಿದ್ದರು. ಅದರಂತೆ ಚಿತ್ರದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ ಎಂದು ವರದಿಯಾಗಿದೆ.
“ಚಿತ್ರದಲ್ಲಿ ಯಾರಿಗಾದರೂ ನೋವುಂಟುಮಾಡುವ ದೃಶ್ಯಗಳು ಅಥವಾ ಸಂಭಾಷಣೆಗಳಿದ್ದರೆ ತೆಗೆದು ಹಾಕಲಾಗುವುದು” ಎಂದು ಗೋಪಾಲನ್ ಕೂಡ ಹೇಳಿದ್ದರು.
“ಈ ಚಿತ್ರ ಯಾರನ್ನೂ ನೋಯಿಸುವ ಉದ್ದೇಶ ಹೊಂದಿಲ್ಲ. ಚಿತ್ರದಲ್ಲಿನ ಯಾವುದೇ ಸಂಭಾಷಣೆ ಅಥವಾ ದೃಶ್ಯ ಯಾರನ್ನಾದರೂ ನೋಯಿಸಿದ್ದರೆ, ಅಗತ್ಯ ಬದಲಾವಣೆಗಳನ್ನು ಮಾಡಲು ನಾನು ಪೃಥ್ವಿರಾಜ್ ಸುಕುಮಾರನ್ ಅವರಿಗೆ ಹೇಳಿದ್ದೇನೆ. ಚಿತ್ರದ ಸಂಭಾಷಣೆಯ ಕೆಲವು ಪದಗಳನ್ನು ಈಗಾಗಲೇ ಮ್ಯೂಟ್ ಮಾಡಲಾಗಿದೆ. ಚಿತ್ರದಲ್ಲಿನ ಕೆಲವು ವಿಷಯಗಳ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ನಾವು ಯಾವುದೇ ರಾಜಕೀಯದ ಭಾಗವಲ್ಲ” ಎಂದು ಗೋಪಾಲನ್ ತಿಳಿಸಿದ್ದರು.
ಚಿತ್ರದಲ್ಲಿ 24 ವಿಷಯಗಳಿಗೆ ಕತ್ತರಿ
ವಿವಾದದ ನಂತರ ನಿರ್ಮಾಪಕರು ಚಿತ್ರದ 24 ವಿಷಯಗಳಿಗೆ ಸ್ವಯಂಪ್ರೇರಿತ ಕತ್ತರಿ ಹಾಕಿದ್ದಾರೆ. ಅವುಗಳ ಒಟ್ಟು ಅವಧಿ 2 ನಿಮಿಷ ಮತ್ತು 8 ಸೆಕೆಂಡುಗಳು ಎಂದು ವರದಿಗಳು ಹೇಳಿವೆ.
ಚಿತ್ರದಲ್ಲಿ ಬದಲಾವಣೆ ಮಾಡಿರುವ ವಿಷಯಗಳಿಗೆ ಉದಾಹರಣೆ ಕೊಡುವುದಾದರೆ, ಈ ಹಿಂದೆ ಚಿತ್ರದಲ್ಲಿ ಅಭಿಮನ್ಯು ಸಿಂಗ್ ನಿರ್ವಹಿಸಿದ ವಿಲನ್ ಪಾತ್ರದ ಹೆಸರು ಬಲರಾಜ್ ಪಟೇಲ್ ಎಂದಿತ್ತು. ಇದು ಗೋದ್ರಾ ಗಲಭೆಯ ಅಪರಾಧಿ ವಿಶ್ವ ಹಿಂದೂ ಪರಿಷತ್‌ನ ಬಾಬುಭಾಯಿ ಪಟೇಲ್ ಅಲಿಯಾಸ್ ಬಾಬು ಬಜರಂಗಿಯನ್ನು ಉಲ್ಲೇಖಿಸಿದ ಪಾತ್ರವಾಗಿತ್ತು. ಈಗ ಹೊಸ ಆವೃತ್ತಿಯಲ್ಲಿ ಬಲರಾಜ್ ಪಟೇಲ್ ಎಂಬ ಹೆಸರನ್ನು ಬರೀ ಬಲದೇವ್ ಎಂದು ಬದಲಾಯಿಸಲಾಗಿದೆ.
ನಿರ್ಮಾಪಕರ ಮೇಲೆ ಯಾರೂ ಒತ್ತಡ ಹಾಕಿಲ್ಲ: ಸುರೇಶ್ ಗೋಪಿ
ಎಂಪುರಾನ್ ನಿರ್ಮಾಪಕರಿಗೆ ಚಿತ್ರದಲ್ಲಿ ಬದಲಾವಣೆಗಳನ್ನು ಮಾಡುವಂತೆ ಯಾರೂ ಒತ್ತಡ ಹಾಕಿಲ್ಲ ಎಂದು ಗುರುವಾರ ರಾಜ್ಯಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಸುರೇಶ್ ಗೋಪಿ ಹೇಳಿದ್ದಾರೆ.
“ಚಿತ್ರದ ಆರಂಭದಲ್ಲಿ ಪ್ರದರ್ಶಿಸಲಾದ ಕ್ರೆಡಿಟ್‌ಗಳಿಂದ ನನ್ನ ಹೆಸರನ್ನು ಅಳಿಸಲು ನಿರ್ಮಾಪಕರಿಗೆ ಕರೆ ಮಾಡಿ ಮನವಿ ಮಾಡಿದ ಮೊದಲ ವ್ಯಕ್ತಿ ನಾನೇ. ಇದು ಸತ್ಯ” ಎಂದು ಗೋಪಿ ಹೇಳಿಕೊಂಡಿದ್ದಾರೆ.
ನಿರ್ಮಾಪಕರು ಸ್ವಯಂಪ್ರೇರಣೆಯಿಂದ ಚಿತ್ರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದಾರೆ ಎಂದು ಹೇಳಿದ ಸುರೇಶ್ ಗೋಪಿ “ನಾನು ಹೇಳಿದ್ದು ಸುಳ್ಳು ಎಂದು ಸಾಬೀತಾದರೆ ಯಾವುದೇ ಶಿಕ್ಷೆ ಅನುಭವಿಸಲು ಸಿದ್ಧನಿದ್ದೇನೆ. ಚಿತ್ರದ ನಿರ್ದೇಶಕರ ಅನುಮತಿಯೊಂದಿಗೆ 17 ವಿಷಯಗಳಿಗೆ ಕತ್ತರಿ ಹಾಕಲು ನಿರ್ಮಾಪಕರು ಮತ್ತು ಚಿತ್ರದ ನಾಯಕ ನಟ ನಿರ್ಧರಿಸಿದ್ದಾರೆ. ಅದು ಅವರ ನಿರ್ಧಾರ. ಆದರೂ, ಅವರು (ವಿಪಕ್ಷದವರು) ನನ್ನ ರಾಜಕೀಯ ಪಕ್ಷವನ್ನು ದೂಷಿಸುತ್ತಿದ್ದಾರೆ” ಎಂದು ಗೋಪಿ ಹೇಳಿದ್ದಾರೆ.