ಕಾಂಗ್ರೆಸ್‌ ನಾಯಕರ ದೆಹಲಿ ಭೇಟಿ: ಬಣ ಬಡಿದಾಟ ನಿರ್ಲಕ್ಷ್ಯ, ರಾಹುಲ್ ಗಾಂಧಿ ಕೊಟ್ಟ ಸಂದೇಶವೇನು?

Date:

Advertisements
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿರುವ ಬೆಳವಣಿಗೆ ಭವಿಷ್ಯದಲ್ಲಿ ಸರ್ಕಾರ ಮತ್ತು ಪಕ್ಷದಲ್ಲಿನ ಬದಲಾವಣೆಗೆ ಮುನ್ನುಡಿ ಬರೆದಂತೆ ಕಾಣುತ್ತಿದೆ. ಆದರೆ, ಆ ಕ್ಲೋಸ್‌ ಡೋರ್ ಮೀಟಿಂಗ್‌ನಲ್ಲಿ ರಾಜ್ಯದ ಬಣ ಬಡಿದಾಟ ಮತ್ತು ಅಧಿಕಾರ ಹಸ್ತಾಂತರ ವಿಚಾರದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಅದರಲ್ಲೂ ಮುಖ್ಯವಾಗಿ ರಾಹುಲ್‌ ಗಾಂಧಿ ಹೇಗೆ ಸ್ಪಂದಿಸಿದ್ದಾರೆ? 

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ, ಅರಣ್ಯ ಇಲಾಖೆ ಸಚಿವ ಈಶ್ವರ್‌ ಖಂಡ್ರೆ ಹಾಗೂ ಸಹಕಾರಿ ಸಚಿವ ಕೆ ಎನ್‌ ರಾಜಣ್ಣ ಸೇರಿ ಪ್ರಮುಖ ಸಚಿವರ ಮತ್ತು ನಾಯಕರ ದೆಹಲಿಯ ಹೈಕಮಾಂಡ್‌ ಭೇಟಿ ಕೇವಲ ಕರ್ನಾಟಕ ಭವನ ಉದ್ಘಾಟನೆಗೆ ಸೀಮಿತವಾಗದೇ ಒಂದಿಷ್ಟು ರಾಜಕೀಯ ಚಟುವಟಿಕೆಗಳನ್ನು ಗರಿಗೆದರಿಸಿದೆ.

ಮುಖ್ಯವಾಗಿ ಸಿಎಂ ಗದ್ದುಗೆ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಬದಲಾವಣೆ ವಿಚಾರದ ಚರ್ಚೆಯಲ್ಲಿ ಸದಾ ಪಕ್ಷಕ್ಕೆ ಮುಜುಗರ ತರುವ ಹಾಗೇ ನಡೆದುಕೊಳ್ಳುತ್ತಿರುವ ಮಾತಿನ ಮಲ್ಲ ಕೆ.ಎನ್‌ ರಾಜಣ್ಣ ಹೆಚ್ಚು ಸಕ್ರಿಯವಾಗಿರುವುದರಿಂದ ಅವರನ್ನೂ ಸೇರಿ ಮೇಲೆ ಉಲ್ಲೇಖಿಸಿರುವ ಎಲ್ಲ ನಾಯಕರು ರಾಜ್ಯ ಕಾಂಗ್ರೆಸ್‌ನ ರಾಜಕೀಯ ಚದುರಂಗದಾಟದಲ್ಲಿ ಈಗ ಮುಂದಾಳುಗಳಾಗಿ ಗುರುತಿಸಿಕೊಂಡಿದ್ದಾರೆ. ಇದಕ್ಕೆ ಜಾತಿ ರಾಜಕಾರಣದ ಸಮೀಕರಣವೂ ಕಾರಣವಿದೆ.

ದೆಹಲಿಯಲ್ಲೇ ತಂಗಿರುವ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿರುವ ಬೆಳವಣಿಗೆ ಭವಿಷ್ಯದಲ್ಲಿ ಸರ್ಕಾರ ಮತ್ತು ಪಕ್ಷದಲ್ಲಿನ ಬದಲಾವಣೆಗೆ ಮುನ್ನುಡಿ ಬರೆದಂತೆ ಕಾಣುತ್ತಿದೆ. ಆದರೆ, ಆ ಕ್ಲೋಸ್‌ ಡೋರ್ ಮೀಟಿಂಗ್‌ನಲ್ಲಿ ರಾಜ್ಯದ ಬಣ ಬಡಿದಾಟ ಮತ್ತು ಅಧಿಕಾರ ಹಸ್ತಾಂತರ ವಿಚಾರದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಅದರಲ್ಲೂ ಮುಖ್ಯವಾಗಿ ರಾಹುಲ್‌ ಗಾಂಧಿ ಹೇಗೆ ಸ್ಪಂದಿಸಿದ್ದಾರೆ ಎಂಬುದು ಮುಂದಿರುವ ಪ್ರಶ್ನೆ.

Advertisements

ದೆಹಲಿ ವಿಚಾರಕ್ಕೆ ಬರುವುದಾದರೆ, ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್‌ ಹಾಗೂ ಸತೀಶ್‌ ಜಾರಕಿಹೊಳಿ ಯಾರೇ ಆಗಲಿ ಅವರೆಲ್ಲ ಹೇಳುವ ಪ್ರತೀ ಮಾತಿಗೂ ಕಾಂಗ್ರೆಸ್‌ ಹೈಕಮಾಂಡ್ ಸುಮ್ಮನೆ‌ ತಲೆಯಾಡಿಸಿ, ಒಪ್ಪಿಕೊಳ್ಳುತ್ತದೆ ಎಂದು ಕಾಂಗ್ರೆಸ್‌ನೊಳಗೆ ಯಾರಾದರೂ ಭಾವಿಸಿದ್ದರೆ ಅದು ಮೂರ್ಖತನ ಅಷ್ಟೇ. ಕಟು ವಾಸ್ತವವನ್ನು ಹೊರಗಣ್ಣಿಗಿಂತ ಒಳಗಣ್ಣಿನಿಂದ ನೋಡಿದಾಗಲೇ ಒಂದಿಷ್ಟು ಸಂಕೀರ್ಣ ಸಂಗತಿಗಳು ಅರ್ಥವಾಗುತ್ತವೆ.

ದೇಶದಲ್ಲಿ ಕಾಂಗ್ರೆಸ್‌ ಎಂದರೆ ಮುಖ್ಯವಾಗಿ ರಾಹುಲ್‌ ಗಾಂಧಿಯೇ ಮೊದಲ ಹೆಸರು. ಎಐಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಕುಳಿತಿರಬಹುದು. ಆದರೆ, ರಾಹುಲ್‌ ಗಾಂಧಿ ಇಲ್ಲದೇ ಪಕ್ಷದೊಳಗೆ ಯಾವುದೇ ಪ್ರಮುಖ ತೀರ್ಮಾನಗಳು ಆಗಲ್ಲ ಎಂಬುದು ಕಾಂಗ್ರೆಸ್‌ನ ನಾಯಕರಿಗೂ ಗೊತ್ತಿದೆ. ಹೀಗಾಗಿ ರಾಜ್ಯದಲ್ಲಿ ಪಕ್ಷದೊಳಗೆ ನಡೆಯುತ್ತಿರುವ ಗೋಜಲು ಬೆಳವಣಿಗೆಗಳನ್ನು ಪರಿಹರಿಸಬೇಕಾದ ಮುಂಚೂಣಿ ನಾಯಕ ರಾಹುಲ್‌ ಗಾಂಧಿಯೇ ಆಗಿದ್ದು, ರಾಜ್ಯದ ಬಣ ಬಡಿದಾಟವನ್ನು ಅವರು ಹೇಗೆ ಪರಿಹರಿಸುತ್ತಾರೆ? ಯಾವ ರೀತಿ ಜಾಣ್ಮೆ ಪ್ರದರ್ಶಿಸುತ್ತಾರೆ ಎಂಬುದು ಅವರ ದೂರದೃಷ್ಟಿಗೂ ಕನ್ನಡಿ ಹಿಡಿಯಲಿದೆ.

ಸಿದ್ದರಾಮಯ್ಯ 3 23

ಕಾಂಗ್ರೆಸ್‌ನೊಳಗಿನ ಬಣ ಬಡಿದಾಟ ಮಾಧ್ಯಮಗಳ ಮಧ್ಯಸ್ಥಿಕೆಯಿಂದ ರಾಜ್ಯದಲ್ಲಿ ದೊಡ್ಡದಾಗಿ ಬಿಂಬಿತವಾಗುತ್ತಿದೆ ಹೊರತು ರಾಹುಲ್‌ ಗಾಂಧಿಯ ಆದ್ಯತೆಗಳಲ್ಲಿ ಇದು ದೊಡ್ಡದಾಗಿಲ್ಲ. ಭಾರತ್‌ ಜೋಡೋ ಯಾತ್ರೆಯನ್ನು ಗಮನದಲ್ಲಿಟ್ಟುಕೊಂಡು ವಿವರಿಸುವುದಾರೆ ರಾಹುಲ್‌ ಗಾಂಧಿಯ ಆದ್ಯತೆಗಳೇ ಬೇರೆ. ಸದ್ಯದ ಕಾಲಘಟ್ಟಲ್ಲಿ ದೇಶದಲ್ಲಿ ಕಾಂಗ್ರೆಸ್‌ ಅನ್ನು ಪುನರುಜ್ಜೀವನಗೊಳಿಸಲು ಹಠತೊಟ್ಟ ಸಂತನಂತೆ ರಾಹುಲ್‌ ಗಾಂಧಿ ಕಾಣುತ್ತಿದ್ದಾರೆ. ಬಿಜೆಪಿಯ ದಶಕಗಳ ಕೀಳುಮಟ್ಟದ ಪ್ರಚಾರಗಳ ನಡುವೆಯೂ ರಾಹುಲ್‌ ಗಾಂಧಿ ಪುಟಿದೆದ್ದಿದ್ದಾರೆ. ಸ್ವತಃ ಬಿಜೆಪಿಯೇ ಅಲ್ಲಗಳೆಯದ ಮಟ್ಟಕ್ಕೆ ರಾಹುಲ್‌ ವೈಚಾರಿಕವಾಗಿ, ಸೈದ್ಧಾಂತಿಕವಾಗಿ ಹಾಗೂ ಪ್ರಜಾಸತ್ತಾತ್ಮಕವಾಗಿ ಗಟ್ಟಿಯಾಗಿದ್ದಾರೆ. ಕಾಂಗ್ರೆಸ್‌ಗೆ ತಾವು ಅನಿವಾರ್ಯ ಎಂಬುದನ್ನು ರುಜುವಾತು ಮಾಡಿದ್ದಾರೆ. ಕಾಂಗ್ರೆಸ್‌ ಅನ್ನು ರಾಜಕೀಯದಲ್ಲಿ ಹಗುರವಾಗಿ ಪರಿಗಣಿಸಬೇಡಿ ಎಂಬುದನ್ನು ದೆಹಲಿ ಚುನಾವಣೆ ಮೂಲಕ ಪರೋಕ್ಷವಾಗಿ ಸಾರುವ ಮೂಲಕ, ಬೇರೆ ಉಳಿದ ಪಕ್ಷಗಳ ಗೆಲುವಿಗೂ ಕಾಂಗ್ರೆಸ್‌ ಸಹ ಅಗತ್ಯ ಇದೆ ಎಂಬುದನ್ನು ರಾಹುಲ್‌ ಗಾಂಧಿ ಅರ್ಥಮಾಡಿಸಿದ್ದಾರೆ.

ಪಕ್ಷದ ಪುನರುಜ್ಜೀವನಕ್ಕೆ ಶ್ರಮಿಸುತ್ತಿರುವ ರಾಹುಲ್‌ ಗಾಂಧಿಗೆ ಕರ್ನಾಟಕದಲ್ಲಿ ಸುಭದ್ರ ಆಡಳಿತ ನೀಡುವುದು, ಜನಪರ ಸರ್ಕಾರವಾಗಿ ಕಾಂಗ್ರೆಸ್ ಗುರುತಿಸಿಕೊಳ್ಳುವ ಮೂಲಕ ಮುಂದಿನ ಚುನಾವಣೆಗೆ ಕರ್ನಾಟಕವನ್ನು ರಾಷ್ಟ್ರೀಯ ಭರವಸೆಯನ್ನಾಗಿ ಮುಂದಿಟ್ಟು, ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ತರಬೇಕು ಎಂಬುದು ಅವರ ಚಿಂತನೆ. ‌ಇದನ್ನೆಲ್ಲ ಸಾಕಾರಗೊಳಿಸಲೆಂದೇ ಸಿದ್ದರಾಮಯ್ಯ ಅವರಿಗೆ ಎರಡನೇ ಬಾರಿಗೂ ಮುಖ್ಯಮಂತ್ರಿ ಸ್ಥಾನವನ್ನು ರಾಹುಲ್ ಗಾಂಧಿ ನೀಡಿದ್ದು.

ಈ ಸುದ್ದಿ ಓದಿದ್ದೀರಾ? ರಾಯಭಾರ | ‘ಸಿದ್ದರಾಮಯ್ಯನವರ ನಂತರ ಯಾರು?’ ಕಾಂಗ್ರೆಸ್‌ನೊಳಗಿನ ಕಂಪನಗಳು 

ಇಂತಹ ಸಾಮಾನ್ಯ ಸಂಗತಿ ಬಣ ಬಡಿದಾಟದಲ್ಲಿರುವ ಕಾಂಗ್ರೆಸ್‌ ನಾಯಕರಿಗೆ ಅರ್ಥವಾಗಿದೆಯೋ ಇಲ್ಲವೋ? ರಾಹುಲ್‌ ಗಾಂಧಿ ಉದ್ದೇಶವನ್ನೇ ಅರ್ಥ ಮಾಡಿಕೊಳ್ಳದ ರಾಜ್ಯ ಕಾಂಗ್ರೆಸ್‌ ನಾಯಕರು ದೇಶದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ತರುವ ರಾಹುಲ್ ಹೋರಾಟಕ್ಕೆ ಒಗ್ಗಟ್ಟಿನಿಂದ ನೀರು ಎರೆಯು‌ತ್ತಿಲ್ಲ ಎಂಬುದು ಅವರಿಗೂ ಅರ್ಥವಾಗಿದೆ. ರಾಜ್ಯ ನಾಯಕರ ಪೈಕಿ ಯಾರು ಹೇಗೆ ಸೈದ್ಧಾಂತಿಕವಾಗಿ ಕಾಂಗ್ರೆಸ್‌ ಜೊತೆ ಇದ್ದಾರೆ ಎಂಬುದರ ಅಳತೆಗೋಲು ರಾಹುಲ್‌ ಗಾಂಧಿ ಬಳಿ ಇದ್ದೇ ಇರುತ್ತದೆ.

ಮಾಸ್‌ ಲೀಡರ್‌ ಖ್ಯಾತಿಯ ಸಿದ್ದರಾಮಯ್ಯ ಅವರು ಅಹಿಂದ ನಾಯಕರಾಗಿ ಗುರುತಿಸಿಕೊಂಡು, ರಾಜ್ಯದಲ್ಲಿ ಕಾಂಗ್ರೆಸ್‌ಗೆ ಹೊಸ ಶಕ್ತಿ ತಂದವರು. ಜನನಾಯಕರಾಗಿ ಗುರುತಿಸಿಕೊಂಡಿರುವ ಸಿದ್ದರಾಮಯ್ಯ ಅವರ ತೂಕ ಒಂದಾದರೆ ಪಕ್ಷದ ತೂಕ ಮತ್ತೊಂದು ರೀತಿ. ಕಾಂಗ್ರೆಸ್‌ ಎಂದರೆ ಸಿದ್ದರಾಮಯ್ಯ ಎನ್ನುವ ಮಟ್ಟಕ್ಕೆ ಜನಪ್ರಿಯ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹೊರಹೊಮ್ಮಿದ್ದಾರೆ. ಈಗಿನ 139 ಕಾಂಗ್ರೆಸ್‌ ಶಾಸಕರ ಪೈಕಿ ನೂರಕ್ಕೂ ಹೆಚ್ಚು ಶಾಸಕರು ಸಿದ್ದರಾಮಯ್ಯ ಜೊತೆಗಿದ್ದಾರೆ. ಕಾಂಗ್ರೆಸ್‌ನ ಸೈದ್ಧಾಂತಿಕ ವಿಚಾರಗಳಿಗೆ ಸಿದ್ದರಾಮಯ್ಯ ಎಂದೂ ರಾಜಿ ಮಾಡಿಕೊಂಡವರಲ್ಲ. ರಾಹುಲ್‌ ಗಾಂಧಿ ಅಪೇಕ್ಷಿಸುವ ಸೈದ್ಧಾಂತಿಕ ಗುಣಗಳು ಸಿದ್ದರಾಮಯ್ಯ ಅವರಲ್ಲಿವೆ. ಸಿದ್ದರಾಮಯ್ಯ ಅವರ ಘನತೆಗೆ ವಿರುದ್ಧವಾಗಿ ನಡೆದುಕೊಂಡರೆ ರಾಜ್ಯದಲ್ಲಿ ಕಾಂಗ್ರೆಸ್‌ ನೆಲಸಮ ಎಂಬುದರ ಎಚ್ಚರಿಕೆಯೂ ಹೈಕಮಾಂಡ್‌ಗೆ ಇದೆ. ಸಿದ್ದರಾಮಯ್ಯ ಸಹ ಎಲ್ಲೂ ಹೈಕಮಾಂಡ್‌ ವಿರುದ್ಧ ಗಾಂಭೀರ್ಯ ಮರೆತು ಮಾತನಾಡಿದವರಲ್ಲ. ಕಾಂಗ್ರೆಸ್‌ಗೆ ನಿಷ್ಠರಾಗಿಯೇ ನಡೆದುಕೊಂಡು ಬಂದಿದ್ದಕ್ಕೆ ಅವರ ಇಚ್ಛೆಗೆ ಅನುಸಾರವಾಗಿ ಹೈಕಮಾಂಡ್‌ ಸಾಕಷ್ಟು ಗೌರವ ಸಹ ನೀಡಿದೆ.

ಡಿಸಿಎಂ ಡಿ ಕೆ ಶಿವಕುಮಾರ್‌ ಸಹ ಅಲ್ಲಗಳೆಯುವ ವ್ಯಕ್ತಿಯಲ್ಲ. ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಅವರು ತಳಮಟ್ಟದಲ್ಲಿ ಕಾಂಗ್ರೆಸ್‌ ಕಟ್ಟಿದ ರೀತಿ ಅದರ ಫಲಿತಾಂಶ ಚುನಾವಣೆಯಲ್ಲಿ ಕಂಡಿದೆ. ಪಕ್ಷಕ್ಕೆ ಸಂಪನ್ಮೂಲ ಒದಗಿಸುವಲ್ಲಿ ಡಿ.ಕೆ ಶಿವಕುಮಾರ್‌ ಯಾವತ್ತೂ ಯೋಚನೆ ಮಾಡಿದವರಲ್ಲ. ಬೇರೆ ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್‌ ಸಂಕಷ್ಟದಲ್ಲಿದ್ದಾಗ ಕೂಡಲೇ ನೆರವಿಗೆ ಧಾವಿಸಿದ್ದಿದೆ. ರಾಜ್ಯದಲ್ಲಿ ಒಕ್ಕಲಿಗ ಸಮುದಾಯದಲ್ಲಿ ಮುಖ್ಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಎಷ್ಟೇ ದಾಳಗಳನ್ನು ಬಿಟ್ಟು ಬಿಜೆಪಿ ಹೆದರಿಸಿದಾಗಲೂ ಕಾಂಗ್ರೆಸ್‌ ಜೊತೆಗೆಯೇ ಹೆಜ್ಜೆ ಹಾಕಿದ್ದಾರೆ. ಸ್ವಲ್ಪ ಸೈದ್ಧಾಂತಿಕ ವಿಚಾರದಲ್ಲಿ ಬಿಜೆಪಿ ಪ್ರಣೀತ ಹಿಂದೂ ರಾಜಕಾರಣಕ್ಕೆ ಪ್ರಿಯವಾಗುವ ಹಾಗೇ ನಡೆದುಕೊಳ್ಳುತ್ತಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಸತೀಶ್‌ ಜಾರಕಿಹೊಳಿ ಸಿದ್ದರಾಮಯ್ಯ ಅವರ ಗರಡಿಯಲ್ಲಿ ಅರಳಿದ ಅಹಿಂದ ನಾಯಕ. ಸಿದ್ದರಾಮಯ್ಯ ಬಣದಲ್ಲಿ ಇವರೇ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಅತ್ತ ಲಿಂಗಾಯತ ಸಮುದಾಯ ಈಶ್ವರ ಖಂಡ್ರೆ ಸಹ ಕೆಪಿಸಿಸಿ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕೃಪೆಯೂ ಇವರ ಮೇಲಿದೆ. ಸೈದ್ದಾಂತಿಕವಾಗಿ ಸ್ಪಷ್ಟತೆ ಇರುವ ಈಶ್ವರ ಖಂಡ್ರೆ ಲಿಂಗಾಯತ ಸಮುದಾಯದಲ್ಲಿ ಎಲ್ಲರಿಗೂ ಬೇಕಾಗಿರುವ ನಾಯಕ. ಮುಂದಿನ ದಿನಗಳಲ್ಲಿ ಜಾತಿ ಸಮೀಕರಣವೇ ಮುಖ್ಯವಾದಾಗ ಸಿಎಂ ಸಿದ್ದರಾಮಯ್ಯ ಹೇಗೆ ಬಾಣ ಹೂಡುತ್ತಾರೆ? ಏನೆಲ್ಲಾ ನಿರ್ಧಾರಗಳು ಆಗುತ್ತವೆ ಎಂಬುದು ಸಹ ಕುತೂಹಲ ಮೂಡಿಸಿದೆ.

ಸತೀಶ್ 1

ಎಲ್ಲ ನಾಯಕರ ಶಕ್ತಿ ಮತ್ತು ದೌರ್ಬಲ್ಯಗಳ ಮಧ್ಯೆ ಎಲ್ಲ ರಾಷ್ಟ್ರೀಯ ಪಕ್ಷದಲ್ಲೂ ಬಣ ಬಡಿದಾಟ, ಅಧಿಕಾರಕ್ಕಾಗಿ ಕಿತ್ತಾಟ ಇದ್ದೇ ಇರುತ್ತದೆ ಎಂದು ರಾಹುಲ್‌ ಗಾಂಧಿ ರಾಜ್ಯದ ವಿಚಾರದಲ್ಲಿ ಮೌನವಾಗಿರಬಹುದು. ಆಯಾ ನಾಯಕರ ಶಕ್ತಿ ಮತ್ತು ದೌರ್ಬಲ್ಯ ಏನಿದೆ ಎಂಬುದನ್ನು ಹಂತ ಹಂತವಾಗಿಯೂ ಅರ್ಥ ಮಾಡಿಕೊಳ್ಳುತ್ತಿರಬಹುದು. ಒಟ್ಟಾರೆ ರಾಜಕಾರಣದಲ್ಲಿ ಬಣಗಳ ಹೊಂದಾಣಿಕೆ ಮತ್ತು ಅದರ ಅಗತ್ಯತೆಗಳ ಬಗ್ಗೆ ಸ್ಪಷ್ಟತೆ ಇದ್ದ ಕಾರಣಕ್ಕೆ ಡಿ.ಕೆ ಶಿವಕುಮಾರ್‌ ಅವರಿಗೂ ಉನ್ನತ ಹುದ್ದೆಗಳನ್ನು ರಾಹುಲ್‌ ಕಲ್ಪಿಸಿದ್ದಾರೆ. ಹೀಗಾಗಿ ಸದ್ಯಕ್ಕೆ ಸಿಎಂ ಸ್ಥಾನ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆಯ ರಿಸ್ಕ್‌ಗೆ ರಾಹುಲ್‌ ಗಾಂಧಿ ಕೈ ಹಾಕುವುದು ಬಹುತೇಕ ಕಡಿಮೆ.

ರಾಜ್ಯ ನಾಯಕರಿಗೆ ಅಧಿಕಾರ ಹಂಚಿಕೆಯ ತುರ್ತು ಇರುವಷ್ಟು ರಾಹುಲ್‌ ಗಾಂಧಿಗೆ ಇರಬೇಕಲ್ಲ? ತಾವೇ ಬಯಸಿದ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ನಡೆಯುತ್ತಿರಬೇಕಾದರೆ ಸುಖಾಸುಮ್ಮನೇ ಅಧಿಕಾರ ಹಂಚಿಕೆಯ ಹುತ್ತಕ್ಕೆ ಕೈ ಹಾಕುವ ಕಾರಣ ರಾಹುಲ್‌ ಗಾಂಧಿಗೂ ಬೇಕಲ್ವಾ? ಅಂತಹ ಪರಿಸ್ಥಿತಿ ತಾನಾಗಿಯೇ ಸೃಷ್ಟಿಯಾದಾಗ ರಾಹುಲ್‌ ಗಾಂಧಿ ಆಗ ಅಖಾಡಕ್ಕೆ ಇಳಿಯಬಹುದು. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ವಿಚಾರದಲ್ಲೂ ರಾಹುಲ್‌ ಗಾಂಧಿ ಇದೇ ನಿಲುವು ಇರಬಹುದು.

ಇನ್ನು ಪರಿಷತ್‌ನಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳ ಭರ್ತಿ ಮತ್ತು ಸಂಪುಟ ಪುನರ್‌ ರಚನೆಗೆ ರಾಹುಲ್‌ ಗಾಂಧಿ ಸಾಮಾನ್ಯವಾಗಿ ಅಸ್ತು ಅನ್ನಬಹುದು. ಒಂದಿಷ್ಟು ಲೆಕ್ಕಾಚಾರದ ಮೇಲೆ ಸರ್ಕಾರ ಎರಡು ವರ್ಷ ಅವಧಿ ಪೂರ್ಣಗೊಳಿಸಿದ ಮೇಲೆ ಸಚಿವರ ಕಾರ್ಯವೈಖರಿ ಗಮನದಲ್ಲಿಟ್ಟುಕೊಂಡು ಆ ಎಲ್ಲ ಬದಲಾವಣೆಗಳು ಆಗಬಹುದು. ಪಕ್ಷಕ್ಕೆ ಮುಜುಗರ ತಂದಿಡುವ ಹೇಳಿಕೆಗಳನ್ನು ಕೊಡುವ ಕೆ.ಎನ್‌ ರಾಜಣ್ಣ ಅವರ ತಲೆದಂಡ ಆಗುವ ಸಾಧ್ಯತೆ ಹೆಚ್ಚಿದೆ. ಈ ಮೂಲಕ ನಾಲಿಗೆ ಹರಿಬಿಡುವ ಬೇರೆ ನಾಯಕರಿಗೂ ಎಚ್ಚರಿಕೆ ಸಂದೇಶ ರವಾನಿಸಬಹುದು.

ರಾಹುಲ್‌ ಗಾಂಧಿ ಏನಾದರೂ ಬಣ ಬಡಿದಾಟದ ಗೊಂದಲಕ್ಕೆ ಸಿಲುಕಿ ಎಡವಿದರೆ ಕಾಂಗ್ರೆಸ್‌ಗೆ ಹೈಕಮಾಂಡ್‌ ಇರುವ ಬದಲು ಇಲ್ಲಿಯ ನಾಯಕರೇ ಹೈಕಮಾಂಡ್‌ ಆಗಿಬಿಡುವ ಸಾಧ್ಯತೆ ಹೆಚ್ಚಿದೆ. ಆ ಮನಸ್ಥಿತಿಯ ನಾಯಕರೂ ಇಲ್ಲಿ ತುಂಬಿ ತುಳುಕುತ್ತಿದ್ದಾರೆ. ಕೆ ಎನ್‌ ರಾಜಣ್ಣ ಅವರಂತಹ ನಾಯಕರ ಮೂಲಕ ಅದರ ಪ್ರದರ್ಶನವೂ ಆಗಿದೆ. ಹೀಗಾಗಿ ಸಾಧ್ಯವಾದಷ್ಟು ಜಾಣತನದಿಂದ ರಾಹುಲ್‌ ಹೆಜ್ಜೆ ಇಡುತ್ತಿದ್ದಾರೆ. ಇಲ್ಲಿಯ ನಾಯಕರು ತರುವ ದೂರುಗಳಿಗೆ ಕಿವಿಯಾಗಿ, ಅವರ ವಾದ ಆಲಿಸುತ್ತಿದ್ದಾರೆ. ಒಳಗೆ ಚಿಂತನ-ಮಂಥನ ನಡೆಸುತ್ತಿದ್ದಾರೆ.

ಮುಂದಿನ ಮೂರು ವರ್ಷ ಸುಭದ್ರ ಸರ್ಕಾರ ಇರಬೇಕು ಎಂಬುದಷ್ಟೇ ರಾಹುಲ್‌ ಗಾಂಧಿಯ ಸದ್ಯದ ಬಯಕೆ. ಬದಲಾದ ಸನ್ನಿವೇಶದಲ್ಲಿ ಅಧಿಕಾರ ಹಂಚಿಕೆಯ ಬಗ್ಗೆ ಅನಿವಾರ್ಯತೆ ಸೃಷ್ಟಿಯಾದಾಗ ಆಗ ಸಿಎಂ ಸಿದ್ದರಾಮಯ್ಯ ಅವರ ಮುಂದಿನ ಪಾತ್ರದ ನಿರ್ಧಾರದ ಮೇಲೆ ಉಳಿದ ಎಲ್ಲವೂ ನಿರ್ಧಾರವಾಗಲಿದೆ. ದೆಹಲಿ ಭೇಟಿಯಲ್ಲಿ ಸಿದ್ದರಾಮಯ್ಯ ಅವರೇ ಆಗಲಿ, ಡಿ ಕೆ ಶಿವಕುಮಾರ್‌, ಸತೀಶ್‌ ಜಾರಕಿಹೊಳಿಯೇ ಆಗಲಿ ಯಾರೂ ಸೋತಿಲ್ಲ, ಜೊತೆಗೆ ಗೆದ್ದು ಸಹ ಬೀಗಿಲ್ಲ. ಮುಂದಿನ ಬದಲಾವಣೆಗಳಿಗೆ ಹೈಕೈಮಾಂಡ್‌ ಮುಂದೆ ಒಂದಿಷ್ಟು ದಾವೆ ಸಲ್ಲಿಸಿದ್ದಾರೆ ಅಷ್ಟೇ.

ಈ ವರ್ಷದ ಕೊನೆಯಲ್ಲಿ ಬರಲಿರುವ ಬಿಹಾರದ ಚುನಾವಣೆ ಸೇರಿದಂತೆ ಮುಂದಿನ ವರ್ಷಗಳಲ್ಲಿ ಎದುರಾಗಲಿರುವ ಕೇರಳ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶದ ಚುನಾವಣೆಗಳನ್ನು ಸಹ ಕಾಂಗ್ರೆಸ್‌ ಹೈಕಮಾಂಡ್ ಸಮರ್ಥವಾಗಿ ಎದುರಿಸಬೇಕಿದೆ. ಇದು ಸಾಧ್ಯವಾಗಬೇಕೆಂದರೆ ಡಿ.ಕೆ ಶಿವಕುಮಾರ್‌ ಅವರಂತಹ ಸಂಪನ್ಮೂಲ ನಿರ್ವಹಣೆ, ಚುನಾವಣಾ ನಿರ್ವಹಣೆಗಳನ್ನು ಮಾಡುವ ನಾಯಕರ ಅಗತ್ಯವೂ ಅವರಿಗಿದೆ. ಮಾದರಿ ರಾಜ್ಯವೊಂದನ್ನು ರಾಷ್ಟ್ರಮಟ್ಟದಲ್ಲಿ ಮುಂದಿಡಲು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಸುಭದ್ರ ಸರ್ಕಾರ ಐದು ವರ್ಷ ಪೂರೈಸಿಕೊಳ್ಳುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿಯೂ ರಾಹುಲ್‌ ಮುಂದಿದೆ. ಇದೊಂದು ತರ ಎಲ್ಲವನ್ನೂ ಸಾಧಿಸುವ ಹಗ್ಗದ ಮೇಲಿನ ಸಮತೋಲಿತ ನಡಿಗೆ. ಬಹುಶಃ ರಾಹುಲ್‌ ಗಾಂಧಿ ಮಾರ್ಗ ಸದ್ಯಕ್ಕೆ ಇದೇ ಆಗಿದೆ.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X