ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಿರುವುದರಿಂದ ಸರ್ಕಾರಿ ನೌಕರರ ಅನುಕೂಲಕ್ಕಾಗಿ ಕಚೇರಿ ಸಮಯ ಬದಲಾವಣೆ ಮಾಡಿ ಸರ್ಕಾರ ಆದೇಶಿಸಿದೆ. ಆದರೆ ಜಿಲ್ಲಾ ಕೇಂದ್ರದ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ನೌಕರರು ಮಾತ್ರ ಎಂದಿನಂತೆ ಕೆಲಸಕ್ಕೆ ಹಾಜರಾಗಿದ್ದರು ಎನ್ನಲಾಗಿದೆ.
ಬದಲಾವಣೆ ಪ್ರಕಾರ ಏಪ್ರಿಲ್ ಹಾಗೂ ಮೇ ತಿಂಗಳುಗಳ ಮಟ್ಟಿಗೆ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1.30ರ ತನಕ ಮಾತ್ರ ಕಚೇರಿ ಸಮಯ ನಿಗದಿಗೊಳಿಸಲಾಗಿದೆ. ಈ ಕುರಿತು ಬುಧವಾರ ಮಧ್ಯಾಹ್ನ ಸರ್ಕಾರದ ಆದೇಶ ಹೊರಬಿದ್ದಿದ್ದರೂ ಏಪ್ರಿಲ್ 3ರಿಂದ ಜಾರಿಗೆ ಬಂದಿದೆ.
ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಹಲವು ಇಲಾಖೆಗಳ ಕಚೇರಿಗಳಲ್ಲಿ ಪೂರ್ಣ ಪ್ರಮಾಣದ ಸಿಬ್ಬಂದಿ ಇಲ್ಲದಿರುವುದು ಕಂಡುಬಂದಿದೆ. ಕೆಲವೆಡೆ ಬದಲಾದ ಸಮಯಕ್ಕೆ ಸರಿಯಾಗಿ ಕಚೇರಿ ಬಾಗಿಲನ್ನೂ ತೆರೆಯದಿರುವುದರ ಬಗ್ಗೆ ವರದಿಯಾಗಿದೆ.
ವಿಚಾರಿಸಲಾಗಿ, ಕೆಲವರು ಕ್ಷೇತ್ರ ಕೆಲಸದ ನಿಮಿತ್ತ ಹೋಗಿದ್ದಾರೆ ಮತ್ತೆ ಕೆಲವರು ರಾತ್ರಿ ಸಭೆ ಮುಗಿಸಿ ಹೋಗುವುದು ತಡವಾಗಿದೆ ಅದಕ್ಕಾಗಿ ತಡವಾಗಿ ಬರುತ್ತಾರೆ ಎಂದು ಸಬೂಬು ಹೇಳಿರುತ್ತಾರೆ. ಕೆಲವೆಡೆ ಕಚೇರಿ ಚಾಲೂ ಆಗಿದ್ದರೂ ಸಿಬ್ಬಂದಿಗಳ ಕೊರತೆ ಎದ್ದು ಕಂಡಿದೆ.
ಇದನ್ನೂ ಓದಿ: ಕೊಪ್ಪಳ | ಸೇವಾ ನೂನ್ಯತೆ; ಓಲಾ ಎಲೆಕ್ಟ್ರಿಕ್ ವಾಹನ ಕಂಪನಿಗೆ ದಂಡ
ಎಲ್ಲ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಪ್ರೌಢಶಾಲೆಗಳು ಹಾಗೂ ಶಿಕ್ಷಣ ಇಲಾಖೆ ಅಧೀನ ಕಚೇರಿಗಳ ವೇಳಾಪಟ್ಟಿಯಲ್ಲಿಯೂ ಬದಲಾವಣೆ ಮಾಡಲಾಗಿದೆ. ಏಪ್ರಿಲ್ ಹಾಗೂ ಮೇ ನಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1.30ರ ತನಕ ಸಮಯ ಬದಲಾವಣೆ ಮಾಡಲಾಗಿದೆ.