- ₹70 ಲಕ್ಷ ಮೌಲ್ಯದ ನಿವೇಶನ ಖರೀದಿಸಿದ್ದ ಆನಂದ್
- ಆನಂದ್ ಖರೀದಿಸಿದ್ದ ನಿವೇಶನ ಬೇರೆಯವರ ಪಾಲು
ಸ್ಯಾಂಡಲ್‌ವುಡ್ ನಟ, ನಿರ್ದೇಶಕ ಮಾಸ್ಟರ್ ಆನಂದ್ ಖಾಸಗಿ ಕಂಪನಿಯಿಂದ ವಂಚನೆಗೊಳಗಾಗಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿ ನಿವೇಶನ ಖರೀದಿಸಲು ಪಾವತಿಸಿದ್ದ ಮುಂಗಡ ಹಣವನ್ನು ವಾಪಸ್ ನೀಡದೆ ಕಂಪನಿ ವಂಚಿಸಿದೆ ಎಂದು ನಟ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ವಂಚನೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ಮಲ್ಟಿ ಲೀಪ್ ವೆಂಚರ್ ಹೆಸರಿನ ಕಂಪನಿ ಬೆಂಗಳೂರಿನ ಹೊರವಲಯದಲ್ಲಿರುವ ಕೊಮಘಟ್ಟ ಸಮೀಪದ ರಾಮಸಂದ್ರದಲ್ಲಿ ಅಭಿವೃದ್ಧಿ ಪಡಿಸಿದ್ದ 2 ಸಾವಿರ ಅಡಿ ವಿಸ್ತೀರ್ಣದ ನಿವೇಶನವನ್ನು ₹70 ಲಕ್ಷ ಮೊತ್ತಕ್ಕೆ ಖರೀದಿ ಮಾಡಿದ್ದರು. ₹18.50 ಲಕ್ಷವನ್ನು ಮುಂಗಡವಾಗಿ ಪಾವತಿಸಿದ್ದ ಆನಂದ್, ಉಳಿದ ಮೊತ್ತವನ್ನು ಕಂಪನಿಯ ಸಲಹೆಯಂತೆ ಕಂತಿನ ಪ್ರಕಾರ ಪಾವತಿಸಲು ಒಪ್ಪಿಕೊಂಡಿದ್ದರು ಎನ್ನಲಾಗಿದೆ.
ಮುಂಗಡ ಹಣ ಪಡೆದ ಕಂಪನಿಯವರು ಆನಂದ್ ಮತ್ತು ಅವರ ಪತ್ನಿ ಯಶಸ್ವಿನಿ ಹೆಸರಲ್ಲಿ ಖರೀದಿ ಕರಾರು ಪತ್ರವನ್ನು ಕೂಡ ನೀಡಿದ್ದರು. ಆದರೆ, ಸ್ವಲ್ಪ ದಿನಗಳ ಬಳಿಕ ಆನಂದ್ ಅವರಿಗೆ ನೀಡಲಾಗಿದ್ದ ನಿವೇಶನವನ್ನು ಅವರ ಗಮನಕ್ಕೆ ತರದೇ ಕಂಪನಿಯವರು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. 2020ರ ಸೆಪ್ಟೆಂಬರ್‌ನಲ್ಲೇ ಈ ಘಟನೆ ನಡೆದಿದೆ.
ಈ ಸುದ್ದಿ ಓದಿದ್ದೀರಾ? 19ನೇ ಸಿನಿಮಾ ಘೋಷಣೆಗೆ ಸಜ್ಜಾದ ಯಶ್
ತಾವು ಖರೀದಿಸಿದ ನಿವೇಶನವನ್ನು ಹೇಳದೆ ಕೇಳದೆ ಬೇರೆಯವರಿಗೆ ಮಾರಾಟ ಮಾಡಿದ್ದನ್ನು ಆನಂದ್ ದಂಪತಿ ಆಗಲೇ ಪ್ರಶ್ನಿಸಿದ್ದಾರೆ. ಅದಕ್ಕೆ ನೆಪ ಹೇಳಿದ್ದ ಕಂಪನಿಯವರು ಮುಂಗಡ ಹಣ ಹಿಂತಿರುಗಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಎರಡ್ಮೂರು ವರ್ಷಗಳು ಕಳೆದರೂ ₹18.50 ಲಕ್ಷ ಹಣದಲ್ಲಿ ಒಂದು ರೂಪಾಯಿಯನ್ನು ಕೂಡ ಹಿಂತಿರುಗಿಸಿಲ್ಲ. ಹೀಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ವಂಚನೆ ಆರೋಪದಡಿ ದೂರು ದಾಖಲಿಸಿದ್ದು, ದೂರಿನನ್ವಯ ಕಂಪನಿ ವಿರುದ್ಧ ಪ್ರಕರಣ ಕೂಡ ದಾಖಲಾಗಿದೆ.