2021ರ ವರದಿಯ ಪ್ರಕಾರ ಭಾರತದಲ್ಲಿ ಆತ್ಮಹತ್ಯೆಗಳು ಜರುಗುವ ಮೊದಲ ಐದು ರಾಜ್ಯಗಳಲ್ಲಿ ಕರ್ನಾಟಕವೂ ಸೇರಿದೆ. 2022ರ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ(NCRB) ಪ್ರಕಾರ ಆತ್ಮಹತ್ಯೆ ಪ್ರಕರಣದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿತ್ತು. ಬೆಂಗಳೂರಿನಲ್ಲಿ ದಿನಕ್ಕೆ ಸರಾಸರಿ ಆರು ಮಂದಿ ಆತ್ಮಹತ್ಯೆಗೆ ಶರಣಾಗುತ್ತಿದ್ದರು. ಈಗ ಇದು ಇನ್ನೂ ಹೆಚ್ಚಾಗಿರುವ ಸಾಧ್ಯತೆಯಿದೆ.
ರಾಜ್ಯದಲ್ಲಿ ಕಳೆದ ಒಂದು ತಿಂಗಳಿನಿಂದ ಆತ್ಮಹತ್ಯೆಗಳದೇ ಸುದ್ದಿ. ಕೌಟುಂಬಿಕ ಜಗಳ, ಆರ್ಥಿಕ ಸಮಸ್ಯೆ, ಪ್ರೇಮವೈಫಲ್ಯ, ಕೆಲಸದ ಒತ್ತಡ, ಸೈಬರ್ ವಂಚನೆ, ರಾಜಕೀಯ ಹೀಗೆ ನಾನಾ ಕಾರಣಗಳಿಗಾಗಿ ಆತ್ಮಹತ್ಯೆಗೆ ಶರಣಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕೆಲ ದಿನಗಳಿಂದ ಹೆಚ್ಚು ವರದಿಯಾಗುತ್ತಿರುವ ಆಘಾತಕಾರಿ ಸುದ್ದಿಯೆಂದರೆ, ಕುಟುಂಬ ಸದಸ್ಯರನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು. ಬಹುತೇಕ ಪ್ರಕರಣಗಳಲ್ಲಿ ಕೌಟುಂಬಿಕ ಕಲಹವೇ ಕೃತ್ಯಕ್ಕೆ ಕಾರಣವಾಗಿದೆ. ತಾನೂ ಸಾಯುವುದಲ್ಲದೇ ಇಡೀ ಕುಟುಂಬ ಸದಸ್ಯರನ್ನು ಕೊಂದು ಮುಗಿಸುವ ಅಮಾನುಷ ಪ್ರವೃತ್ತಿ ಹೆಚ್ಚುತ್ತಿದೆ.
ಕಲಬುರ್ಗಿಯ ಜೆಸ್ಕಾಂ ಹಿರಿಯ ಲೆಕ್ಕಾಧಿಕಾರಿ 45 ವರ್ಷ ವಯಸ್ಸಿನ ಸಂತೋಷ್ ಕೊರಳಿ ಅವರು ಕಳೆದ ಬುಧವಾರ ಕೆಲಸ ಮುಗಿಸಿ ಮನೆಗೆ ಬಂದವರು ಪತ್ನಿ, 9 ವರ್ಷದ ಮಗ ಮತ್ತು 3 ತಿಂಗಳ ಹಸುಗೂಸಿನ ಕತ್ತು ಹಿಸುಕಿ ಕೊಲೆ ಮಾಡಿ ತಾನೂ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇವಲ ಹತ್ತು ವರ್ಷಗಳ ಹಿಂದೆ ಮದುವೆಯಾದ ಜೋಡಿ, ಸಂಜೆ ಇಬ್ಬರ ಮಧ್ಯೆ ಜಗಳ ಆಗಿದೆ. ಅಷ್ಟಕ್ಕೇ ಇಡೀ ಕುಟುಂಬದ ಬದುಕು ಮುಕ್ತಾಯಗೊಂಡಿದೆ. ದೊಡ್ಡವರ ಜಗಳಕ್ಕೆ ಜಗತ್ತಿನ ಅರಿವೇ ಇಲ್ಲದ ಪುಟ್ಬ ಮಕ್ಕಳ ಬಲಿ ಪಡೆಯಲಾಗಿದೆ. ಯಾವ ತಪ್ಪೂ ಮಾಡದ, ತಮ್ಮ ಸಮಸ್ಯೆಗೆ ಕಾರಣರಾಗದ ಮತ್ತು ತಾವೇ ಹೆತ್ತ ಮಕ್ಕಳಾದರೂ ಅವರನ್ನು ಕೊಲ್ಲುವಷ್ಟು ಕ್ರೌರ್ಯವನ್ನು ತುಂಬಿಕೊಳ್ಳುವುದು ನಿಜಕ್ಕೂ ನಾಗರಿಕ ಸಮಾಜವನ್ನು ತಲ್ಲಣಗೊಳಿಸುವ ಸಂಗತಿ. ಇಡೀ ಸಮಾಜ ಈ ಬಗ್ಗೆ ಚಿಂತಿಸಬೇಕಿದೆ.
ಎರಡು ದಿನಗಳ ಹಿಂದೆ ಚಿಕ್ಕಮಗಳೂರಿನ ವ್ಯಕ್ತಿಯೊಬ್ಬ “ಪತ್ನಿ ಮನೆ ತೊರೆದಿದ್ದಾಳೆ, ಶಾಲೆಯಲ್ಲಿ ಸ್ನೇಹಿತರು ಅಮ್ಮ ಎಲ್ಲಿ ಎಂದು ಮಗಳನ್ನು ಕೇಳುತ್ತಿದ್ದಾರೆ” ಎಂದು ಮನನೊಂದು ಸ್ವಂತ ಮಗಳು, ಅತ್ತೆ, ನಾದಿನಿಯನ್ನು ಗುಂಡಿಟ್ಟು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾದಿನಿಯ ಗಂಡ ಕೂಡ ಗಾಯಗೊಂಡಿದ್ದಾರೆ. ತಾನೂ ಸಾಯುವುದಲ್ಲದೇ ಮಗಳನ್ನೂ ಪತ್ನಿಯ ಕುಟುಂಬವನ್ನೂ ಮುಗಿಸುವ ಕ್ರೂರ ಮನಸ್ಥಿತಿಗೆ ಏನು ಕಾರಣ?!
ಸೈಬರ್ ವಂಚಕರು ವೀಡಿಯೊ ಕರೆಗಳ ಮೂಲಕ ನಡೆಸಿದ ಮಾನಸಿಕ ಹಿಂಸೆಯಿಂದಾಗಿ ಖಾನಾಪುರ ಬಳಿ ವೃದ್ಧ ದಂಪತಿ ಡಯಾಗೊ ಸಂತಾನ್ ನಜರೆತ್ (82) ಮತ್ತು ಫ್ಲೇವಿಯಾನಾ ನಜರೆತ್ (79) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದಂಪತಿ ಸ್ವಂತ ಹಣದಲ್ಲಿ ಸಮಾಜಸೇವೆ ಮಾಡುತ್ತಿದ್ದವರು. ಸೈಬರ್ ವಂಚಕರು ಅದಾಗಲೇ 50 ಲಕ್ಷ ರೂ. ಸುಲಿಗೆ ಮಾಡಿ ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದರಂತೆ. ಅನ್ಯಾಯವಾಗಿ ಬದುಕು ಅಂತ್ಯಗೊಂಡಿದ್ದು ಬರೇ ಇಬ್ಬರು ವೃದ್ಧರದ್ದಲ್ಲ, ಇಬ್ಬರು ಸಮಾಜ ಸೇವಕರದ್ದು.
ಕಳೆದ ರಾತ್ರಿ ತುಮಕೂರಿನ ಗುಬ್ಬಿ ತಾಲ್ಲೂಕಿನಲ್ಲಿ ಇಬ್ಬರು ಅಂಗವಿಕಲ ಮಕ್ಕಳನ್ನು ಹತ್ಯೆಗೈದು ತಾಯಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. 23 ವರ್ಷ ವಯಸ್ಸಿನ ಮಗಳು ಹದಿನಾಲ್ಕು ವರ್ಷ ವಯಸ್ಸಿನ ಮಗನನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವ ಆಕೆಯ ಪರಿಸ್ಥಿತಿ ಎಂಥದ್ದು ಎಂಬುದು ಆಕೆಗಲ್ಲದೇ ಬೇರೆಯವರಿಗೆ ಅರಿವಿರಲು ಸಾಧ್ಯವಿಲ್ಲ. ಇಳಿ ವಯಸ್ಸಿಗೆ ಜಾರುತ್ತಿರುವ ದಂಪತಿ ತಮ್ಮ ಸಹಾಯವಿಲ್ಲದೇ ಬದುಕಲಾರದ ಇಬ್ಬರು ಏರು ವಯಸ್ಸಿನ ಮಕ್ಕಳನ್ನು ಸಾಕುವ ದೈಹಿಕ ಶ್ರಮ, ಮಾನಸಿಕ ಯಾತನೆ, ಆರ್ಥಿಕ ಕಷ್ಟ ಬದುಕನ್ನು ಕೊನೆಗೊಳಿಸುವ ಪರಿಸ್ಥಿತಿಗೆ ದೂಡಿದೆ. ಇದು ನಮ್ಮ ಸರ್ಕಾರಗಳು ಅಂಗವಿಕಲರ ಬಗ್ಗೆ ಎಷ್ಟು ಜವಾಬ್ದಾರಿ ಹೊಂದಿವೆ ಎಂಬುದನ್ನು ಪರಾಮರ್ಶೆಗೆ ಒಳಪಡಿಸಬೇಕಾದ ಸಂದರ್ಭ. ಬಡತನವೇ ಒಂದು ಶಾಪ, ಅದರ ಜೊತೆಗೆ ಹುಟ್ಟುವ ಮಕ್ಕಳು ಅಂಗವಿಕಲರಾದರೆ ಆ ಕುಟುಂಬದ ಪರಿಸ್ಥಿತಿ ಊಹಿಸಲು ಸಾಧ್ಯವಿಲ್ಲ. ಇಂತಹ ಮಕ್ಕಳ ಪೋಷಣೆಯ ಜವಾಬ್ದಾರಿಯನ್ನು ಸರ್ಕಾರಗಳು ಹೊತ್ತುಕೊಳ್ಳುವ ಅಗತ್ಯವಿದೆ. ಅದು ಎಂದಿಗೆ ಆಗುತ್ತೋ!
ಮಡಿಕೇರಿಯ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಎಂಬವರು ಬೆಂಗಳೂರಿನ ತಮ್ಮ ಮನೆಯಲ್ಲಿ ಕಳೆದ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಾಸಕರ ವಿರುದ್ಧ ಮಾನಹಾನಿಕರ ಪೋಸ್ಟ್ ಹಂಚಿದ ಆರೋಪದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನಲ್ಲಿ ಬಿಡುಗಡೆಯಾಗಿದ್ದರು. ಅವಮಾನಕ್ಕೆ ಅಂಜಿ ಸಾಯುತ್ತಿರುವುದಾಗಿ ಮರಣ ಪತ್ರ ಬರೆದಿಟ್ಟಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವವರು, ಮುಖಂಡರಾಗಿ ಬೆಳೆಯಬೇಕಿರುವ ಯುವಕರು ರಾಜಕಾರಣದ ನಾಡಿ ಮಿಡಿತವನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ರಾಜಕೀಯ ಎಂದರೆ ದಿನ ದಿನವೂ ಸವಾಲು, ಅಪಮಾನ, ಕೇಸುಗಳಿಗೆ ಎದುರಾಗುವ ಸಂದರ್ಭ ಬಂದೇ ಬರುತ್ತದೆ. ಅದಕ್ಕೆಲ್ಲ ಅಂಜಿ ಬದುಕು ಅಂತ್ಯಗೊಳಿಸಿಕೊಳ್ಳುವಷ್ಟು ದುರ್ಬಲ ಮನಸ್ಸಿನವರಾಗಬಾರದು. ಇದು ಇನ್ನುಳಿದ ಯುವಕರಿಗೆ ಪಾಠವಾಗಬೇಕು.
ಪರೀಕ್ಷೆಯಲ್ಲಿ ಫೇಲ್ ಅಥವಾ ಫೇಲ್ ಆಗುವ ಭಯ, ಪ್ರೇಮ ವೈಫಲ್ಯ, ಹೆತ್ತವರ ಬುದ್ದಿ ಮಾತು ಮುಂತಾದ ಚಿಕ್ಕಪುಟ್ಟ ಕಾರಣಗಳಿಗಾಗಿ ಆತ್ಮಹತ್ಯೆಯ ಮೂಲಕ ಬದುಕು ಅಂತ್ಯ ಮಾಡಿಕೊಳ್ಳುವ ಹದಿ ಹರೆಯದ ಸಮೂಹ ಒಂದೆಡೆಯಾದರೆ, ಶಿಕ್ಷಣ-ಉದ್ಯೋಗ-ಆರ್ಥಿಕ ಬಲ ಎಲ್ಲವೂ ಇದ್ದು ಕೆಲಸದ ಒತ್ತಡ, ಸಹೋದ್ಯೋಗಿಗಳ ಕಿರುಕುಳ, ಗಂಡ ಹೆಂಡತಿ ಮಧ್ಯೆ ಹೊಂದಾಣಿಕೆ ಇಲ್ಲದಿರುವುದು ಹೀಗೆ ಎಲ್ಲದಕ್ಕೂ ಆತ್ಮಹತ್ಯೆಯ ಪರಿಹಾರ ಕಂಡುಕೊಳ್ಳುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ.
ಮಾಹಿತಿ ತಂತ್ರಜ್ಞಾನದ ಆವಿಷ್ಕಾರಗಳ ವೇಗದ ಜೊತೆಗೆ ಜಗತ್ತು, ಜಗತ್ತಿನ ಜೊತೆಗೆ ಜನರ ವೈಯಕ್ತಿಕ ಬದುಕು ಎಲ್ಲವೂ ವೇಗ ಪಡೆದಿದೆ. ಜನರ ಆಕಾಂಕ್ಷೆಗಳು, ಗುರಿ ಆಕಾಶದೆತ್ತರವಿದೆ. ಆದರೆ, ಅದಕ್ಕೆ ಪೂರಕವಾಗಿ ಮಾನಸಿಕ ಸ್ಥೈರ್ಯ, ಸವಾಲುಗಳನ್ನು ಎದುರಿಸುವ ಛಲ ಮಾತ್ರ ಇಲ್ಲವಾಗಿದೆ. ಪುಟ್ಟ ಕುಟುಂಬಗಳಲ್ಲಿ, ಹಿರಿಯರಿಲ್ಲದ ಮನೆಗಳಲ್ಲಿ ಮಾರ್ಗದರ್ಶನದ ಕೊರತೆಯೂ ಇದೆ.
ಕೊಲೆ, ಆತ್ಮಹತ್ಯೆಯನ್ನು ನಾಗರಿಕ ಸಮಾಜ, ಸರ್ಕಾರಗಳು ʼಸಾಮಾಜಿಕ ಪಿಡುಗುʼ ಎಂದು ನೋಡಬೇಕಿದೆ. ಹದಿಹರೆಯದ ಮಕ್ಕಳಿಗೆ ಧೈರ್ಯ ತುಂಬುವ ಕೆಲಸ ಮನೆ, ಶಾಲೆ, ಕಾಲೇಜು, ಹಾಸ್ಟೆಲ್‌ಗಳಲ್ಲಿ ನಿರಂತರವಾಗಿ ಆಗಬೇಕಿದೆ. ದುಡಿಯುವ ಸ್ಥಳಗಳಲ್ಲಿ ಒತ್ತಡ ರಹಿತ ವಾತಾವರಣ ನಿರ್ಮಾಣ ಮಾಡುವುದು ಉದ್ಯೋಗದಾತರ ಜವಾಬ್ದಾರಿ. ಕಚೇರಿಗಳಲ್ಲಿ ಮೇಲಧಿಕಾರಿ, ಕೆಳ ಹಂತದ ನೌಕರರ ನಡುವಿನ ಅಹಂ, ಅಧಿಕಾರದ ಗೋಡೆ ಕೆಡಹುವ ಕೆಲಸ ಸರ್ಕಾರಗಳು ಮಾಡಬೇಕಿದೆ. ಕಚೇರಿಯ ಒತ್ತಡ ಮನೆಯವರೆಗೂ ಬಂದು ಅದು ವೈಯಕ್ತಿಕ ಬದುಕಿನ ಮೇಲೆ ಪರಿಣಾಮ ಬೀರಿ ಅನೇಕ ಕುಟುಂಬಗಳ ಸಾವಿನಲ್ಲಿ ಅಂತ್ಯಗೊಳ್ಳುತ್ತಿದೆ ಎಂಬುದನ್ನು ಸಮಾಜ, ಸರ್ಕಾರಗಳು ಅರ್ಥ ಮಾಡಿಕೊಳ್ಳಬೇಕಿದೆ.
ಆಪ್ತ ಸಮಾಲೋಚನೆಯ ವಾತಾವರಣ ಶಿಕ್ಷಣ ಸಂಸ್ಥೆಗಳು, ಕುಟುಂಬ, ಕಚೇರಿ, ಸಾರ್ವಜನಿಕ ಸ್ಥಳಗಳಲ್ಲಿಯೂ ಸಿಗುವಂತಾದರೆ ಕ್ಷುಲ್ಲಕ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರಲಾರದು. ಸವಾಲುಗಳನ್ನು ಎದುರಿಸುವ, ಪರಿಹಾರ ಕಂಡುಕೊಳ್ಳುವ ಕಡೆಗೆ ಯುವಜನರು ಯೋಚಿಸಬೇಕಿದೆ. ತಮ್ಮ ಅಸಹಾಯಕತೆಗೆ, ಸಮಸ್ಯೆಗೆ ಇಡೀ ಕುಟುಂಬವನ್ನು ನಾಶಪಡಿಸುವ ಹಕ್ಕು ಯಾರಿಗೂ ಇಲ್ಲ. ಇಂತಹ ಅತೀವ ಅಸಹಾಯಕ ಪರಿಸ್ಥಿತಿಗೆ ಅವರನ್ನು ದೂಡಿದ ಸಮಾಜ ಮತ್ತು ಸರ್ಕಾರಗಳೇ ಈ ದುರಂತದ ಸಂಪೂರ್ಣ ಹೊಣೆಯನ್ನು ಹೊರಬೇಕಿದೆ.
ಭಾರತದ ಆತ್ಮಹತ್ಯೆ ದರ ಪ್ರತಿ ಲಕ್ಷ ಮಂದಿಗೆ 14 ಮಂದಿ. ಜಾಗತಿಕ ಸರಾಸರಿ ದರಕ್ಕಿಂತ (ಪ್ರತಿ ಲಕ್ಷ ಮಂದಿಗೆ ಒಂಬತ್ತು ಮಂದಿ) ಅತ್ಯಧಿಕ. ಭಾರತವನ್ನು ‘ಜಗತ್ತಿನ ಆತ್ಮಹತ್ಯಾ ರಾಜಧಾನಿ’ ಎಂದು ‘ದಿ ಲ್ಯಾನ್ಸೆಟ್’ ಅಧ್ಯಯನ ಬಣ್ಣಿಸಿದೆ. ಅಪರಾಧ ದಾಖಲೆಗಳ ರಾಷ್ಟ್ರೀಯ ಬ್ಯೂರೋದ (ಎನ್.ಸಿ.ಆರ್.ಬಿ) 2021ರ ವರದಿಯ ಪ್ರಕಾರ ಭಾರತದಲ್ಲಿ ಆತ್ಮಹತ್ಯೆಗಳು ಜರುಗುವ ಮೊದಲ ಐದು ರಾಜ್ಯಗಳಲ್ಲಿ ಕರ್ನಾಟಕವೂ ಸೇರಿದೆ.
2022ರ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ(NCRB) ಪ್ರಕಾರ ಆತ್ಮಹತ್ಯೆ ಪ್ರಕರಣದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿತ್ತು. ಬೆಂಗಳೂರಿನಲ್ಲಿ ದಿನಕ್ಕೆ ಸರಾಸರಿ ಆರು ಮಂದಿ ಆತ್ಮಹತ್ಯೆಗೆ ಶರಣಾಗುತ್ತಿದ್ದರು. ಈಗ ಇದು ಇನ್ನೂ ಹೆಚ್ಚಾಗಿರುವ ಸಾಧ್ಯತೆಯಿದೆ. ಮಾನಸಿಕ ಆರೋಗ್ಯ ಕಾಳಜಿ, ಆರ್ಥಿಕ ನೆರವು ಹಾಗೂ ಅಸಹಾಯಕ ಪರಿಸ್ಥಿತಿಯಲ್ಲಿರುವ ಜನಸಮುದಾಯಗಳನ್ನು ತಲುಪುವ ಕಾರ್ಯಕ್ರಮಗಳನ್ನು ಜತನದಿಂದ ಜಾರಿಗೊಳಿಸಬೇಕಿದೆ.
