ಮನರೇಗಾ ಯೋಜನೆಯ ರಸ್ತೆಬದಿ ನೆಡುತೋಪು ಕಾಮಗಾರಿಯಡಿ ಅಕ್ರಮ ನಡೆದಿದ್ದು, ಸರ್ಕಾರದ ಅನುದಾನವನ್ನು ಲೂಟಿ ಹೊಡೆದಿರುವ ಸಾಮಾಜಿಕ ಅರಣ್ಯ ವಲಯದ ವಲಯ ಅರಣ್ಯಾಧಿಕಾರಿಗಳನ್ನು ತನಿಖೆಗೊಳಪಡಿಸಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸರ್ ಎಂ ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘದಿಂದ ಯಾದಗಿರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕಾರ್ಮಿಕ ಸಂಘಟನೆಯ ಅಧ್ಯಕ್ಷ ಪ್ರದೀಪ ಅಣಬಿ ಮಾತನಾಡಿ, “ಜಿಲ್ಲೆಯ ಶಹಾಪುರ ತಾಲೂಕಿನ ಸಾಮಾಜಿಕ ಅರಣ್ಯ ವಲಯದಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ ವಲಯ ಅರಣ್ಯಾಧಿಕಾರಿಗಳಾದ ಜಯಶ್ರೀ, ಉಪಳಪ್ಪ ಹಾಗೂ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಂಜೀವ ಪವಾರ ಎಂಬುವರನ್ನು ಅಮಾನತುಗೊಳಿಸಿ, ಇವರು ನಿರ್ವಹಿಸಿದ ಕಾಮಗಾರಿಗಳ ಬಗ್ಗೆ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದರು.
“ಸದರಿ ಅಧಿಕಾರಿಗಳು 2022ರಿಂದ 2025ರವರೆಗೆ ಮನರೇಗಾ, ಆರ್‌ಎಸ್‌ಪಿ, ಎಸ್‌ಎಫ್‌ಪಿ, ಎಸ್‌ಎಫ್ ಯೋಜನೆಯಡಿ ರಸ್ತೆಬದಿ ನೆಡುತೋಪು ಕಾಮಗಾರಿಯ ಸ್ಥಳದಲ್ಲಿ ಅಳವಡಿಸಿರುವ ನಾಮಫಲಕದಲ್ಲಿ ಕಾಮಗಾರಿಯ ಅಂದಾಜು ಮೊತ್ತ ಹಾಕದೆ, ಇಲಾಖೆ ಯೋಜನೆಗಳನ್ನು ಗೌಪ್ಯವಾಗಿಟ್ಟು, ಸಾರ್ವಜನಿಕರಿಗೆ ಇದರ ಮಾಹಿತಿ ಸಿಗದಂತೆ ಮಾಡಿದ್ದಾರೆ. ಹಾಗಾಗಿ ಈ ಕಾಮಗಾರಿಗಳಿಂದ ಸಾಕಷ್ಟು ಪ್ರಮಾಣದಲ್ಲಿ ಭ್ರಷ್ಟಾಚಾರ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ” ಎಂದು ದೂರಿದರು.
“ಇವರು ನಿರ್ವಹಿಸಿದ ಕಾಮಗಾರಿಗಳಡಿ ನೆಟ್ಟ ಗಿಡಗಳ ಪಾಲನೆ, ಪೋಷಣೆ ಮಾಡದೆ, ಗಿಡಗಳು ಒಣಗಿದ್ದು, ಸದರಿ ಕಾಮಗಾರಿಗಳಲ್ಲಿ ನಕಲಿ ಕಾವಲುಗಾರರನ್ನು ಸೃಷ್ಟಿಸಿ ಅವರ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಅನುದಾನ ದುರ್ಬಳಕೆ ಮಾಡಿದ್ದಾರೆ. ಗಿಡಗಳಿಗೆ ನೀರು ಹಾಕಲು ಉಪಯೋಗಿಸುವ ನೀರಿನ ಟ್ಯಾಂಕರ್‌ಗಳೂ ಕೂಡ ಅಧಿಕಾರಿಗಳು ಹಾಗೂ ಅವರ ಸಂಬಂಧಿಕರ ಹೆಸರಿನಲ್ಲಿವೆ. ಈ ಎಲ್ಲ ಅಕ್ರಮಗಳನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಜತೆಗೆ ಅವರ ಅವಧಿಯ ಕಾಮಗಾರಿಗಳ ಬಗ್ಗೆ ದೂರುದಾರರ ಸಮ್ಮುಖದಲ್ಲಿಯೇ ತನಿಖೆ ನಡೆಸಬೇಕು” ಎಂದು ಒತ್ತಾಯಿಸಿದರು.
- ವಿಭೂತಿಹಳ್ಳಿ ಇಂದ ಹತ್ತಿಗೂಡೂರುವರೆಗೆ(ಆರ್‌ಎಸ್‌ಕೆ) ರಸ್ತೆಬದಿ ನೆಡುತೋಪು.
- ಹಾಲಬಾವಿ ಕ್ರಾಸ್‌ನಿಂದ ಮೊರಾರ್ಜಿ ದೇಸಾಯಿ ಶಾಲೆ ಮುಖ್ಯ ಕಾಲುವೆ ರಸ್ತೆಬದಿ ನೆಡುತೋಪು.
- ಬಿ.ಗುಡಿ ಕ್ರಾಸ್‌ನಿಂದ ಹಾಲಬಾವಿ ಕ್ರಾಸ್ ಮುಖ್ಯ ಕಾಲುವೆ ರಸ್ತೆಬದಿ ನೆಡುತೋಪು.
- ಟಿ.ವಡಗೇರಾದಿಂದ ಹೈಯಾಳ ಕೆ ವರೆಗೆ ರಸ್ತೆಬದಿ ನೆಡುತೋಪು.
- ಗುಂಡಳ್ಳಿ ಸರ್ವೆ ನಂ.121ರ ನೆಡುತೋಪು.
- ಹಂಚಿನಾಳದಿಂದ ಹೈಯಾಳ ಬಿ ವರೆಗೆ ರಸ್ತೆಬದಿ ನೆಡುತೋಪು.
- ಕೊರಮಾಹಿ ಟೆಂಪಲ್‌ನಿಂದ ಬೀರನಕಲ್ ಕ್ರಾಸ್ ಕಾಲುವೆ ರಸ್ತೆಬದಿ ನೆಡುತೋಪು.
- ಶಂಕರಬಂಡಾ ಸರ್ವೆ ನಂ.32ರಲ್ಲಿ 8 ಹೆಕ್ಟೇರ್ ಬ್ಲಾಕ್-2 ನೆಡುತೋಪು.
- ಶಂಕರಬಂಡಾ ಸರ್ವೆ ನಂ.32ರಲ್ಲಿ 15 ಹೆಕ್ಟೇರ್ ಎಸ್‌ಎಫ್‌ಪಿ ಬ್ಲಾಕ್ ನೆಡುತೋಪು ಕಾಮಗಾರಿಗಳ ಹೆಸರಿನಲ್ಲಿ ಅಪಾರ ಪ್ರಮಾಣದ ಅವ್ಯವಹಾರ ನಡೆದಿದ್ದು, ಸದರಿ ಕಾಮಗಾರಿಗಳ ನಿರ್ವಹಣೆ ಮತ್ತು ವೀಡಿಂಗ್ ಕೆಲಸ ಹಾಗೂ ಹೋಯಿಂಗ್, ಸೋಯಿಲ್ ವರ್ಕ್, ಸ್ಟ್ರೇಪಿಂಗ್ ಕೆಲಸ ಮತ್ತು ಬೆಂಕಿ ರೇಖೆ ನಿರ್ವಹಣೆ ಸೇರಿದಂತೆ ಅನೇಕ ಕೆಲಸಗಳನ್ನು ನಿರ್ವಹಿಸದೆ, ಬೋಗಸ್ ಬಿಲ್ ಸೃಷ್ಟಿಸಿ, ಹಣ ಲೂಟಿ ಮಾಡಿದ್ದಾರೆಂದು ಆರೋಪಿಸಿದರು.
“ಸದರಿ ಅಧಿಕಾರಿಗಳು ಕಚೇರಿಯಲ್ಲಿ ಕಾರ್ಯನಿರ್ವಹಿಸದೇ, ಬರೀ ಹೊರಗಡೆಯೇ ಕಾಲ ಕಳೆಯುತ್ತಿರುತ್ತಾರೆ. ಇದರಿಂದ ಸಾರ್ವಜನಿಕ ಕೆಲಸಕಾರ್ಯಗಳಿಗೆ ಅಡಚಣೆ ಉಂಟಾಗುತ್ತಿದೆ. ಇದರಿಂದ ಅರಣ್ಯ ಇಲಾಖೆಯ ಗಿಡ ಬೆಳೆಸುವ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುತ್ತಿರುವುದು ನೈಜವಾಗಿ ತಿಳಿದುಬಂದಿದೆ” ಎಂದರು.
“ಗಸ್ತು ಅರಣ್ಯಪಾಲಕ ಸಿದ್ರಾಮ ಎಸ್ ಜಾನಕರ್ ಮತ್ತು ಹಣಮಂತ ಬಿರಾದಾರ ಎನ್ನುವ ವ್ಯಕ್ತಿಗಳ ಸುಮಾರು 8 ವರ್ಷಗಳಿಂದ ಒಂದೇ ಸ್ಥಳದಲ್ಲಿ ಕರ್ತವ್ಯನಿರ್ವಹಿಸುತ್ತಿದ್ದು, ಸರ್ಕಾರದ ಸೇವಾ ನಿಯಮ ಉಲ್ಲಂಘನೆಯಾಗಿದೆ. ಇದು ಮೇಲಧಿಕಾರಿಗಳ ಗಮನಕ್ಕೆ ಇದ್ದರೂ ಕೂಡ, ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಶೈಕ್ಷಣಿಕ ಹರಿಕಾರ ಟಿ.ವಿ. ವಸಂತರಾಜ ಅರಸ್ ನೆನಪಿನಾರ್ಥ ನುಡಿ ನಮನ
“2022-23ನೇ ಸಾಲಿನ ಯೋಜನೆಯಡಿ ಶಹಾಪುರ ಅರಣ್ಯ ವಲಯಕ್ಕೆ ನೆಡುತೋಪು, ನಿರ್ಮಾಣ, ನಿರ್ವಹಣೆ ಇತರೆ ಕಾಮಗಾರಿಗಳ ಹೆಸರಿನಲ್ಲಿ ₹12,32,748 ಹಣ ಬಿಡುಗಡೆಯಾಗಿದೆ. 2023-24ನೇ ಸಾಲಿನ ಯೋಜನೆಯಡಿ ಶಹಾಪುರ ಅರಣ್ಯ ವಲಯಕ್ಕೆ ನೆಡುತೋಪು, ನಿರ್ಮಾಣ, ನಿರ್ವಹಣೆ ಇತರೆ ಕಾಮಗಾರಿಗಳ ಹೆಸರಿನಲ್ಲಿ ₹98,494 ಹಣ ಬಿಡುಗಡೆಯಾಗಿದೆ. ಆದರೆ ಯಾವುದೇ ಕಾಮಗಾರಿಗಳು ನಡೆದಿಲ್ಲ. ನಕಲಿ ಕಾಮಗಾರಿಗಳನ್ನು ಸೃಷ್ಟಿಸಿ, ಸದರಿ ಸ್ಥಳದಲ್ಲಿ ಕಾಮಗಾರಿ ವಿವರದ ಬೋರ್ಡ್/ಕಲ್ಲು ಹಾಕಿದ್ದಾರೆ. ಇದೇ ಕಾಮಗಾರಿಗಳನ್ನು ವಿವಿಧ ಯೋಜನೆಗಳಡಿ ಪದೇ ಪದೆ ತೋರಿಸಿ ಸರ್ಕಾರದ ಹಣ ಕೊಳ್ಳೆ ಹೊಡೆದಿದ್ದಾರೆ” ಎಂದು ಆರೋಪಿಸಿದರು.
“ಪ್ರಕರಣಗಳಿಗೆ ಸಂಬಂಧಿಸಿದ ಲಗತ್ತುಗಳು, ಮನರೇಗಾ ಸಾಮಗ್ರಿ ವೋರ‍್ಸ್ ನಕಲು ಪ್ರತಿ, ಕಾಮಗಾರಿ ಸ್ಥಳದ ಜಿಪಿಎಸ್ ಫೋಟೋ(ಸ್ವಯಂ ದೃಢೀಕರಿಸಿದ) ಪ್ರತಿಗಳನ್ನು ನೀಡಲಾಗಿದೆ. ಸದರಿಯವರು ನಿರ್ವಹಿಸಿದ ಕಾಮಗಾರಿಗಳ ಸ್ಥಳ ಪರಿಶೀಲನೆ ಮಾಡಿ, ಕೂಡಲೇ ತಪ್ಪಿತಸ್ಥರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಅಲ್ಲದೆ ಸೇವೆಯಿಂದ ಅಮಾನತುಗೊಳಿಸಿ, ಶಿಸ್ತು ಕಾನೂನು ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.
ಮೌನೇಶ ಬೀರನೂರ, ಬೋಜಪ್ಪ ಮುಂಡಾಸ ಇದ್ದರು.