ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ವಿದ್ಯಾರ್ಥಿನಿ ಸೌಜನ್ಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ಏಪ್ರಿಲ್ 6ರಂದು ಧರ್ಮಸ್ಥಳದಲ್ಲಿ ನಡೆಯಲಿದ್ದ ಹಕ್ಕೊತ್ತಾಯ ಸಭೆ ಮತ್ತು ಪ್ರತಿಭಟನೆಗೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.
ಧನಕೀರ್ತಿ ಆರಿಗ ಎಂಬವರು ಈ ಪ್ರತಿಭಟನೆಗೆ ತಡೆ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಮುಂದಿನ ವಿಚಾರಣೆಯವರೆಗೂ ಪ್ರತಿಭಟನೆ ನಡೆಸದಂತೆ ತಾತ್ಕಾಲಿಕ ತಡೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ತುಳುನಾಡ ಸಂಸ್ಕೃತಿಯಂತೆ ‘ದೈವ’ ಆಗಬೇಕಾಗಿದ್ದ ಸೌಜನ್ಯ ದೇವಿಯಾದಳು; ವೈದಿಕೀಕರಣದ ಹೊಸ ಮಗ್ಗಲು
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಪ್ರತಿಭಟನೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸಂದೇಶಗಳನ್ನು ಉಲ್ಲೇಖಿಸಿದ್ದಾರೆ. ಧರ್ಮಸ್ಥಳ ದೇವಾಲಯ ಹಾಗೂ ಧರ್ಮಾಧಿಕಾರಿಗಳ ಪರವಾಗಿ ನ್ಯಾಯಾಲಯ ಹೊರಡಿಸಿದ್ದ ಆದೇಶಗಳನ್ನು ಉಲ್ಲಂಘಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ದೇವಸ್ಥಾನಕ್ಕೆ ನುಗ್ಗುವ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದಾರೆ.
ವಾದ ಆಲಿಸಿದ ಪೀಠವು ಪ್ರತಿಭಟನೆಗೆ ಮಧ್ಯಂತರ ತಡೆ ನೀಡಿದೆ. ಹಾಗೆಯೇ ಪ್ರತಿಭಟನೆ ಆಯೋಜಕರಿಗೆ ತುರ್ತು ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿದೆ.
ಇದನ್ನು ಓದಿದ್ದೀರಾ? ಸುಳ್ಯ | ಸೌಜನ್ಯಳಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಬೃಹತ್ ಪ್ರತಿಭಟನೆ
ಸೌಜನ್ಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಬಂಧಿಸಿದ್ದ ಆರೋಪಿ ಸಂತೋಷ್ ನಿರಪರಾಧಿ ಎಂದು ಈಗಾಗಲೇ ಕೋರ್ಟ್ ಘೋಷಿಸಿದೆ. ಈ ಕೊಲೆಯ ನಿಜ ಆರೋಪಿ ಯಾರು ಎಂದು ಆಗ್ರಹಿಸಿ ನಿರಂತರ ಪ್ರತಿಭಟನೆ, ಸಭೆ ನಡೆಸಲಾಗುತ್ತಿದೆ.
ಈ ಹಿಂದೆ ಬೆಂಗಳೂರು ನಗರದಲ್ಲಿ ಪ್ರತಿಭಟನೆ ನಡೆಸುವುದಕ್ಕೆ ಪೊಲೀಸರು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಅರ್ಜಿ ವಿಚಾರಣೆ ನಡೆಸಿದ್ದ ಪೀಠವು ಶಾಂತಿಯುತ ಪ್ರತಿಭಟನೆ ನಡೆಸುವುದಕ್ಕೆ ಅವಕಾಶ ನಿರಾಕರಿಸಲಾಗುವುದಿಲ್ಲ ಎಂದಿತ್ತು. ಆದರೆ ಇದೀಗ ಅರ್ಜಿದಾರರ ಪರ ವಕೀಲರು ಧರ್ಮಸ್ಥಳ ದೇವಸ್ಥಾನಕ್ಕೆ ಒತ್ತಾಯಪೂರ್ವಕವಾಗಿ ನುಗ್ಗುವ ಸಾಧ್ಯತೆಯಿದೆ ಎಂದು ವಾದಿಸಿರುವ ಕಾರಣ ತಾತ್ಕಾಲಿಕ ತಡೆ ನೀಡಲಾಗಿದೆ.
