2023ರ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಬಿಜೆಪಿಯು ರಾಜ್ಯದ ಹಲವು ಕಡೆಗಳಲ್ಲಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಆತ್ಮಾವಲೋಕನ ಮಾಡಿಕೊಳ್ಳಲು ಮುಂದಾಗಿದೆ. ಆತ್ಮಾವಲೋಕನ ಸಭೆಯಲ್ಲಿ ನಾಯಕರ ವಿಭಿನ್ನವಾದ ಹೇಳಿಕೆಗಳ ಕುರಿತು ಕಾಂಗ್ರೆಸ್ ಟೀಕೆ ಮಾಡಿದೆ.
ಕರ್ನಾಟಕದಲ್ಲಿ ಈ ಹಿಂದೆ ಆಪರೇಷನ್ ಕಮಲ ಮೂಲಕ ಅಧಿಕಾರಕ್ಕೆ ಬಂದಿದ್ದ ಬಿಜೆಪಿಯು ತನ್ನ ಆಡಳಿತ ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ಆರೋಪ, ಹಗರಣಗಳನ್ನು ಮೈಮೇಲೆ ಎಳೆದುಕೊಂಡಿತ್ತು. ಬೆಲೆ ಏರಿಕೆ, ಭ್ರಷ್ಟಾಚಾರ, ಆಡಳಿತ ವಿರೋಧಿ ಅಲೆಯಿಂದಾಗಿ ಬಿಜೆಪಿ ಸೋಲು ಅನುಭವಿಸಿತ್ತು.
ಬಿಜೆಪಿಯ ಆತ್ಮಾವಲೋಕನ ಸಭೆಯಲ್ಲಿ ಬಿಜೆಪಿ ನಾಯಕರ ಹೇಳಿಕೆಗಳ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, “ಬಿಜೆಪಿಯ ಒಂದು ಬಣ ಹೊಂದಾಣಿಕೆ ರಾಜಕೀಯದಿಂದ ನಮಗೆ ಸೋಲಾಯಿತು ಎನ್ನುತ್ತಿದೆ. ಮತ್ತೊಂದು ಬಣ ಕಾಂಗ್ರೆಸ್ ಗ್ಯಾರಂಟಿಗಳಿಂದ ನಮಗೆ ಸೋಲಾಯ್ತು ಎನ್ನುತ್ತಿದೆ. ಎರಡೂ ಬಣದವರು ಸತ್ಯ ಹೇಳಲು, ಒಪ್ಪಿಕೊಳ್ಳಲು ತಯಾರಿಲ್ಲ” ಎಂದು ಕುಟುಕಿದೆ.
“40% ಕಮಿಷನ್ ಭ್ರಷ್ಟಾಚಾರದಿಂದ, ದುರಾಡಳಿತದಿಂದ, ಜನಪರ ಚಿಂತನೆಗಳು ಇಲ್ಲದಿರುವುದರಿಂದ, ಹಗರಣಗಳಿಂದ ಸೋಲಾಗಿದ್ದನ್ನು ಒಪ್ಪಿಕೊಳ್ಳದಿದ್ದರೆ ಬಿಜೆಪಿಯದ್ದು ಆತ್ಮಾವಲೋಕನ ಆಗುವುದಿಲ್ಲ, ಆತ್ಮ ವಂಚಕತನ ಆಗುತ್ತದೆ” ಎಂದು ತಿರುಗೇಟು ನೀಡಿದೆ.
‘ಬಿಜೆಪಿ ಸಂವಿಧಾನ ಪರವೋ? ಸಮಾಜಘಾತಕರ ಪರವೋ?‘
ಸಚಿವ ಪ್ರಿಯಾಂಕ್ ಖರ್ಗೆ ಅವರು ನೀಡಿದ್ದ, ಬಕ್ರೀದ್ ಸಂದರ್ಭದಲ್ಲಿ ಗೋ ರಕ್ಷಣೆ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯ ಹೇಳಿಕೆಗೆ ಬಿಜೆಪಿ ನೀಡಿದ್ದ ಪ್ರತಿಕ್ರಿಯೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, “ಬಿಜೆಪಿಯ ಐಟಿ ಸೆಲ್ ಮೂಢರಿಗೆ ಕನ್ನಡ ಬರುವುದಿಲ್ಲ ಎಂದೆನಿಸುತ್ತದೆ. ಕಾನೂನು ಉಲ್ಲಂಘಿಸುವವರ, ಕಾನೂನನ್ನು ಕೈಗೆತ್ತಿಕೊಳ್ಳುವವರ ವಿರುದ್ಧ ಕ್ರಮ ಜರುಗಿಸಿ ಎಂದರೆ ಬಿಜೆಪಿಗೆ ಉರಿ ಬಿದ್ದಿರುವುದೇಕೆ? ಬಿಜೆಪಿ ಸಂವಿಧಾನ, ಕಾನೂನಿನ ಪರವೋ? ಸಮಾಜಘಾತಕರ ಮತ್ತು ಕೊಲೆಗಡುಕರ ಪರವೋ ಕಾನೂನನ್ನು ಪಾಲಿಸಿ ಎಂದರೆ ಬಿಜೆಪಿಗೆ ಕಸಿವಿಸಿ ಉಂಟಾಗುವುದೇಕೆ?” ಎಂದು ಕಟುವಾಗಿ ಪ್ರಶ್ನಿಸಿದೆ.
ಪಿಜೆಪಿ ಹೇಳಿದ್ದೇನು?
ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಕುರಿತು ಟ್ವೀಟ್ ಮಾಡಿದ್ದ ಬಿಜೆಪಿ, “ಭಾರತ ಸಂವಿಧಾನದ 48 ನೇ ವಿಧಿಯು ಪ್ರಾಣಿಗಳನ್ನು, ವಿಶೇಷವಾಗಿ ಸಾರ್ವಜನಿಕ ಸ್ಥಳಗಳಲ್ಲಿ ವಧೆ ಮಾಡುವುದನ್ನು ಸ್ಪಷ್ಟವಾಗಿ ನಿಷೇಧಿಸುತ್ತದೆ. ಆದರೂ ಪ್ರಿಯಾಂಕ್ ಖರ್ಗೆ ಅಕ್ರಮ ಗೋ ಹತ್ಯೆಯನ್ನು ಉತ್ತೇಜಿಸುವ ಮೂಲಕ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಗೋ ಹತ್ಯೆ ತಡೆಯುವವರನ್ನು ಬಂಧಿಸುವಂತೆ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ” ಎಂದು ಆರೋಪಿಸಿತ್ತು.
ಈ ಸುದ್ದಿ ಓದಿದ್ದೀರಾ? ಬಿಜೆಪಿಗೆ ಕರೆತಂದ ಕಾಂಗ್ರೆಸ್ಸಿಗರಿಂದ ಅನುಭವಿಸುತ್ತಿದ್ದೇವೆ, ಬಾಲ ಕಟ್ ಮಾಡುತ್ತೇವೆ: ಕೆ ಎಸ್ ಈಶ್ವರಪ್ಪ
ಮುಂದುವರಿದು, “ಸ್ವಯಂಘೋಷಿತ ಸಂವಿಧಾನ ತಜ್ಞ ಸಿದ್ದರಾಮಯ್ಯ ಅವರು, ಇದು ಬಾಬಾ ಸಾಹೇಬರ ಭಾರತೀಯ ಸಂವಿಧಾನವನ್ನು ಉಲ್ಲಂಘಿಸುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ವಿವರಿಸಬೇಕು. ಇಲ್ಲದಿದ್ದರೆ, ಇಬ್ಬರೂ ಭಾರತೀಯ ಸಂವಿಧಾನದ ಬಗ್ಗೆ ಶಿಕ್ಷಣ ಪಡೆಯಬೇಕು” ಎಂದು ಬಿಜೆಪಿ ಟ್ವೀಟ್ ಮಾಡಿತ್ತು.