ಈ ದಿನ ಸಂಪಾದಕೀಯ | ಮಹಿಳೆಯರನ್ನು ಅಪಹಾಸ್ಯ ಮಾಡಿದರೆ, ಪರಿಣಾಮ ಎದುರಿಸಬೇಕಾದೀತು

Date:

Advertisements
ಬಿಜೆಪಿಗರ ಹೊಟ್ಟೆಯುರಿ, ಬಿಸ್ಕತ್ತು ತಿಂದ ಪತ್ರಕರ್ತರ ಉರಿ, ಐಟಿ ಸೆಲ್‌ನ ಐಲಾಟ- ಎಲ್ಲವೂ ಈಗ ಹೊರಬರುತ್ತಿವೆ. ನಾಡಿನ ಮಹಿಳೆಯರು ಎಲ್ಲವನ್ನು ಗಮನಿಸುತ್ತಿದ್ದಾರೆ. ಮೌನವಾಗಿರುವ ಕೋಟ್ಯಂತರ ಮಹಿಳೆಯರ ಸಾತ್ವಿಕ ಸಿಟ್ಟಿಗೂ ಬಲಿಯಾಗಲಿದ್ದಾರೆ

ʻಕಾಂಗ್ರೆಸ್‌ನ ಗ್ಯಾರಂಟಿ ಶಕ್ತಿ ಯೋಜನೆಯಿಂದಾಗಿ ಬಸ್‌ಗಳು ಡೀಸೆಲ್ ಇಲ್ಲದೆ ನಿಲ್ಲುವ, ಕೆಎಸ್ಆರ್‌ಟಿಸಿ ಮುಚ್ಚುವ ಸ್ಥಿತಿ ನಿರ್ಮಾಣ ಆಗಿದೆ. ಕರ್ನಾಟಕ ಕತ್ತಲಲ್ಲಿ ಮುಳುಗಲಿದೆʼ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬಸವರಾಜ ಬೊಮ್ಮಾಯಿಯವರು ಕರ್ನಾಟಕ ರಾಜ್ಯವನ್ನು ಎರಡು ವರ್ಷಗಳ ಕಾಲ ಆಳಿದ ಮುಖ್ಯಮಂತ್ರಿಗಳು. ನಾಡಿನ ಆರ್ಥಿಕ ಸ್ಥಿತಿಯನ್ನು ಬಹಳ ಹತ್ತಿರದಿಂದ ಬಲ್ಲವರು. ನಾಡಿನ ಜನತೆಯ ಸ್ಥಿತಿ-ಗತಿಗಳನ್ನೂ ಅರಿತವರು. ಇಂತಹವರು ಸರ್ಕಾರ ಮಹಿಳೆಯರಿಗಾಗಿ ರೂಪಿಸಿದ ಒಂದು ಕಲ್ಯಾಣ ಕಾರ್ಯಕ್ರಮದ ಬಗ್ಗೆ ಇಷ್ಟು ಲಘುವಾಗಿ ಮಾತನಾಡುತ್ತಾರೆಂದರೆ- ಒಂದು, ಅವರ ವಿದ್ಯೆ ಮತ್ತು ವಿವೇಚನೆ ಕೈ ಕೊಟ್ಟಿರಬೇಕು. ಇಲ್ಲ, ಮಹಿಳೆಯರ ಬಗೆಗಿನ ಸನಾತನಿಗಳ ಬೋಧನೆಯನ್ನು ಕೇಳಿ ಬದನೇಕಾಯಿ ತಿನ್ನುತ್ತಿರಬೇಕು.

ಇವರ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ, ಕೇವಲ ಎರಡುಮೂರು ವರ್ಷಗಳ ಹಿಂದೆ, ಮಹಾಮಾರಿ ಕೊರೊನಾ ನಾಡಿನ ಮೇಲೆ ಎರಗಿದಾಗ, ಇದೇ ಸಾರಿಗೆ ಸಂಸ್ಥೆ ಸ್ತಬ್ಧವಾಗಿತ್ತು. ಸಂಬಳ ಕೊಡಲಾಗದ ಪರಿಸ್ಥಿತಿ ಎದುರಾಗಿತ್ತು. ಸಾರಿಗೆ ಸಂಸ್ಥೆ ಮುಚ್ಚುವ ಸ್ಥಿತಿ ನಿರ್ಮಾಣವಾಗಿತ್ತು. ಕರ್ನಾಟಕ ಕತ್ತಲಲ್ಲಿ ಮುಳುಗಿತ್ತು ಅಲ್ಲವೇ? ನಿಮ್ಮದೇ ಬಿಜೆಪಿ ಡಬಲ್ ಎಂಜಿನ್ ಸರ್ಕಾರ, ಸೊರಗಿದ ಉದ್ಯಮಗಳಿಗೆ ಆರ್ಥಿಕ ಚೈತನ್ಯ ತುಂಬಲು ಹಣಕಾಸಿನ ನೆರವು ನೀಡಿರಲಿಲ್ಲವೇ? ಜನರ ಕೈಯಲ್ಲಿ ಹಣ ಹರಿದಾಡಿದರೆ ತಾನೇ ಆರ್ಥಿಕ ಚಕ್ರ ತಿರುಗುವುದು? ಈ ಸರಳ ಅರ್ಥಶಾಸ್ತ್ರವೂ ಗೊತ್ತಿಲ್ಲದ ಗಾಂಪರೇ ನೀವು?

Advertisements

ಅಂತಹ ದಿಕ್ಕೆಟ್ಟ ಸ್ಥಿತಿಯಲ್ಲಿಯೇ ಸಾರಿಗೆ ಸಂಸ್ಥೆ ತೊಂದರೆಗೆ ಸಿಲುಕಲಿಲ್ಲ, ಮುಚ್ಚಲಿಲ್ಲ ಎಂದರೆ, ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ನಾಡಿನ ಮಹಿಳೆಯರಿಗೆ ಉಚಿತ ಪ್ರಯಾಣದ ಕಲ್ಯಾಣ ಕಾರ್ಯಕ್ರಮದಿಂದ ಮುಚ್ಚುವ ಸ್ಥಿತಿ ನಿರ್ಮಾಣವಾಗುತ್ತದೆಯೇ? ವಿರೋಧ ಪಕ್ಷವೆಂದರೆ ಎಲ್ಲವನ್ನು ವಿರೋಧ ಮಾಡುವುದೇ? ಸಾರ್ವಜನಿಕ ವಲಯದಲ್ಲಿ ಮಹಿಳೆಯರು ಹೆಚ್ಚು ಭಾಗಿಯಾದರೆ ದೇಶ ಪ್ರಗತಿಯತ್ತ ಸಾಗುತ್ತದೆ. ಶತಮಾನಗಳಿಂದ ಅವಕಾಶವಂಚಿತರಾದ ಮಹಿಳೆಯರು ಸಮಾಜದಲ್ಲಿ ಸದೃಢವಾಗಿ ನಿಲ್ಲಲು ಈ ಯೋಜನೆ ಸಹಕಾರಿಯಾಗುತ್ತದೆ. ಈ ಯೋಜನೆಯನ್ನು ಕರ್ನಾಟಕವೊಂದೇ ಅಲ್ಲ, ಪಂಜಾಬ್, ತಮಿಳುನಾಡು, ದೆಹಲಿ ಕೂಡ ಜಾರಿಗೆ ತಂದಿವೆ. ಕರ್ನಾಟಕದ ಶಕ್ತಿ ಯೋಜನೆ ಕುರಿತು `ದಿ ಗಾರ್ಡಿಯನ್’ ಸೇರಿದಂತೆ ದೇಶವಿದೇಶಗಳ ಹಲವು ಪತ್ರಿಕೆಗಳು ಮುಕ್ತಕಂಠದಿಂದ ಹೊಗಳಿವೆ.

ಅಷ್ಟಕ್ಕೂ ಈ ಕಲ್ಯಾಣ ಕಾರ್ಯಕ್ರಮದಿಂದ ನಾಡಿನ ಮಹಿಳೆಯರು ಪಡೆಯಬಹುದಾದ ಸೌಲಭ್ಯವೇನು? ಉಚಿತ ಬಸ್ ಪ್ರಯಾಣದಿಂದ ಒಂದಷ್ಟು ಬಡವರಿಗೆ, ದುಡಿಯುವ ಹೆಣ್ಣುಮಕ್ಕಳಿಗೆ ಉಪಯೋಗವಾಗಬಹುದು. ಆ ಉಳಿತಾಯ ಮನೆಯ ಖರ್ಚುವೆಚ್ಚಕ್ಕಾಗಬಹುದು. ಮನೆಯಲ್ಲಿಯೇ ಕೂತ ಮಹಿಳೆಯರು ಕೆಲಸಕ್ಕೆ ಹೋಗುವ ಮನಸ್ಸು ಮಾಡಬಹುದು. ಆ ಮೂಲಕ ಉತ್ಪಾದನೆ ಹೆಚ್ಚುವ, ಆರ್ಥಿಕವಾಗಿ ಸಬಲಳಾಗುವ, ವಾಣಿಜ್ಯ-ವ್ಯವಹಾರ ಕುದುರುವ ಪರಿಸ್ಥಿತಿ ನಿರ್ಮಾಣವಾಗಬಹುದು. ಇನ್ನು ಮನೆಕೆಲಸದಲ್ಲಿಯೇ ಮುಳುಗಿಹೋಗಿರುವ ಹೆಣ್ಣುಮಕ್ಕಳು ಉಚಿತದ ನೆಪದಲ್ಲಿ ಒಂದಷ್ಟು ದೇವಸ್ಥಾನಗಳಿಗೆ, ದೂರದ ತೀರ್ಥಕ್ಷೇತ್ರಗಳಿಗೆ ಹೋಗಿಬರಬಹುದು. ಹೀಗಾಗುವುದರಿಂದ ಸಾರಿಗೆ ವ್ಯವಸ್ಥೆಯಲ್ಲಿ ಕೊಂಚ ಏರುಪೇರಾಗಬಹುದು, ಸಾರಿಗೆ ಸಿಬ್ಬಂದಿಗೆ ನಿಯಂತ್ರಣ, ನಿಭಾಯಿಸುವಿಕೆ ಕಷ್ಟವಾಗಬಹುದು.

ಇದನ್ನು ಓದಿದ್ದೀರಾ?: ‘ಈ ದಿನ’ ಸಂಪಾದಕೀಯ | ಮಾನ್ಯ ಸಭಾಧ್ಯಕ್ಷ ಖಾದರ್ ಅವರು ನೂತನ ಶಾಸಕರಿಗೆ ಯಾವ ದಿಕ್ಕು ತೋರಿಸುತ್ತಿದ್ದಾರೆ?

ಹಾಗಂತ ನಮ್ಮ ಅಕ್ಕ-ತಂಗಿಯರನ್ನು, ಅಮ್ಮ-ಅಜ್ಜಿಯರನ್ನು ಅಪಹಾಸ್ಯ ಮಾಡುವುದೇ? ಬಿಜೆಪಿ ಹುಟ್ಟುಹಾಕಿದ ಐಟಿ ಸೆಲ್, ಸರ್ಕಾರದ ಈ ಉಚಿತ ಕಾರ್ಯಕ್ರಮವನ್ನು ಸೋಷಿಯಲ್ ಮೀಡಿಯಾದಲ್ಲಿ ಮೀಮ್ಸ್ ಮಾಡಿ ಹಂಚುತ್ತಿದೆ. ಮಾಹಿತಿಗಳ ದಾಸರಾಗಿ ಸ್ವತಂತ್ರವಾಗಿ ಯೋಚಿಸುವುದನ್ನೇ ಮರೆತಿರುವ ವಿವೇಚನಾರಹಿತ ಸಮಾಜ ಆಡಿಕೊಂಡು ನಗುತ್ತಿದೆ. ಇನ್ನು ಬಿಜೆಪಿಯ ಎಂಜಲು ಕಾಸಿಗೆ ಕೈಚಾಚಿದ ಮಾಧ್ಯಮದ ಕೆಲ ಪತ್ರಕರ್ತರು ತೀರಾ ಕೆಟ್ಟದಾಗಿ ತಲೆಬರಹ ಕೊಟ್ಟು, ತಮ್ಮ ವಿಕೃತಿಯನ್ನು ಹೊರಹಾಕುತ್ತಿದ್ದಾರೆ. ಇದು ಉಳ್ಳವರ ಅಹಂಕಾರವಲ್ಲವೇ? 

ಈ ಆಧುನಿಕ ಯುಗದಲ್ಲಿ ಮಹಿಳೆಯರು ಹೊರಬರುವುದನ್ನು ವಿರೋಧಿಸುವ ನಿಮ್ಮ ಮನಸ್ಥಿತಿ ಎಂತಹದ್ದು? ಯಾವ ಕಾಲದಲ್ಲಿದ್ದೀರಿ? ಸ್ವಾತಂತ್ರ್ಯ, ಸಮಾನತೆ, ಲಿಂಗ ತಾರತಮ್ಯ ಬರಿ ಭಾಷಣಕ್ಕಾಗಿಯೇ? ನಿಮ್ಮ ಸನಾತನ ಧರ್ಮ ಮಹಿಳೆಯರನ್ನು ಮನೆಯಲ್ಲಿ ಕಟ್ಟಿಹಾಕಿದ್ದು, ಕಡೆಗಣಿಸಿದ್ದು, ಕೀಳಾಗಿ ಕಂಡಿದ್ದು ಮಹಿಳೆಯರಿಗೆ ಗೊತ್ತಿಲ್ಲವೇ? ಶತ ಶತಮಾನಗಳಿಂದ ಮಹಿಳೆಯರನ್ನು ಮೂಲೆಗೆ ಕೂರಿಸಿದ ನಿಮ್ಮ ಮನುಧರ್ಮಕ್ಕೆ ಮಹಿಳೆ ಈಗ ಮನೆಯಿಂದ ಹೊರಬಂದು ಲೋಕವನ್ನು ತೆರೆದ ಕಣ್ಣಿನಿಂದ ನೋಡುತ್ತಿರುವುದನ್ನು ಸಹಿಸಿಕೊಳ್ಳಲಾಗುತ್ತಿಲ್ಲವೇ?

ಬಿಜೆಪಿಗರ ಹೊಟ್ಟೆಯುರಿ, ಬಿಸ್ಕತ್ತು ತಿಂದ ಪತ್ರಕರ್ತರ ಉರಿ, ಐಟಿ ಸೆಲ್‌ನ ಐಲಾಟ- ಎಲ್ಲವೂ ಈಗ ಹೊರಬರುತ್ತಿವೆ. ನಾಡಿನ ಮಹಿಳೆಯರು ಎಲ್ಲವನ್ನು ಗಮನಿಸುತ್ತಿದ್ದಾರೆ. ಈಗಾಗಲೇ ನಿಮ್ಮ ದ್ವೇಷಾಸೂಯೆಗಳಿಂದ ಮಹಿಳೆಯರ ವಕ್ರದೃಷ್ಟಿಗೆ ಬಲಿಯಾಗಿ ಸೋತು ಸುಣ್ಣವಾಗಿ ಕೂತಿದ್ದೀರಿ. ಮತ್ತೆ ಮಹಿಳೆಯರ ಸ್ವಾತಂತ್ರ್ಯಕ್ಕೆ ಭಂಗ ತರುವ ಮಾತನಾಡಿದರೆ, ಕುಹಕವಾಡಿದರೆ, ಮೌನವಾಗಿರುವ ಕೋಟ್ಯಂತರ ಮಹಿಳೆಯರ ಸಾತ್ವಿಕ ಸಿಟ್ಟಿಗೆ ಬಲಿಯಾಗುವುದು ಖಂಡಿತ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X