15 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಾಮುಕರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಸಂತ್ರಸ್ತ ಬಾಲಕಿಯು ಔರಂಗಬಾದ್ ಜಿಲ್ಲೆಯವರಾಗಿದ್ದು, ವಿವಾಹ ಸಮಾರಂಭವೊಂದರಲ್ಲಿ ಭಾಗಿಯಾಗಲು ಶುಕ್ರವಾರ ರೋಹ್ತಸ್ ಜಿಲ್ಲೆಗೆ ಹೋಗಿದ್ದರು. ಈ ವೇಳೆ ಯುವಕರಿಬ್ಬರು ಬಾಲಕಿಯ ಮನವೊಲಿಸಿ, ಸುಳ್ಳು ಹೇಳಿ ಸಮೀಪದ ಹೊಲವೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಹೆಣ್ಣುಮಕ್ಕಳ ಸಾಮೂಹಿಕ ಅತ್ಯಾಚಾರ; ಕುರುಡಾಯಿತೇ ಸಮಾಜ?
ಬಾಲಕಿ ಕಾಣದ ಕಾರಣ ಪೋಷಕರು ಹುಡುಕಾಡಿದಾಗ ಬಾಲಕಿಯು ಹೊಲದಲ್ಲಿ ಪ್ರಜ್ಞೆ ಇಲ್ಲದೆ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಬಾಲಕಿಯ ಮಾನಸಿಕ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಅಮ್ಜೋರ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಶ್ಯಾಮ್ ಕುಮಾರ್, “ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆ ಮಾನಸಿಕ ಆಘಾತದಿಂದ ಹೊರಬಂದ ಬಳಿಕ ಆಕೆಯ ಹೇಳಿಕೆಯನ್ನು ಪಡೆಯಲಾಗುವುದು. ಸದ್ಯ ಮಾತೇ ಆಡುತ್ತಿಲ್ಲ” ಎಂದು ತಿಳಿಸಿದ್ದಾರೆ.
ಆರೋಪಿಗಳಾದ ಶಹ್‌ಝಾದ್ ರಾಯನ್ ಮತ್ತು ಸಲ್ಮಾನ್ ರಝಾ ಅವರನ್ನು ಬಂಧಿಸಲಾಗಿದೆ. ಕೋರ್ಟ್ ಇಬ್ಬರನ್ನೂ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಇಬ್ಬರೂ ಕೂಡಾ ಅದೇ ಗ್ರಾಮದವರು ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಮೈಸೂರು | ಮಣಿಪುರ ಮಹಿಳೆಯರ ಮೇಲೆ ದೌರ್ಜನ್ಯ; ವಿದ್ಯಾರ್ಥಿಗಳ ಖಂಡನೆ
ಅಪ್ರಾಪ್ತರ ಮೇಲೆ ಅತ್ಯಾಚಾರ ಪ್ರಕರಣ ಹೆಚ್ಚಳ
2016ರಿಂದ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಅಧಿಕವಾಗಿದೆ. ಅದರಲ್ಲಿಯೂ ಪ್ರಮುಖವಾಗಿ ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಗರ್ಭಪಾತ, ಅತ್ಯಾಚಾರ-ಕೊಲೆ – ಇಂತಹ ಅಪರಾಧಗಳು ಹೆಚ್ಚಾಗುತ್ತಿದೆ. ಎನ್‌ಜಿಒ ಸಿಆರ್‌ವೈ ವರದಿಯ ಪ್ರಕಾರ ದೇಶದಲ್ಲಿ 2016ರಿಂದ 2022ರ ನಡುವೆ ಅಪ್ರಾಪ್ತರ ಮೇಲೆ ಅತ್ಯಾಚಾರ ಪ್ರಕರಣಗಳು ಸುಮಾರು ಶೇಕಡ 96ರಷ್ಟು ಏರಿಕೆಯಾಗಿದೆ. 2020 ಹೊರತುಪಡಿಸಿ 2016ರಿಂದ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. 2021ರಿಂದ 2022ರ ನಡುವೆ ಶೇಕಡ 6.9ರಷ್ಟು ಪ್ರಕರಣಗಳು ಅಧಿಕವಾಗಿದೆ.
ಇವು ವರದಿಯಾದ ಪ್ರಕರಣಗಳಾದರೆ, ಇನ್ನೂ ಅದೆಷ್ಟೋ ಪ್ರಕರಣಗಳು ಮುನ್ನೆಲೆಗೆ ಬಂದಿಲ್ಲ. ಸಂತ್ರಸ್ತೆ/ ಸಂತ್ರಸ್ತ ಅಥವಾ ಆಕೆ/ ಆತನ ಕುಟುಂಬಸ್ಥರು ಮರ್ಯಾದೆಗೆ ಅಂಜಿ ಅತ್ಯಾಚಾರಿಗಳ ವಿರುದ್ದ ದೂರು ದಾಖಲಿಸುವುದೇ ಇಲ್ಲ. ಇನ್ನೊಂದೆಡೆ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ಅತ್ಯಾಚಾರಿಗಳಿಗೆ ಭಯಪಟ್ಟು ಸಂತ್ರಸ್ತರು ದೂರು ದಾಖಲಿಸುವುದಿಲ್ಲ.
