ಚಿಣ್ಣರ ಕಲಿಕೆಗೆ ಸುವ್ಯವಸ್ಥಿತವಾಗಿರಬೇಕಾಗಿದ್ದ ಅಂಗನವಾಡಿ ಕೇಂದ್ರವೊಂದು ಶಿಥಿಲಗೊಂಡು ಮಕ್ಕಳಿಗೆ ಮದುವೆ ಮಂಟಪವೇ ಅಂಗನವಾಡಿ ಕೇಂದ್ರವಾಗಿದೆ. ಇಷ್ಟಾದರೂ ತಮಗೆ ಸಂಬಂಧವೇ ಇಲ್ಲದಂತೆ ಸಂಬಂಧಪಟ್ಟ ಅಧಿಕಾರಿಗಳು ವರ್ತಿಸುತ್ತಿದ್ದಾರೆ.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕು ನಾಗರಹಾಳ ಗ್ರಾಮ ವ್ಯಾಪ್ತಿಯ ತುಂಬಲಗಡ್ಡಿ ಗ್ರಾಮದ ಅಂಗನವಾಡಿ ಕಟ್ಟಡ ಸಂಪೂರ್ಣ ದುರಸ್ತಿಗೆ ಬಂದಿದೆ. ಕಟ್ಟಡ್ದ ಛಾವಣಿ ಅಲ್ಲಲ್ಲಿ ದೊಡ್ಡ ಬಿರುಕು ಮೂಡಿ ಪೂರ್ತಿ ಅಧ್ವಾನವಾಗಿದೆ. ಮಳೆ ಬಂದರಂತೂ ಅಂಗನವಾಡಿ ಕಾರ್ಯಕರ್ತೆ ಆತಂಕದಲ್ಲೇ ಮಕ್ಕಳಿಗೆ ಪಾಠ ಹೇಳುವ ಸ್ಥಿತಿ ನಿರ್ಮಾಣವಾಗಿದೆ. ಹಲವು ಬಾರಿ ಇದೇ ಪುನರಾವರ್ತನೆಯಾಗಿ ಬೇಸತ್ತ ಶಿಕ್ಷಕಿ ಗ್ರಾಮದ ಕಲ್ಯಾಣ ಮಂಟಪದ ಮೊರೆ ಹೋಗಿದ್ದಾರೆ.

ಗ್ರಾಮದ ನಿವಾಸಿಯೊಬ್ಬರು ಈದಿನ ಡಾಟ್ ಕಾಮ್‌ನೊಂದಿಗೆ ಮಾತನಾಡಿ, “ಒಂದೆಡೆ ಅಂಗನವಾಡಿ ನಡೆಸಲು ಕಟ್ಟಡಗಳಿಲ್ಲ ಎಂಬ ಕೂಗಿದ್ದರೆ ಇನ್ನೊಂದೆಡೆ ಕಟ್ಟಡವಿದ್ದರೂ ಅವುಗಳನ್ನು ಸಮರ್ಪಕವಾಗಿ ನಿರ್ವಹಿಸುವುದು ಸಾಧ್ಯವಾಗುತ್ತಿಲ್ಲ. ಅಂಗನವಾಡಿ ಕಟ್ಟಡ ಸುಮಾರು ವರ್ಷಗಳಿಂದ ದುಸ್ಥಿತಿಯಲ್ಲೇ ಇದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸದೆ ತಮಗೆ ಸಂಬಂಧವಿಲ್ಲದಂತೆ ಕಾಲ ಕಳೆಯುತ್ತಿದ್ದಾರೆ” ಎಂದು ಆರೋಪಿಸಿದರು.
ಶಿಥಿಲಗೊಂಡಿರುವ ಕಟ್ಟಡದಲ್ಲಿ ಪಾಠ ಮಾಡಲು ಸಾಧ್ಯವೇ ಇಲ್ಲ. ಪಾಲಕರು ಮಕ್ಕಳನ್ನು ಕೇಂದ್ರಕ್ಕೆ ಕಳಿಸಿ, ಅವರು ಹಿಂತಿರುಗುವವರೆಗೂ ಆತಂಕದಲ್ಲೇ ದಿನ ದೂಡುವಂತಾಗುತ್ತದೆ.

ಅಂಗನವಾಡಿ ಕೇಂದ್ರದ ಶಿಕ್ಷಕಿ ಸುರೇಖಾ ಮಾತನಾಡಿ, “ಸುಮಾರು ಎರಡು ವರ್ಷಗಳಿಂದ ಗ್ರಾಮದ ಮದುವೆ ಮಂಟಪವೇ ಮಕ್ಕಳಿಗೆ ಅಂಗನವಾಡಿ ಕೇಂದ್ರವಾಗಿದೆ. ಮದುವೆ ಸಮಾರಂಭಗಳು ಇದ್ದಾಗ ಅಂಗನವಾಡಿ ಕೇಂದ್ರ ರಜೆ ಹೇಳಲಾಗುತ್ತದೆ. ದಿನಸಿ ಸೇರಿ ಇತರೆ ಅಗತ್ಯ ಸಾಮಗ್ರಿಗಳನ್ನು ಆಗಾಗ ಒಂದು ಕಡೆಯಿಂದ ಮತ್ತೊಂದು ಕಡೆಗೆ ವರ್ಗಾಯಿಸುತ್ತಲೇ ಇರಬೇಕು. ಮದುವೆ ಸಮಾರಂಭ ಮುಗಿದಾಗ ಮತ್ತೆ ನಾವು ಅದನ್ನು ಸ್ವಚ್ಛ ಮಾಡಿ ಮಕ್ಕಳನ್ನು ಕರೆತರಬೇಕು. ಸ್ಥಳೀಯ ಜನರಿಗೆ ಕೂಡ ಇದರಿಂದ ಸಮಸ್ಯೆ ಎದುರಾಗಿದೆ ಇದರಿಂದ ಆಗಾಗ ಕಿರಿಕಿರಿ ಉಂಟಾಗುತ್ತಲೇ ಇದೆ” ಎಂದು ಅವಲತ್ತುಕೊಂಡರು.

ಮುಂದೆ ಮಳೆಗಾಲ ಸಮೀಪಿಸುತ್ತಿದ್ದು, ಅಧಿಕಾರಿಗಳು ಇತ್ತ ಗಮನ ಹರಿಸಿ ಇಂತಹ ಅಂಗನವಾಡಿ ಕಟ್ಟಡಗಳು ಸುಧಾರಿಸಲು ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ಇದನ್ನೂ ಓದಿ: ರಾಯಚೂರು | ‘ಏಮ್ಸ್ʼ ಮಂಜೂರಿಗೆ ಸಂಸದರ ಸಕರಾತ್ಮಕ ಪ್ರತಿಕ್ರಿಯೆ: ಬಸವರಾಜ ಕಳಸ
ಈಗಾಗಲೇ ರಾಜ್ಯ ಸರಕಾರ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‌ಕೆಜಿ, ಯುಕೆಜಿ, ಆರಂಭಿಸಬೇಕೆಂದು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈ ಮಧ್ಯೆ ಶಿಥಿಲಗೊಂಡಿರುವ ಕೇಂದ್ರಗಳನ್ನು ದುರಸ್ಥಿಗೊಳಿಸುವುದೋ ಅಥವಾ ಪರ್ಯಾಯ ವ್ಯವಸ್ಥೆ ಮಾಡುವುದೋ ಮಾಡಬೇಕಾಗಿದೆ. ಇಲ್ಲದಿದ್ದಲ್ಲಿ ಸಾರ್ವಜನಿಕರ ನಗೆಪಾಟಲಿಗೆ ಸರ್ಕಾರ ಗುರಿಯಾಗಬೇಕಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.