ಬಾಣಂತಿಯರ ಸಾವು ಪ್ರಕರಣ: ಆತಂಕ ಹುಟ್ಟಿಸಿದ ಮಧ್ಯಂತರ ವರದಿ

Date:

Advertisements

ಕಳೆದ ವರ್ಷ ರಾಜ್ಯದಲ್ಲಿ ಅತಿ ಹೆಚ್ಚಾಗಿ ಸದ್ದು ಮಾಡಿದ್ದ ಸುದ್ದಿಗಳಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣವೂ ಒಂದು. ಬಳ್ಳಾರಿ ಜಿಲ್ಲಾಸ್ಪತ್ರೆ ಹಾಗೂ ಬಿಮ್ಸ್ ಆಸ್ಪತ್ರೆಯಲ್ಲಿ ಕೇವಲ 15 ದಿನಗಳ ಅಂತರದಲ್ಲಿ ಒಟ್ಟು ಐವರು ಬಾಣಂತಿಯರು ಸಾವನ್ನಪ್ಪಿದ ಸಂಗತಿ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಬಳ್ಳಾರಿ ಮಾತ್ರವಲ್ಲದೆ ಚಿತ್ರದುರ್ಗ, ಬೀದರ್‌, ರಾಯಚೂರು, ದಾವಣಗೆರೆ ಜಿಲ್ಲೆಗಳಲ್ಲೂ ಬಾಣಂತಿಯರ ಸರಣಿ ಸಾವು ಮುಂದುವರೆದಿತ್ತು. ಸಾರ್ವಜನಿಕರಿಂದ ಆಸ್ಪತ್ರೆ ಆಡಳಿತ ಹಾಗೂ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಬಳಿಕ ನವೆಂಬರ್‌ನಲ್ಲಿ ಸಾವಿನ ಕುರಿತು ಸಮಗ್ರ ತನಿಖೆ ನಡೆಸಲು ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಸವಿತಾ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ನೀಡಲು ಸರ್ಕಾರ ಸೂಚಿಸಿತ್ತು.

ಇದೀಗ ಸಮಿತಿಯು 18 ಪುಟಗಳ ಮಧ್ಯಂತರ ವಿಶ್ಲೇಷಣಾ ವರದಿ (ಡೆತ್‌ ಆಡಿಟ್‌) ಸಲ್ಲಿಸಿದ್ದು, ತೀವ್ರ ಆತಂಕ ಹುಟ್ಟಿಸಿದೆ. 2024ರ ಏ.‌1 ರಿಂದ ಡಿ.‌ 31ರ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 464 ಬಾಣಂತಿಯರ ಸಾವು (ಪ್ರಸವ ಪೂರ್ವ ಮತ್ತು ಪ್ರಸವ ನಂತರ) ಸಂಭವಿಸಿವೆ. ಈ ಸಾವುಗಳಲ್ಲಿ ಶೇ.70ರಷ್ಟು ಸಾವನ್ನು ತಡೆಯಬಹುದಾಗಿತ್ತು ಎಂದು ಸರ್ಕಾರಕ್ಕೆ ಸಲ್ಲಿಸಿರುವ ವರದಿ ವಿವರಿಸಿದೆ.

ವರದಿ ಸ್ಪಷ್ಟಪಡಿಸಿರುವಂತೆ ಪ್ರಕರಣದಲ್ಲಿ ವೈದ್ಯರ ನಿರ್ಲಕ್ಷ್ಯ ದೃಢವಾಗಿದ್ದು, 10 ಮಂದಿ ವೈದ್ಯರಿಗೆ ನೋಟಿಸ್‌ ನೀಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

Advertisements

ಪಶ್ಚಿಮ ಬಂಗಾಳದ ಕಂಪನಿಯೊಂದು ಪೂರೈಸಿದ್ದ ‘ರಿಂಗರ್‌ ಲ್ಯಾಕ್ಟೇಟ್‌’ ದ್ರಾವಣವನ್ನು ಬಾಣಂತಿಯರಿಗೆ ನೀಡಿದ್ದರಿಂದಲೇ ಸಾವು ಸಂಭಸಿವೆ. ಆ ವೇಳೆ ವೈದ್ಯರು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿದ್ದರೆ, ಶೇ.70ರಷ್ಟು ಸಾವನ್ನು ತಡೆಯಬಹುದಾಗಿತ್ತು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ದ್ರಾವಣದ ಸಮಸ್ಯೆ ಮಾತ್ರವಲ್ಲದೆ, ಸಾವಿಗೆ ಹಲವು ಕಾರಣಗಳಿವೆ ಎಂದೂ ವರದಿ ಹೇಳಿದೆ ಎಂದಿರುವ ಅವರು, ಸಮಿತಿ ನೀಡಿರುವ ಶಿಫಾರಸಿನನ್ವಯ ತಾಲೂಕು ಮಟ್ಟದ ಆಸ್ಪತ್ರೆಗಳನ್ನು ಬಲವರ್ಧನೆಗೊಳಿಸಲು ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗುವುದು ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ವರದಿ ಬಹಿರಂಗಪಡಿಸಿ ಮಾತನಾಡಿರುವ ಅವರು, “ಕಾರ್ಯಭಾರ ಹೆಚ್ಚಿರುವ ತಾಲೂಕುಗಳಿಗೆ ಒತ್ತಡ ಕಡಿಮೆ ಇರುವ ತಾಲೂಕುಗಳ ಆಸ್ಪತ್ರೆಗಳ ವೈದ್ಯ ಮತ್ತು ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗುವುದು. ಒಟ್ಟಿನಲ್ಲಿ ಪ್ರತಿ ತಾಲೂಕು ಆಸ್ಪತ್ರೆಗೆ ತಲಾ ಇಬ್ಬರು ವಿಶೇಷ ತಜ್ಞ ವೈದ್ಯರು, ಮಕ್ಕಳ ತಜ್ಞರು ಮತ್ತು ಒಬ್ಬ ಅರಿವಳಿಕೆ ತಜ್ಞರು ಕಡ್ಡಾಯವಾಗಿರುವಂತೆ ನೋಡಿಕೊಳ್ಳಲಾಗುವುದು. ಆದಷ್ಟು ಬೇಗನೇ 130 ವಿಶೇಷ ತಜ್ಞ ವೈದ್ಯರ ನೇಮಕ ಆಗಲಿದೆ” ಎಂದರು.

ಮಧ್ಯಂತರ ವಿಶ್ಲೇಷಣಾ ವರದಿಯ ಶಿಫಾರಸುಗಳಲ್ಲಿ ಕೆಲವು ಈಗಾಗಲೇ ಜಾರಿಯಾಗಿವೆ. ಬಜೆಟ್‌ನಲ್ಲಿ ಮುಂದಿನ ಹಂತದ ಕಾರ್ಯಯೋಜನೆಗೆ ₹360 ಕೋಟಿಯನ್ನು ಮೀಸಲಿರಿಸಲಾಗಿದೆ ಎಂದು ಅವರು ವಿವರಿಸಿದರು.

ಮಧ್ಯಂತರ ವರದಿಯ ಪ್ರಮುಖ ಅಂಶಗಳು:

“ಶೇ 70ರಷ್ಟು ಬಾಣಂತಿಯರ ಸಾವನ್ನು ತಪ್ಪಿಸಬಹುದಾಗಿತ್ತು. ಬಳ್ಳಾರಿ 5, ರಾಯಚೂರು 4, ಬೆಂಗಳೂರು ನಗರ 3, ಉತ್ತರ ಕನ್ನಡ, ಯಾದಗಿರಿ ಮತ್ತು ಬೆಳಗಾವಿಯಲ್ಲಿ ತಲಾ 1 ಸೇರಿ ಒಟ್ಟು 18 ಸಾವುಗಳು ಲಿಂಗರ್ ಲ್ಯಾಕ್ಟೇಟ್‌ ಕಾರಣದಿಂದಲೇ ಸಂಭವಿಸಿವೆ. ಒಟ್ಟು ಸಾವಿನ ಪ್ರಕರಣಗಳಲ್ಲಿ ಶೇ.50 ರಷ್ಟು ತಾಯಂದಿರು 19 ರಿಂದ 25 ವರ್ಷ ವಯೋಮಿತಿಯವರಾಗಿದ್ದಾರೆ. ಅಧಿಕ ರಕ್ತದೊತ್ತಡ, ಹೃದ್ರೋಗ, ಡಯಾಬಿಟಿಸ್, ಸೋಂಕು ಮುಂತಾದವುಗಳು ಶೇ 68.05ರಷ್ಟು ಸಾವಿಗೆ ಕಾರಣವಾಗಿವೆ. 10 ಪ್ರಕರಣಗಳಲ್ಲಿ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ನಿರ್ಲಕ್ಷ್ಯ ಸಾಬೀತಾಗಿದೆ” ಎನ್ನುತ್ತದೆ ವರದಿ.

ತಜ್ಞರ ಸಮಿತಿಯ ಪ್ರಮುಖ ಶಿಫಾರಸು:

ತಜ್ಞರ ಸಮಿತಿಯು ಮುಂದಿನ ದಿನಗಳಲ್ಲಿ ತಾಯಂದಿರ ಸಾವು ತಡೆಗಟ್ಟಲು 27 ಪ್ರಮುಖ ಶಿಫಾರಸುಗಳನ್ನು ಮಾಡಿದೆ. ಅವುಗಳಲ್ಲಿ ಮುಖ್ಯವಾದವು.. ಪ್ರತಿ ಗರ್ಭಿಣಿಯ ಅಪಾಯಕಾರಿ ಅಂಶಗಳ ಆರಂಭಿಕ ತಪಾಸಣೆ. ಸೋಂಕುಗಳ ನಿಯಂತ್ರಣ ಹಾಗೂ ಮೇಲ್ವಿಚಾರಣೆ (ಎಚ್‌ಐವಿ, ಸಿಫಿಲಿಸ್, ಟಿಬಿ, ಹೆಪಟೈಟಿಸ್ ಮುಂತಾದವು). ರಾಜ್ಯಾದ್ಯಂತ ರಕ್ತ ಭಂಡಾರ ಹಾಗೂ ವೈದ್ಯಕೀಯ ಉಪಕರಣಗಳ ಸುಧಾರಣೆ. ಸಾಮಾನ್ಯ ಹೆರಿಗೆ ನಂತರ ಕನಿಷ್ಠ 3 ದಿನ ಮತ್ತು ಸಿಸೇರಿಯನ್ ನಂತರ 7 ದಿನಗಳ ಆಸ್ಪತ್ರೆ ವಾಸ್ತವ್ಯ ಕಡ್ಡಾಯಗೊಳಿಸುವುದು. ಎಫ್‌ಸಿಎಂ (ಫೆರಿಕ್ ಕಾರ್ಬಾಕ್ಸಿಮಾಲ್ಟೋಸ್) ಇಂಜೆಕ್ಷನ್ ಬಳಕೆ ಮೂಲಕ ರಕ್ತಹೀನತೆಯ ತಡೆಯುವುದು. ಸಾವಿಗೆ ಕಾರಣ ಸ್ಪಷ್ಟವಾಗಿಲ್ಲದ ಕೆಲವು ಪ್ರಕರಣಗಳಲ್ಲಿ ಮರಣೋತ್ತರ ಪರೀಕ್ಷೆಯನ್ನು ಕಡ್ಡಾಯಗೊಳಿಸಲು ಶಿಫಾರಸು ಮಾಡಲಾಗಿದೆ.

ಕಳಪೆ ಗುಣಮಟ್ಟದ ಔಷಧಿ ಪೂರೈಕೆ ಮಾಡಿದ ಪಂಜಾಬ್‌ನ ʼಪಶ್ಚಿಮ್‌ ಬಂಗಾ ಫಾರ್ಮಾಸ್ಯುಟಿಕಲ್ಸ್‌ʼ ಕಂಪನಿಯ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಕಳೆದ ಡಿಸೆಂಬರ್‌ನಲ್ಲೇ ಸಚಿವ ದಿನೇಶ್‌ ಗುಂಡೂರಾವ್‌ ಸೂಚಿಸಿದ್ದರು. ಐ.ಪಿ. ದ್ರಾವಣದ ಗುಣಮಟ್ಟ ಅಸುರಕ್ಷಿತ ಎಂದು ಪರೀಕ್ಷಾ ವರದಿಗಳಿಂದ ದೃಢಪಟ್ಟ ಹಿನ್ನೆಲೆ ಕರ್ತವ್ಯ ಲೋಪದ ಆರೋಪದ ಮೇಲೆ ರಾಜ್ಯ ಔಷಧ ನಿಯಂತ್ರಕ ಡಾ. ಎಸ್. ಉಮೇಶ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು.  ಕಂಪನಿ ವಿರುದ್ಧ ತನಿಖೆ ನಡೆಸುವ ಮೂಲಕ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಕೂಡ ಕೇಂದ್ರ ಔಷಧ ಮಹಾನಿರ್ದೇಶಕರಿಗೆ (ಡಿಸಿಜಿಐ) ಪತ್ರ ಬರೆದಿತ್ತು. ಪಶ್ಚಿಮ ಬಂಗಾಳ ಸರ್ಕಾರವು ಹೆಚ್ಚಿನ ತನಿಖೆಗಾಗಿ ಕಂಪನಿಯ ಎಲ್ಲಾ IV ದ್ರಾವಣಗಳ ತಯಾರಿಕೆ ಮತ್ತು ಇತರ ಕಾರ್ಯಾಚರಣೆಗಳನ್ನು ನಿಲ್ಲಿಸಿದೆ. ಡಿಸೆಂಬರ್ 10 ರಿಂದ ಕಂಪನಿಯು ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ತಾಯಂದಿರ ಮರಣ ಪ್ರಮಾಣ (ಪ್ರತಿ 1 ಲಕ್ಷ ಜೀವಂತ ಜನನಕ್ಕೆ)

ಕಳೆದ ಐದು ವರ್ಷಗಳಲ್ಲಿ ತಾಯಂದಿರ ಮರಣ ಪ್ರಮಾಣ ಕಡಿಮೆಯಾಗಿದೆ. 2020-21: 714, 2021-22: 635, 2022-23: 594, 2023-24: 550, 2024-25ರಲ್ಲಿ ಒಟ್ಟು 530 ತಾಯಂದಿರ ಸಾವು ಸಂಭವಿಸಿದೆ ಎಂದು ಆರೋಗ್ಯ ಇಲಾಖೆಯ ಅಂಕಿ ಅಂಶಗಳು ಹೇಳುತ್ತವೆ. ಕಳೆದ ಐದು ವರ್ಷಗಳಲ್ಲಿ ತಾಯಂದಿರ ಮರಣ ಪ್ರಮಾಣ ಕುಸಿದಿದ್ದರೂ ವ್ಯವಸ್ಥಿತ ವೈಫಲ್ಯಗಳಿಂದಾಗಿ ಬಾಣಂತಿಯರ ಸಾವು ಸಂಭವಿಸಿದೆ. ಇದನ್ನು ತಡೆಯಲು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದರೊಂದಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಮತ್ತಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವ ದಿನೇಶ್‌ ಗುಂಡೂರಾವ್‌ ಪುನರುಚ್ಚರಿಸಿದ್ದಾರೆ.

ಸಾವು ಸಂಭವಿಸಿರುವ ಶೇ.50ಕ್ಕಿಂತ ಹೆಚ್ಚು ಪ್ರಕರಣಗಳು ಸರ್ಕಾರಿ ಆಸ್ಪತ್ರೆಗಳಲ್ಲೇ ಎನ್ನುವುದು ಗಮನಾರ್ಹ. ಹಾಗಾದ್ರೆ ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆ ಇಷ್ಟರಮಟ್ಟಿಗೆ ಹದಗೆಟ್ಟಿದೆಯೇ ಎನ್ನುವ ಸಂಶಯ ಹುಟ್ಟಿಕೊಂಡಿದೆ. ಎಲ್ಲಾ ಬಡವರು, ಬಹುತೇಕ ಕೆಳ ಮಧ್ಯಮ ವರ್ಗದವರು ಇಂದಿಗೂ ಸರ್ಕಾರಿ ಆಸ್ಪತ್ರೆಗಳನ್ನೇ ನಂಬಿಕೊಂಡಿದ್ದಾರೆ. ಆದರೆ ಈ ಆಸ್ಪತ್ರೆಗಳೇ ಸಾವಿನ ಕೂಪವಾಗಿ ಮಾರ್ಪಟ್ಟಾಗ ಅವರು ಜೀವ ಉಳಿಸಿಕೊಳ್ಳಲು ಹೋಗುವುದಾದರೂ ಎಲ್ಲಿಗೆ? ಹೀಗಿರುವಾಗ ಖಾಸಗಿ ಆಸ್ಪತ್ರೆಗಳು ಸಲೀಸಾಗಿ ಸಾಮಾನ್ಯ ಜನರ ಜೇಬು ಕತ್ತರಿಸುತ್ತಿವೆ ಎಂದು ಆರೋಪಿಸುವುದು ಸಮಂಜಸವಲ್ಲ.

ಇದು ಕೇವಲ ಕರ್ನಾಟಕದ ಕತೆ ಮಾತ್ರವಲ್ಲ. ರಾಜ್ಯಕ್ಕೆ ಐವಿ ದ್ರಾವಣ ಪೂರೈಕೆ ಮಾಡಿದ್ದ ಅದೇ ಕಂಪನಿ ಕೊಲ್ಕತ್ತಾ ರಾಜ್ಯಕ್ಕೂ ಔಷಧಿ ಪೂರೈಕೆ ಮಾಡಿ ಹಲವು ಸಾವುಗಳಿಗೆ ಕಾರಣವಾಗಿದೆ. ಸಾಲು ಸಾಲು ವರದಿಗಳು ಬಂದರೂ ಬಲಿಯಾಗಿರುವ ಅಮಾಯಕ ಜೀವಗಳಂತೂ ಹಿಂತಿರುಗುವುದಿಲ್ಲ. ಮುಂದಿನ ದಿನಗಳಲ್ಲಿ ಈ ರೀತಿ ಘಟನೆಗಳು ಮರುಕಳಿಸದಂತೆ ಆಡಳಿತ ವರ್ಗ ಕ್ರಮ ಕೈಗೊಳ್ಳಬೇಕು. ಪಶ್ಚಿಮ್‌ ಬಂಗಾ ಫಾರ್ಮಾಸ್ಯುಟಿಕಲ್ಸ್‌ನಂತಹ ಕಂಪನಿಗಳು ದೇಶಾದ್ಯಂತ ಅನೇಕಾನೇಕ ಇವೆ. ಅಂತಹ ಕಂಪನಿಗಳಿಗೆ ಬೀಗ ಜಡಿಯುವ ಕೆಲಸವಾಗಬೇಕಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X