ಅಣ್ಣಾಮಲೈ ಒಳ್ಳೆಯ ಐಪಿಎಸ್ ಅಧಿಕಾರಿಯಾಗಿದ್ದರು. ಬಿಜೆಪಿಗೆ ಹೋಗಿ ಮೋಸ ಹೋದರೆ, ಅವರೇ ಪ್ರಾಮಾಣಿಕರನ್ನು ಕರೆದು ಪಕ್ಷದಲ್ಲಿ ಸೇರಿಸಿಕೊಂಡು ಬೀದಿಗೆ ಬಿಡುವ ಕೆಲಸ ಮಾಡಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ಅಣ್ಣಾಮಲೈ ದಕ್ಷ ಅಧಿಕಾರಿಯಾಗಿ ಜನರ ವಿಸ್ವಾಸ ಗಳಿಸಿದ್ದರು. ಈಗ ಬಿಜೆಪಿಗೆ ಹೋಗಿದ್ದರಿಂದ ಅವರ ಇಡೀ ಬದುಕು ಏನಾಗಿದೆಯೆಂದು ಗಮನಿಸುತ್ತಿದ್ದೇವೆ. ರಸ್ತೆಯಲ್ಲಿ ನಿಂತು ಬಾರ್ಕೋಲಲ್ಲಿ ತಮ್ಮ ಮೈ ಹೊಡೆದುಕೊಳ್ಳುವ ಸ್ಥಿತಿಗೆ ಬಂದಿದ್ದಾರೆ” ಎಂದು ಅಣ್ಣಾಮಲೈ ಅವರ ರಾಜಕೀಯ ದುರಂತ ಬಗ್ಗೆ ಹೇಳಿದರು.
“ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು 11 ವರ್ಷ ಆಯ್ತು. ಇಷ್ಟು ವರ್ಷದಲ್ಲಿ ಅವರು ಮಾಡಿರುವ ಅಭಿವೃದ್ಧಿ ಕೆಲಸ ಏನು? ಕಾಂಗ್ರೆಸ್ ಯೋಜನೆಗಳ ಹೆಸರು ಬದಲಾಯಿಸಿ ತಮ್ಮ ಯೋಜನೆ ಅಂತ ಹೇಳ್ತಿದ್ದಾರೆ. ಇವರು ಸಾಧ್ಯವಾದಷ್ಟು ಜನರ ಕಣ್ಣಿಗೆ ಮಣ್ಣೆರಚಿ ಮೋಸ ಮಾಡಲು ಪ್ರಯತ್ನ ಪಡುತ್ತಿದ್ದಾರೆ” ಎಂದರು.
“ಅಧಿಕಾರ ಬಂದು ನೂರು ದಿನದಲ್ಲಿ ಸ್ವೀಸ್ ಬ್ಯಾಂಕ್‌ನಿಂದ ಕಪ್ಪು ಹಣವನ್ನು ಹೊರಗರ ತರುತ್ತೇವೆಂದು ಹೇಳಿದ್ದರು, ತಂದರಾ? 15 ಲಕ್ಷ ಭಾರತೀಯರ ಖಾತೆಗೆ ಹಾಕಿದರಾ? ವರ್ಷಕ್ಕೆ 2 ಕೋಟಿ ಉದ್ಯೋಗ ಕೊಟ್ಟರಾ? ಯಾವುದೂ ತರಲಿಲ್ಲ, ಜನರಿಗೂ ಕೊಡಲಿಲ್ಲ” ಎಂದು ಬಿಜೆಪಿ ಹಾಗೂ ಪ್ರಧಾನಿಯವರ ಸುಳ್ಳುಗಳ ಜೋಡಿ ಸರಮಾಲೆ ಹೇಳಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ ನಗರದಲ್ಲಿ ಸುರಿದ ಮೊದಲ ಮಳೆಗೆ ತಂಪಾದ ಇಳೆ
“ಬಿಜೆಪಿಯವರಿಗೆ ತಮ್ಮ ರಾಜಕಾರಣ ಹಾಗೂ ರಾಜಕೀಯಕ್ಕೆ ಯಾರ ಅವಶ್ಯಕತೆ ಎಷ್ಟು ಬೇಕೋ ಅಷ್ಟು ಬಳಸಿಕೊಳ್ಳುತ್ತಾರೆ. ರಾಜಕೀಯ ಲಾಭವಾದ ಮೇಲೆ ಅವರನ್ನು ಬಿಸಾಡುತ್ತಾರೆ. ನಾನು ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದಾಗ ನನ್ನನ್ನು ಕರೆದುಕೊಂಡು ಹೋಗಿ ‘ಮುಖ್ಯಮತ್ರಿ ಸ್ಥಾನ ಬಿಟ್ಟು ಉಳಿದ ಎಲ್ಲಾ ಇಲಾಖೆ ಕೊಡುತ್ತೇವೆಂದು ಹೇಳಿದ್ದರು. ಬಹುಮತ ಸಾಬೀತಾಗಿ ಅಧಿಕಾರಕ್ಕೆ ಬಂದ ಮೇಲೆ ಒಳ್ಳೆಯ ಖಾತೆಗಳನ್ನು ಅವರು ತೆಗೆದುಕೊಂಡರು ನಮಗೆ ಯಾವುದೋ ಖಾತೆ ಕೊಟ್ಟರು” ಎಂದು ಹೇಳಿದರು.
“ಬಿಜೆಪಿಯವರು ರಾಜಕಾರಣ ಮಾಡಲು ಅಮಾಯಕರು, ಜನಸಾಮಾನ್ಯರು ಹಾಗೂ ಯುವಜನತೆಯನ್ನು ರಾಜಕೀಯವಾಗಿ ಬಳಸಿಕೊಂಡು ದಾರಿತಪ್ಪಿಸುವಂಥ ಕೆಲಸ ಮಾಡುತ್ತಾರೆ. ಅವರಿಗೆ ತಮ್ಮ ಮಕ್ಕಳ ಮೇಲಿರುವ ಜವಾಬ್ದಾರಿ ಹಾಗೂ ಕಾಳಜಿ, ಬಡವರ ಮಕ್ಕಳ ಮೇಲಿಲ್ಲ” ಎಂದು ಹರಿಹಾಯ್ದರು.