ಭಾರತದ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ ರಾಂ ಅವರು ಈ ರಾಷ್ಟ್ರ ಕಂಡ ಧೀಮಂತ ನಾಯಕ ಮತ್ತು ರಾಷ್ಟ್ರ ಭಕ್ತ ರಾಜಕಾರಣಿ, ರೈತನಾಯಕರಾಗಿದ್ದರು. ಯುದ್ಧ, ಆಹಾರ ಉತ್ಪಾದನೆಯಲ್ಲಿ ಅವರು ಕೈಗೊಂಡ ದಿಟ್ಟ ನಿರ್ಧಾರಗಳು ಬಲಿಷ್ಠ ಭಾರತವಾಗಲು ಸಾಧ್ಯವಾಯಿತು ಎಂದು ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.
ಏ.5ರಂದು ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಜರುಗಿದ ಹಸಿರು ಕ್ರಾಂತಿಯ ಹರಿಕಾರ, ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಂ ಅವರ 118 ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದ ಅವರು, ನಾನೊಬ್ಬ ರೈತನಾಗಿ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ ರಾಂ ಅವರನ್ನು ಹೆಮ್ಮೆಯಿಂದ ಸ್ಮರಿಸುತ್ತೇನೆ. ಗೋಧಿ ಬೆಳೆ ವಿಸ್ತರಿಸಿ, ವಿತರಿಸುವ ಮೂಲಕ ಭಾರತ ದೇಶವು ಆಹಾರ ಉತ್ಪನ್ನಗಳ ಉತ್ಪಾದನೆಯಲ್ಲಿ ಸ್ವಾವಲಂಬಿ ರಾಷ್ಟ್ರವಾಗಲೂ ಸಹಾಯ ಮಾಡಿದರು. ಬಲಿಷ್ಠ ಭಾರತ ನಿರ್ಮಾಣವಾಗಲು ಅವರ ಕೊಡುಗೆ ಅಪಾರವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎನ್ನುವಂತೆ ಡಾ. ಬಾಬು ಜಗಜೀವನ ರಾಂ ಅವರ ಬಾಲ್ಯದ ಜೀವನ ಗಮನಿಸಿದಾಗ ಅವರ ಸಮರ್ಥತೆ, ಸಮಾನತೆಯ ಚಿಂತನೆ, ಸಾತ್ವಿಕ ಪ್ರತಿಭಟನೆ ಎದ್ದು ಕಾಣುತ್ತದೆ. ಬಾಲ್ಯದಿಂದಲೇ ಅವರಲ್ಲಿ ನಾಯಕತ್ವದ ಗುಣಗಳು ಬೆಳೆದಿದ್ದವು. ಹೀಗಾಗಿ ಅವರು ಭಾರತದ ರಾಜಕಾರಣದಲ್ಲಿ ಅಜಾತಶತ್ರು ಆಗಿದ್ದರು. ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ಧ್ವನಿ ಎತ್ತಿದ್ದರು ಎಂದರು.
ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ್ ಎಂ. ಬ್ಯಾಕೋಡ ಮಾತನಾಡಿ, ಮಹಾತ್ಮರ, ರಾಷ್ಟ್ರೀಯ ನಾಯಕರ ಜಯಂತಿ ದಿನದಂದು ನಾವು ಅವರಿಂದ ಏನು ಕಲಿಯುತ್ತೇವೆ, ಏನು ತಿಳಿಯುತ್ತೇವೆ, ಅದನ್ನು ಹೇಗೆ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತೇವೆ ಎಂಬುದು ಅತಿ ಮುಖ್ಯವಾಗಿದೆ. ಡಾ. ಬಾಬು ಜಗಜೀವನ ರಾಂ ಅವರು ಸರಳ, ಸಜ್ಜನರಾಗಿ, ಸಮಾನತೆಗಾಗಿ ಹೋರಾಟ ಮಾಡಿದವರು. ನಾವು ಯಾರಿಗಿಂತ ಕಡಿಮೆ ಇಲ್ಲ. ನಮ್ಮಲ್ಲಿ ಅಗತ್ಯ ಶಕ್ತಿ, ಜ್ಞಾನವಿದ್ದರೆ ಯಾವುದೇ ಹಂತಕ್ಕಾದರೂ ಹೋಗಿ ತಲುಪಬಹುದು. ಯುದ್ಧದ ಸಮಯದಲ್ಲಿ ರಕ್ಷಣಾ ಸಚಿವರಾಗಿ ಅವರು ತೆಗೆದುಕೊಂಡ ನಿರ್ಧಾರಗಳು ಅವರಿಂದ ನಾವು ಕಲಿಯಬೇಕು ಎಂದರು.
ಇದನ್ನು ಓದಿದ್ದೀರಾ? ಧಾರವಾಡ | 505ಕ್ಕೂ ಹಚ್ಚು ಡ್ರಕ್ಸ್ ಬಳಕೆದಾರರಿಗೆ ವೈದ್ಯಕೀಯ ಪರೀಕ್ಷೆ
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲೂಕಿನ ಚಿಗರಹಳ್ಳಿಯ ಜಗದ್ಗುರು ಮರುಳಶಂಕರ ದೇವರಗುರು ಪೀಠದ ಸಿದ್ದ ಬಸವ ಕಬೀರ ಸ್ವಾಮಿಗಳು ಮಾತನಾಡಿ, ಸಮಾಜದಲ್ಲಿ ಮಡಿವಂತಿಕೆ ಒಡೆದು ಹಾಕಿದವರು ದಾರ್ಶನಿಕರಾಗುತ್ತಾರೆ. ಜಾತಿ ವ್ಯವಸ್ಥೆ ನಾಶವಾಗಬೇಕು. ಸಮಾನತೆ, ಸಹಬಾಳ್ವೆಗೆ ಶಿಕ್ಷಣ, ಸಂವಿಧಾನ ಅವಕಾಶ ನೀಡಿವೆ. ಮೂಡನಂಬಿಕೆಗಳನ್ನು ನಂಬದೆ, ವಾಸ್ತವತೆ ಅರಿತು ಬದುಕಬೇಕು ಎಂದು ಹೇಳಿದರು.