- ಈವರೆಗೆ ನೆಟ್ಟ ಸಸಿಗಳ ಬೆಳವಣಿಗೆ ಬಗ್ಗೆಯೂ ಪರಿಶೀಲನೆ
- ರಾಮನಗರ-ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ‘ಆನೆ ಕಾರ್ಯಪಡೆ’
ಅನೇಕ ಕಡೆ ಅರಣ್ಯ ಒತ್ತುವರಿ ಆಗಿದೆ. ಇದನ್ನು ನಾವು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ. ಅವುಗಳನ್ನೆಲ್ಲ ತೆರವು ಮಾಡುತ್ತೇವೆ. ಆದರೆ ರೈತರು, ಬಡವರು, ಬುಡಕಟ್ಟು ಸಮುದಾಯವರಿಗೂ ಕೂಡ ಸಾಮಾಜಿಕ ನ್ಯಾಯ ಒದಗಸಿಕೊಡಬೇಕಾದುದು ನಮ್ಮ ಕರ್ತವ್ಯ. ಅದಕ್ಕಾಗಿ ಅರಣ್ಯ ಮತ್ತು ಕಂದಾಯ ಇಲಾಖೆಯು ಜಂಟಿ ಸಮೀಕ್ಷೆ ಮಾಡಿ, ವರದಿಯನ್ನು ಶೀಘ್ರದಲ್ಲಿ ಸರ್ಕಾರಕ್ಕೆ ಸಲ್ಲಿಸುವುದಾಗಿ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ವಿಧಾನ ಸೌಧದಲ್ಲಿಂದು ಕರ್ನಾಟಕ ಅರಣ್ಯ ಇಲಾಖೆಯ ಹೊಸ ಲಾಂಛನ ಬಿಡುಗಡೆ ಮಾಡಿ ಅವರು ಮಾತನಾಡಿದರು.
“ಮುಂದಿನ ಮೂರು ತಿಂಗಳಿನಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆ ಸೇರಿ ಜಂಟಿ ಸಮೀಕ್ಷೆ ನಡೆಸಲು ನಿರ್ಧರಿಸಿವೆ. ಈ ಜಂಟಿ ಸಮೀಕ್ಷೆಯ ವರದಿಯನ್ನು ರಾಜ್ಯ ಸರ್ಕಾರದ ಸಹಿತ ಕೇಂದ್ರ ಹಾಗೂ ಸುಪ್ರೀಂ ಕೋರ್ಟಿಗೂ ಸಲ್ಲಿಸುತ್ತೇವೆ” ಎಂದು ತಿಳಿಸಿದರು.
“ಕಳೆದ ವರ್ಷ 51 ಜನ ಆನೆ ಮತ್ತು ಇತರೆ ಪ್ರಾಣಿಗಳ ದಾಳಿಯಿಂದ ಸಾವನ್ನಪ್ಪಿದ್ದಾರೆ. ಮಾನವ-ಪ್ರಾಣಿ ಸಂಘರ್ಷವನ್ನು ತಡೆಗಟ್ಟಲು ಶೀಘ್ರದಲ್ಲೇ ರಾಮನಗರ-ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ‘ಆನೆ ಕಾರ್ಯಪಡೆ’ ಆರಂಭಿಸಲಾಗವುದು. ರಾಜ್ಯದಲ್ಲಿ ಈಗಾಗಲೇ ಐದು ಕಡೆ ಆನೆ ಕಾರ್ಯಪಡೆ ಕಾರ್ಯಾಚರಿಸುತ್ತಿದೆ” ಎಂದು ಸಚಿವ ಈಶ್ವರ್ ಖಂಡ್ರೆ ಮಾಹಿತಿ ನೀಡಿದರು.
“ನಾನು ಇಲಾಖೆಯ ಸಚಿವನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನಾಲ್ಕು ಜನ ಸಾವಿಗೀಡಾಗಿದ್ದಾರೆ. ಮೃತಪಟ್ಟವರ ಕುಟುಂಬಕ್ಕೆ 15 ಲಕ್ಷ ರೂ ಪರಿಹಾರ ಮತ್ತು ತಿಂಗಳಿಗೆ 4 ಸಾವಿರ ಮಾಸಾಶನವನ್ನು 5 ವರ್ಷಗಳವರೆಗೆ ನೀಡಲಾಗುವುದು” ಎಂದು ಖಂಡ್ರೆ ತಿಳಿಸಿದರು.
ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ವಿಚಾರವನ್ನು ಪ್ರಸ್ತಾಪಿಸಿದ ಸಚಿವರು, “335 ಹುದ್ದೆಗಳಿಗೆ ಅನುಮೋದನೆ ಸಿಕ್ಕಿದೆ. ಉಳಿದಂತೆ ಖಾಲಿ ಇರುವ ಹುದ್ದೆಗಳ ಬಗ್ಗೆ ವರದಿ ಕೇಳಿದ್ದೇವೆ. ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ರೈಲ್ವೆ ಬ್ಯಾರಿಕೇಡ್ ಬಗ್ಗೆ ಪತ್ರಕರ್ತರೋರ್ವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಆನೆಗಳು ನಾಡಿಗೆ ಬರುವುದರಿಂದ ಅಪಾಯ ಹೆಚ್ಚು. 1 ಕಿ.ಮೀ ಬ್ಯಾರಿಕೇಡ್ ನಿರ್ಮಾಣಕ್ಕೆ ಅಂದಾಜು ಒಂದೂವರೆ ಕೋಟಿ ಬೇಕಾಗುತ್ತದೆ. 641 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಬೇಕಾಗುತ್ತದೆ ಎಂದು ಪ್ರಸ್ತಾವನೆ ಬಂದಿದೆ. ಅದರಲ್ಲಿ ಈಗಾಗಲೇ 330 ಕಿ.ಮೀ ನಿರ್ಮಿಸಲಾಗಿದೆ. ಇನ್ನು ಬಾಕಿಯುಳಿದಿರುವ 311 ಕಿ.ಮೀ. ಬ್ಯಾರಿಕೇಡ್ ನಿರ್ಮಾಣಕ್ಕೆ ಹೆಚ್ಚು ಅನುದಾನ ಬೇಕಿದೆ. ಉಳಿದ ಕಾಮಗಾರಿ ಮಾಡಲು ಬಜೆಟ್ ನಲ್ಲಿ ಹೆಚ್ಚಿನ ಹಣ ಕೋರಲಾಗಿದೆ. 3 ವರ್ಷಗಳಲ್ಲಿ ಈ ಕಾಮಗಾರಿ ಪೂರ್ಣಗೊಳಿಸಲು ಕಾಲಮಿತಿ ಹಾಕಿಕೊಳ್ಳಲಾಗಿದೆ. ಹೀಗಾಗಿ, ಹೆಚ್ಚುವರಿ 200 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಡುತ್ತೇವೆ” ಎಂದು ತಿಳಿಸಿದರು.
“ಜುಲೈ 1ರಿಂದ 7ರವರೆಗೆ ವನಮಹೋತ್ಸವ ಆಚರಣೆ ಮಾಡಲಾಗುವುದು. ವರ್ಷದಲ್ಲಿ 5 ಕೋಟಿ ಸಸಿ ನೆಡುವ ಗುರಿಯನ್ನು ಇಲಾಖೆ ಹೊಂದಿದೆ. ಅಲ್ಲದೇ, ಇಲ್ಲಿಯವರೆಗೆ ಎಷ್ಟು ಸಸಿ ನೆಟ್ಟಿದ್ದೇವೆ. ಅದರ ಬಗ್ಗೆಯೂ ವರದಿಯನ್ನು ತರಿಸಿದ್ದೇವೆ. ಸುಮಾರು 50 ರಿಂದ 60 ಶೇ. ಅಷ್ಟೇ ಉಳಿದಿವೆ. ಈ ಬಾರಿ ನೆಡಲಾಗುವ ಸಸಿಗಳ ಜಿಯೋ ಟ್ಯಾಗ್ ಮಾಡಲಾಗುತ್ತಿದ್ದು, ಕನಿಷ್ಠ ಶೇ.80ರಷ್ಟು ಸಸಿ ಉಳಿಸಲು ಪ್ರಯತ್ನಿಸಲಾಗುವುದು. ಅಲ್ಲದೇ, ಈ ಹಿಂದೆ ನೆಟ್ಟ ಗಿಡಮರಗಳ ಬಗ್ಗೆಯೂ ಲೆಕ್ಕ ಪರಿಶೀಲನೆ ನಡೆಸುತ್ತೇವೆ” ಎಂದು ಸಚಿವ ಖಂಡ್ರೆ ತಿಳಿಸಿದರು.
ಹೊಸ ಲಾಂಛನ ಮಾಡಿದವರಿಗೆ ಹೆಚ್ಚುವರಿ ₹30 ಸಾವಿರ ಬಹುಮಾನ
“ಅರಣ್ಯ ಇಲಾಖೆಯು ದಶಕಗಳಿಂದ ಕಾರ್ಯಾಚರಿಸುತ್ತಿದ್ದರೂ ನಮ್ಮದೇ ಆದಂತಹ ಲಾಂಛನ ಇರಲಿಲ್ಲ. ಹೀಗಾಗಿ ಈ ಇಲಾಖೆಯು ಕಳೆದ ಡಿಸೆಂಬರ್‍ನಲ್ಲಿ ಲಾಂಛನ ಸ್ಪರ್ಧೆ ನಡೆಸಿತ್ತು. ಇದರಲ್ಲಿ ಕಲಾವಿದರು ಸೇರಿದಂತೆ ಅನೇಕ ಮಂದಿ ಸಾರ್ವಜನಿಕರು ಭಾಗವಹಿಸಿದ್ದರು. ಅಂತಿಮವಾಗಿ ಆಯ್ಕೆ ಸಮಿತಿಯು ಅನುಮೋದಿಸಿದ್ದ ಹೊಸ ಲಾಂಛನವನ್ನು ಬಿಡುಗಡೆಗೊಳಿಸಿದ್ದೇವೆ. ಇದನ್ನು ರಚಿಸಿದ ಮೈಸೂರಿನ ಶಮಂತ್ ಗುರು ಅವರು ವಿಜೇತರಾಗಿದ್ದಾರೆ. ಅವರಿಗೆ ಈ ಹಿಂದೆ ₹20 ಸಾವಿರ ಬಹುಮಾನ ಎಂದು ಘೋಷಿಸಿ, ನೀಡಲಾಗಿತ್ತು. ಈಗ ₹30 ಸಾವಿರ ಹೆಚ್ಚುವರಿ ಮಾಡಿ, ಇಲಾಖೆಯ ವತಿಯಿಂದ ಒಟ್ಟು ₹50 ಸಾವಿರ ನೀಡಲಾಗುವುದು” ಎಂದು ಈಶ್ವರ ಖಂಡ್ರೆ ತಿಳಿಸಿದರು.

ಹೊಸ ಲಾಂಛನ (ಲೋಗೋ) ಹೇಗಿದೆ?
ಅರಣ್ಯ ಇಲಾಖೆಯ ಹೊಸ ಲಾಂಛನವು ಕರ್ನಾಟಕದ ನಕ್ಷೆಯಾಕಾರದಲ್ಲಿದೆ. ರಾಜ್ಯದ ಅರಣ್ಯ ಹಾಗೂ ವನ್ಯಜೀವಿ ಸಂಪತ್ತನ್ನು ಪ್ರತಿನಿಧಿಸುವ ರಾಜ್ಯ ಪ್ರಾಣಿ ಆನೆ, ರಾಜ್ಯ ಪಕ್ಷಿ ನೀಲಕಂಠ, ರಾಜ್ಯ ಮರವಾದ ಶ್ರೀಗಂಧ, ರಾಜ್ಯ ಚಿಟ್ಟೆ ಸ್ವರ್ಣೆ ಹಾಗೂ ರಾಷ್ಟ್ರೀಯ ಪ್ರಾಣಿ ಮಾತ್ರವಲ್ಲ ರಾಜ್ಯದ ಪ್ರಮುಖ ವನ್ಯಜೀವಿಯೂ ಆಗಿರುವ ಹುಲಿಯ ಚಿತ್ರ ಹಾಗೂ ಎಲ್ಲದಕ್ಕೂ ಮೂಲ ಆಧಾರವೆಂಬಂತೆ ನಕ್ಷೆಯ ಬುಡದಲ್ಲಿ ನೀರಿನ ಮೂಲಗಳನ್ನು ಪ್ರತಿಬಿಂಬಿಸುವ ನೀಲಿಬಣ್ಣವನ್ನು ನೂತನ ಲೋಗೋ ಒಳಗೊಂಡಿದೆ.