ಫೆಬ್ರವರಿಯಲ್ಲಿ ರಾಷ್ಟ್ರಪತಿ ಆಡಳಿತ ಆರಂಭವಾದಾಗಿನಿಂದ ಮೊದಲ ಬಾರಿಗೆ, ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಏಳು ಶಾಸಕರು ಗುವಾಹಟಿಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಭೇಟಿಯಾಗಿದ್ದು, ಮಣಿಪುರದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ನಾಯಕತ್ವದ ಆಯ್ಕೆಗಳ ಹುಡುಕಾಟಕ್ಕೆ ಸಹಾಯ ಕೋರಿದರು. ಹಾಗಾಗಿ ಶರ್ಮಾ ಜೂನ್ 10ರಂದು ಮಣಿಪುರಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ.
ಬಿಜೆಪಿಯ ಕೆ ಗೋವಿಂದಾಸ್ ಸಿಂಗ್, ಎಲ್ ಸುಸಿಂದ್ರೋ ಮೀಟಿ, ಜೆಡಿಯುನ ಅಬ್ದುಲ್ ನಾಸಿರ್ ಮತ್ತು ಎನ್‌ಪಿಪಿ ನಾಯಕರಾದ ಶಾಂತಿ ಸಿಂಗ್ ಮತ್ತು ಎಂ ರಾಮೇಶ್ವರ್ ಸಿಂಗ್ ಅವರನ್ನು ಒಳಗೊಂಡ ಸಭೆಯು ಥಡೌ ಸಮುದಾಯ ಉತ್ಸವದ ಹೊರತಾಗಿ ನಡೆದಿದೆ.
ಒಮ್ಮತದ ಸಿಎಂ ಹುಡುಕುವ ಪ್ರಯತ್ನಗಳು ಈವರೆಗೆ ಸಫಲವಾಗಿಲ್ಲ. ದೀರ್ಘಕಾಲದ ಜನಾಂಗೀಯ ಹಿಂಸಾಚಾರದ ನಂತರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಫೆಬ್ರವರಿ 9ರಂದು ರಾಜೀನಾಮೆ ನೀಡಿದ್ದರು. ಬಳಿಕ ಫೆಬ್ರವರಿ 13ರಂದು ರಾಷ್ಟ್ರಪತಿ ಆಡಳಿತ ಹೇರಲಾಗಿತ್ತು.
ಸ್ಪೀಕರ್ ಥೋಕ್ಚೊಮ್ ಸತ್ಯಬ್ರತಾ ಸಿಂಗ್ ಮತ್ತು ಮಾಜಿ ಸಚಿವ ಯುಮ್ನಮ್ ಖೇಮ್ ಚಂದ್ ಸಿಂಗ್ ಸೇರಿದಂತೆ ಅನೇಕ ಬಿಜೆಪಿ ನಾಯಕರು ಉನ್ನತ ಹುದ್ದೆಯ ಸ್ಪರ್ಧೆಯಲ್ಲಿದ್ದಾರೆಂದು ಹೇಳಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ವಕ್ಫ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ
ಮಣಿಪುರ ರಾಜಧಾನಿ ಬಳಿಯ ಚರ್ಚಂದಪುರದಲ್ಲಿ 2023 ಮೇ ವೇಳೆ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಗಲಾಟೆ ಶುರುವಾಯಿತು. ಮೈತೇಯಿ ಸಮುದಾಯ ತಮಗೂ ಬುಡಕಟ್ಟು ಸ್ಥಾನಮಾನ ಕೊಡಿ ಎಂದು ಇಟ್ಟಿದ್ದ ಬೇಡಿಕೆಗೆ ಕುಕಿ ಸಮುದಾಯ ವಿರೋಧ ವ್ಯಕ್ತಪಡಿಸಿದ ಕಾರಣ ಆರಂಭವಾದ ಗಲಾಟೆ ಈವರೆಗೆ ನಡೆಯುತ್ತಲೇ ಇದೆ. ಕೊನೆಗೆ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಫೆಬ್ರವರಿ 9ರಂದು ರಾಜೀನಾಮೆ ನೀಡಿ, ರಾಷ್ಟ್ರಪತಿ ಆಡಳಿತ ಆರಂಭವಾಗಿತ್ತು.