ಉದ್ಯೋಗಿಗಳ ಮೇಲೆ ಉದ್ಯೋಗದಾರರ ದೌರ್ಜನ್ಯ, ದಬ್ಬಾಳಿಕೆ, ಕಿರುಕುಳಗಳು ಆಗ್ಗಾಗ್ಗೆ ವರದಿಯಾಗುತ್ತಿವೆ. ಮಾತ್ರವಲ್ಲ, ದೌರ್ಜನ್ಯಗಳು ಮಿತಿಮೀರುತ್ತಿವೆ. ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡದಿಂದಾಗಿ ಹಲವು ಉದ್ಯೋಗಿಗಳು ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದಾರೆ. ಇದೀಗ, ಕಂಪನಿಯೊಂದು ತಾನು ಹಾಕಿದ್ದ ಟಾರ್ಗೆಟ್ ಪೂರೈಸದ ಕಾರಣಕ್ಕೆ, ಉದ್ಯೋಗಿಗಳಿಗೆ ಅಮಾನವೀಯವಾಗಿ ಶಿಕ್ಷೆ ನೀಡಿ, ದೌರ್ಜನ್ಯ ಎಸಗಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ಬೆಳಕಿಗೆ ಬಂದಿದೆ.
ಕೊಚ್ಚಿಯಲ್ಲಿರುವ ‘ಹಿಂದುಸ್ತಾನ್ ಪವರ್ ಲಿಂಕ್ಸ್’ ಎಂಬ ಕಂಪನಿಯು ತಮ್ಮ ಸಿಬ್ಬಂದಿಗಳಿಗೆ ನಾಯಿಯಂತೆ ಕುತ್ತಿಗೆಗೆ ಸರಪಳಿ ಹಾಕಿ, ನಾಯಿಯಂತೆ ನಡೆಸಿ, ನಾಯಿಯಂತೆ ಆಹಾರ ತಿನ್ನುವಂತೆ ಮಾಡಿದೆ. ಮಾತ್ರವಲ್ಲದ, ಸಿಬ್ಬಂದಿಗಳು ಪರಸ್ಪರರ ಗುಪ್ತಾಂಗವನ್ನು ಹಿಡಿದುಕೊಳ್ಳುವಂತೆ ಒತ್ತಾಯಿಸಿ ಕ್ರೌರ್ಯ ಮೆರೆದಿದೆ ಎಂದು ವರದಿಯಾಗಿದೆ.
ಕಂಪನಿಯ ಕ್ರೌರ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ಸಿಬ್ಬಂದಿಯೊಬ್ಬರ ಕುತ್ತಿಗೆಗೆ ಸರಪಳಿ ಹಾಕಿದ್ದು, ಅವರನ್ನು ನಾಯಿಯಂತೆ ನಡೆಸಿದ್ದು, ನಾಯಿಯ ರೀತಿಯಲ್ಲಿಯೇ ಆಹಾರ ತಿನ್ನುವಂತೆ ಮಾಡಿರುವುದು, ಬಾಯಿಂದ ನಾಣ್ಯಗಳನ್ನು ಎತ್ತಿಕೊಳ್ಳುವಂತೆ ಒತ್ತಾಯಿಸುವುದು ಸೆರೆಯಾಗಿದೆ.
#numberoneKerala employees of Hindustan Power link made to walk like dogs and made to lick coin from the floor with belt on neck for not achieving target@sambitswaraj @amitmalviya @AmitShah pic.twitter.com/WkuoqDeuQ5
— pParambathp (@PParandy) April 5, 2025
ಕಂಪನಿಯ ಮ್ಯಾನೇಜರ್ ಈ ರೀತಿ ಕ್ರೌರ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಇಂತಹ ಅಮಾನವೀಯ ಕ್ರೌರ್ಯದ ಶಿಕ್ಷೆಗೆ ಒಳಗಾಗಿರುವ ಸಿಬ್ಬಂದಿಗಳು ಕಂಪನಿಯ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಅವರು ಮನೆ-ಮನೆಗೆ ತೆರಳಿ ಕಂಪನಿಯ ಉತ್ಪನ್ನಗಳನ್ನು ಮಾರಾಟ ಮಾಡಬೇಕಿತ್ತು. ಆದರೆ, ತಿಂಗಳ ಟಾರ್ಗೆಟ್‌ನಷ್ಟು ಉತ್ಪನ್ನಗಳನ್ನು ಮಾರಾಟ ಮಾಡಲಾಗದ ಕಾರಣ ಅವರ ಮೇಲೆ ಇಂತಹ ಕ್ರೌರ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.
ಈ ವರದಿ ಓದಿದ್ದೀರಾ?: ವಕ್ಫ್ ಮಸೂದೆ ಬಗ್ಗೆ ಚರ್ಚೆ ವೇಳೆ ರಾಹುಲ್ ಗಾಂಧಿ ಮೌನ ಸರಿಯೇ?
ಕ್ರೌರ್ಯದ ವಿಡಿಯೋ ವೈರಲ್ ಆದ ಬಳಿಕ, ಘಟನೆ ಬಗ್ಗೆ ತನಿಖೆ ನಡೆಸುವಂತೆ ಕೇರಳ ಕಾರ್ಮಿಕ ಸಚಿವ ವಿ ಶಿವನ್‌ಕುಟ್ಟಿ ಆದೇಶಿಸಿದ್ದಾರೆ. ಆದರೆ, ಕಂಪನಿ ವಿರುದ್ದದ ಆರೋಪವನ್ನು ಕಂಪನಿಯ ಮಾಲೀಕ ನಿರಾಕರಿಸಿದ್ದಾರೆ. ಘಟನೆಗೂ ತಮ್ಮ ಕಂಪನಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಮತ್ತೊಂದು ಗಮನಾರ್ಹ ವಿವಾರವೆಂದರೆ, ಇದೇ ಕಂಪನಿಯ ಮಾಲೀಕನನ್ನು ಈ ಹಿಂದೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಆತ ಈಗ ಜಾಮೀನು ಪಡೆದು ಹೊರಬಂದಿದ್ದಾರೆ ಎಂದು ಹೇಳಲಾಗಿದೆ.