ಚಂದದ ಹೆಣ್ಣುಮಕ್ಕಳನ್ನು ಅಪಹರಿಸಿ ತಾವು ಅನುಭವಿಸಿದ ನಂತರ ತಂದೊಪ್ಪಿಸಿದ ಹುಡುಗರಿಗೆ ಬಿಟ್ಟು ಕೊಡೋದು, ಅವರೂ ಬಳಸಿದ ನಂತರ ಸುಮ್ಮನಾದರೆ ಸರಿ; ಇಲ್ಲದಿದ್ದರೆ ಕತ್ತು ಹಿಸುಕಿ ನೇತ್ರಾವತಿಗೆ ಎಸೆಯೋದು, ʼನದಿಗೆ ಹಾರಿ ಆತ್ಮಹತ್ಯೆʼ ಅಥವಾ ʼಅನಾಥ ಶವ ಪತ್ತೆʼ ಅಂತಷ್ಟೇ ಸ್ಥಳೀಯ ಪತ್ರಿಕೆಗಳಲ್ಲಿ ಒಂದು ಸುದ್ದಿ ಬರುವುದು ಮಾಮೂಲಿಯಾಗಿತ್ತು ಅಂತಾರೆ ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ
ಧರ್ಮಸ್ಥಳದಲ್ಲಿ ಹನ್ನೊಂದು ವರ್ಷಗಳಿಂದ ಅನುಮಾನಾಸ್ಪದ ಸಾವುಗಳ ಸಂಖ್ಯೆ ಕಡಿಮೆಯಾಗಿದೆ ಯಾಕೆ? ಸೌಜನ್ಯ ಅತ್ಯಾಚಾರ ಕೊಲೆ ಬೆಳಕಿಗೆ ಬಂದ ನಂತರ ನಡೆದ ಹೋರಾಟದ ಸಮಯದಲ್ಲಿ ನಾವು ಎತ್ತಿದ ನಾನೂರಕ್ಕೂ ಹೆಚ್ಚು ಅನುಮಾನಾಸ್ಪದ ಸಾವುಗಳ ಬಗೆಗಿನ ಪ್ರಶ್ನೆಗೆ ಆ ಗ್ಯಾಂಗ್ ಭಯಗೊಂಡಿತೇ? ಎಂಬ ಮಹತ್ವದ ಪ್ರಶ್ನೆಯೊಂದನ್ನು ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಎತ್ತಿದ್ದಾರೆ.
ಹನ್ನೊಂದು ವರ್ಷಗಳ ಹಿಂದೆ ನಡೆದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ/ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಸಂತೋಷ್ ರಾವ್ ಅವರನ್ನು ನಿರ್ದೋಷಿ ಎಂದು ಸಿಬಿಐ ಕೋರ್ಟ್ ತೀರ್ಪಿತ್ತ ಹಿನ್ನೆಲೆಯಲ್ಲಿ ಈ ದಿನ.ಕಾಮ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಈ ಪ್ರಶ್ನೆ ಎತ್ತಿದ್ದಾರೆ.
ಧರ್ಮಸ್ಥಳದಲ್ಲಿ ಹಲವು ದಶಕಗಳಿಂದ ನಡೆಯುತ್ತಿದ್ದ ಅನುಮಾನಾಸ್ಪದ ಸಾವುಗಳಿಗೆ ಒಂದು ಇತಿಹಾಸವೇ ಇದೆ. ಅದರ ಹಿಂದೆ ದೊಡ್ಡವರ ಗ್ಯಾಂಗೇ ಇದೆ. ಚಂದದ ಹೆಣ್ಣುಮಕ್ಕಳನ್ನು ಅಪಹರಿಸಿ ತಾವು ಅನುಭವಿಸಿದ ನಂತರ ತಂದೊಪ್ಪಿಸಿದ ಹುಡುಗರಿಗೆ ಬಿಟ್ಟು ಕೊಡೋದು, ಅವರೂ ಬಳಸಿದ ನಂತರ ಸುಮ್ಮನಾದರೆ ಸರಿ ಇಲ್ಲದಿದ್ದರೆ ಕತ್ತು ಹಿಸುಕಿ ನೇತ್ರಾವತಿಗೆ ಎಸೆಯೋದು. ನಂತರ ʼನದಿಗೆ ಹಾರಿ ಆತ್ಮಹತ್ಯೆʼ ಅಥವಾ ʼಅನಾಥ ಶವ ಪತ್ತೆʼ ಅಂತಷ್ಟೇ ಸ್ಥಳೀಯ ಪತ್ರಿಕೆಗಳಲ್ಲಿ ಒಂದು ಸುದ್ದಿ ಬರುವುದು ಮಾಮೂಲಿಯಾಗಿತ್ತು. ಆದರೆ, ಸೌಜನ್ಯ ಪ್ರಕರಣದ ನಂತರ ಇಂತಹ ಸಾವುಗಳು ಧರ್ಮಸ್ಥಳದಲ್ಲಿ ನಡೆಯುತ್ತಿಲ್ಲ ಎಂಬುದು ಎಲ್ಲದಕ್ಕೂ ಉತ್ತರವಾಗಿದೆ. ಅದರ ಹಿಂದೆ ಯಾರಿದ್ದರೋ ಅವರೇ ಸೌಜನ್ಯ ಕೊಲೆಯ ಹಿಂದೆಯೂ ಇದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈ ಪ್ರಕರಣದಲ್ಲಿ ಸಂತೋಷ್ ರಾವ್ ಅವರನ್ನು ಫಿಕ್ಸ್ ಮಾಡಿ ಮುಗಿಸುವ ಅವರ ಯೋಜನೆ ವಿಫಲವಾಗಿತ್ತು. ವಿಚಾರಣೆ ನಡೆಸಿದ ಸಿಬಿಐ ತನಿಖಾಧಿಕಾರಿ ರೇಖಾ ಮೇಡಂ ಆರೋಪಿ ಈ ಕೃತ್ಯ ಎಸಗಿಲ್ಲ. ಸೌಜನ್ಯ ಮನೆಯವರು ಆರೋಪಿಸಿರುವ ವ್ಯಕ್ತಿಗಳನ್ನು ವಿಚಾರಣೆ ನಡೆಸಬೇಕು ಎಂದು ಷರಾ ಬರೆದಿದ್ದರು. ತಕ್ಷಣ ನಾವೇ ಆತನಿಗೆ ಜಾಮೀನು ನೀಡಿ ಹೊರಗಡೆ ತಂದಿದ್ದೆವು. ಅಷ್ಟರಲ್ಲಾಗಲೇ ಆರೋಪಿಗಳು ಆದೇಶಕ್ಕೆ ತಡೆಯಾಜ್ಞೆ ತಂದಿದ್ದರು. ಅವರು ತಪ್ಪು ಮಾಡಿಲ್ಲದಿದ್ದರೆ ಸ್ಟೇ ತಂದಿದ್ದು ಯಾಕೆ? ಎಂದು ತಿಮರೋಡಿ ಪ್ರಶ್ನಿಸಿದ್ದಾರೆ.
ಸೌಜನ್ಯ ಎಂಬ ಶಕ್ತಿ : ಸೌಜನ್ಯ ಒಂದು ಶಕ್ತಿಯಾಗಿ ನಿಂತಿದ್ದಾಳೆ. ಆಕೆ ಅಪಾರ ದೈವಭಕ್ತಿಯ ಹುಡುಗಿಯಾಗಿದ್ದಳು. ಐವರು ಮಕ್ಕಳಲ್ಲಿ ಸೌಜನ್ಯ ಎರಡನೆಯವಳು. ಅಕ್ಕನಿಗೆ ಮದುವೆಯಾಗಿತ್ತು. ಆಕೆ ನಾಪತ್ತೆಯಾದ ಆ ದಿನ ಮನೆತುಂಬಿಸುವ ಹಬ್ಬ ಇತ್ತು. ಮಧ್ಯಾಹ್ನ ಹೊಸ ಅಕ್ಕಿಯ ಊಟ, ಆದರೆ ಬೆಳಿಗ್ಗೆ ಕಾಲೇಜಿಗೆ ಹೋಗುವಾಗ ಸೌಜನ್ಯ ತಿಂಡಿ ತಿಂದಿರಲಿಲ್ಲ. ಇಡೀ ದಿನ ಉಪವಾಸ ಇದ್ದು ಸಂಜೆ ಮನೆಗೆ ಬಂದ ನಂತರ ಹೊಸ ಅಕ್ಕಿ ಊಟ ಮಾಡ್ತೇನೆ ಎಂದು ಹೇಳಿ ಹೋಗಿದ್ದಳು. ಆಕೆಯ ದೈವಿಶಕ್ತಿಯ ಪರಿಣಾಮವಾಗಿ ಅಮಾಯಕನೊಬ್ಬನನ್ನು ಈ ಪ್ರಕರಣದಲ್ಲಿ ಬಲಿಪಶು ಮಾಡಲು ಮಾಡಿದ ಪ್ರಯತ್ನ ವಿಫಲವಾಗಿದೆ. ಅಸಲಿ ಆಟ ಇನ್ನು ಶುರುವಾಗುತ್ತದೆ. ಮೃತದೇಹ ಸಿಕ್ಕಿದ ಹೈವೆ ಪಕ್ಕದಲ್ಲಿಯೇ ಸೌಜನ್ಯಳ 25 ಅಡಿ ಎತ್ತರದ ಪ್ರತಿಮೆ ಸ್ಥಾಪಿಸಲಿದ್ದೇವೆ. ಅಲ್ಲಿ ಸಾಗುವ ಎಲ್ಲರಿಗೂ ಸೌಜನ್ಯಳನ್ನು ಕೊಂದವರ ನೆನಪಾಗಬೇಕು. ನಾವು ಸದ್ಯದಲ್ಲಿಯೇ ಬೆಂಗಳೂರಿನ ಕೆಂಪೇಗೌಡ ಪ್ರತಿಮೆಯ ಎದುರು ಧರಣಿ ನಡೆಸಲಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ನಿವೃತ್ತ ನ್ಯಾಯಮೂರ್ತಿಗಳಿಂದ ಮರು ತನಿಖೆಗೆ ಆದೇಶ ನೀಡುವಂತೆ ಒತ್ತಾಯಿಸಲಿದ್ದೇವೆ. ಆದಿ ಚುಂಚನಗಿರಿ ಮಠಕ್ಕೆ ಸೌಜನ್ಯ ಕುಟುಂಬ ಸಮೇತ ಹೋಗಿ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಭೇಟಿ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಒಡನಾಡಿ ಸ್ಟ್ಯಾನ್ಲಿ ಏನಂದರು?: ಹಾಗಿದ್ದರೆ ಸೌಜನ್ಯ ಕೊಲೆ ಪ್ರಕರಣದ ದೋಷಿ ಯಾರು ಎಂಬ ಚರ್ಚೆಗೆ ಈಗ ಜೀವ ಬಂದಿದೆ. ಈ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿದ ಮೈಸೂರಿನ ಒಡನಾಡಿಯ ಸ್ಟ್ಯಾನ್ಲಿ, “ಈ ಪ್ರಕರಣದಲ್ಲಿ ನಿಜವಾದ ತನಿಖೆ ಇನ್ನು ನಡೆಯಬೇಕಿದೆ. ಆರೋಪಿತ ನಿರ್ದೋಷಿ ಎಂದು ಸಿಬಿಐ ಕೋರ್ಟ್ ತೀರ್ಪು ನೀಡಿದೆ. ಇಂತರಹ ಪ್ರಕರಣಗಳಲ್ಲಿ ಸಿಬಿಐ ಕೋರ್ಟ್ ನಿಜವಾದ ಅಪರಾಧಿಗಳನ್ನು ಪತ್ತೆ ಹಚ್ಚಲು ಸೂಕ್ತ ಸಾಕ್ಷ್ಯಗಳನ್ನು ಕಲೆ ಹಾಕುವಂತೆ ನಿರ್ದೇಶನ ನೀಡುತ್ತದೆ. ಬಂಧಿತ ಆರೋಪಿ ನಿರ್ದೋಷಿ ಎಂದಾದ ಮಾತ್ರಕ್ಕೆ ಪ್ರೊಸಿಡಿಂಗ್ಸ್ ಮುಗಿದಿಲ್ಲ. ಕೇರಳದ ಪ್ರಕರಣವೊಂದರಲ್ಲಿ ಸಿಬಿಐ ಮೂರನೇ ಬಾರಿ ತನಿಖೆ ನಡೆಸಿ ಕೊಲೆ ಆರೋಪಿ ಪಾದ್ರಿಗೆ ಶಿಕ್ಷೆ ವಿಧಿಸಿದೆ. ಈ ಪ್ರಕರಣದಲ್ಲೂ ಒಂದು ಮಟ್ಟಿನ ಆಶಾಭಾವ ಇಟ್ಟುಕೊಳ್ಳಬಹುದು. ಆದರೆ, ಪ್ರಭಾವಿಗಳ ಮೇಲೆ ಅನುಮಾನ ಇರುವ ಕಾರಣ ರಾಜಕೀಯ ಒತ್ತಡಗಳೆಲ್ಲ ಇದ್ದೇ ಇರುತ್ತವೆ” ಎಂದು ಹೇಳಿದ್ದಾರೆ.
“ವೀರೇಂದ್ರ ಹೆಗ್ಗಡೆಯವರು ನಿಜವಾಗಿಯೂ ಧರ್ಮಾಧಿಕಾರಿಗಳು ಎಂದಾದರೆ ಈ ಪ್ರಕರಣದಲ್ಲಿ ನ್ಯಾಯಯುತ ತನಿಖೆಗೆ ಯಾಕೆ ಓಡಾಡಿಲಿಲ್ಲ. ಸ್ತ್ರೀಶಕ್ತಿ ಗುಂಪುಗಳು, ಯುವಕರ ಸಶಕ್ತತೆಗೆ ಕೆಲಸ ಮಾಡಿದ ಅವರು ತಮ್ಮ ಧರ್ಮಸ್ಥಳದಲ್ಲಿಯೇ ನಡೆದ ಮಗಳ ಸಮಾನವಾಗ ಸೌಜನ್ಯ ಪರ ಯಾಕೆ ನಿಲ್ಲಲಿಲ್ಲ? ಈಗಲೂ ಒಬ್ಬ ಧರ್ಮಾಧಿಕಾರಿಯಾಗಿ ಹಾಗೂ ರಾಜ್ಯಸಭೆಯ ಸದಸ್ಯರಾಗಿ ಅವರಿಗೆ ಜವಾಬ್ದಾರಿ ಇದೆ. ಈ ಪ್ರಕರಣದ ನಿಜ ಅಪರಾಧಿಗಳ ಪತ್ತೆಗೆ ಈಗಲಾದರೂ ಅವರು ಸಹಕರಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

ಸುಮೋಟೋ ದಾಖಲಿಸಿ ತನಿಖೆ: ಮಕ್ಕಳ ಹಕ್ಕುಗಳ ಕಾರ್ಯಕರ್ತ ಮತ್ತು ವಕೀಲರಾಗಿರುವ ಬಾಬುರಾಜ್ ಪಲ್ಲದನ ಅವರು ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಸಿಬಿಐ ಕೋರ್ಟ್ ಮರುತನಿಖೆಗೆ ಆದೇಶ ನೀಡಬಹುದು ಅಥವಾ ಸುಮೋಟೋ ದಾಖಲಿಸಿ ತನಿಖೆ ನಡೆಸಬಹುದು. ರಾಜ್ಯ ಸರ್ಕಾರ ಮನಸ್ಸು ಮಾಡಿದರೆ ಸೌಜನ್ಯ ಕುಟುಂಬದ ಅರ್ಜಿಯ ಮೇಲೆ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ತಂಡ ರಚನೆ ಮಾಡಿ, ಸಿಐಡಿ ಅಥವಾ ಸಿಸಿಬಿ ಮೂಲಕ ತನಿಖೆ ನಡೆಸಬಹುದು. ಎಷ್ಟೇ ಸಾಕ್ಷ್ಯ ನಾಶವಾಗಿದ್ದರೂ ಯಾವುದಾದರು ಒಂದು ಸಾಕ್ಷ್ಯ ಇದ್ದೇ ಇರುತ್ತದೆ” ಎಂದಿದ್ದಾರೆ.
***
ಈ ಪ್ರಕರಣ ನಡೆದಾಗ ದಕ್ಷಿಣ ಕನ್ನಡ ಜಿಲ್ಲೆಯವರೇ ಆದ ಸದಾನಂದ ಗೌಡರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಉಜಿರೆ ಸಮೀಪದ ಕರಂದ್ಲಾಜೆಯವರಾದ ಶೋಭಾ ಇಂಧನ ಸಚಿವರಾಗಿದ್ದರು. ಮಂಗಳೂರಿನಲ್ಲಿ ಸುಮಾರು ಐವತ್ತು ಸಾವಿರ ಮಂದಿ ಸೇರಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಸಂತೋಷ್ ರಾವ್ ಸೌಜನ್ಯಳನ್ನು ಅತ್ಯಾಚಾರ, ಕೊಲೆ ಮಾಡಿರಲು ಸಾಧ್ಯವೇ ಇಲ್ಲ ಎಂದು ಒಕ್ಕೊರಲಿನಿಂದ ಸಾರಿ ಹೇಳಲಾಗಿತ್ತು. ಈ ಪ್ರಕರಣವನ್ನು ಪೊಲೀಸರು ಸರಿಯಾದ ದಾರಿಯಲ್ಲಿ ತನಿಖೆ ನಡೆಸುತ್ತಿಲ್ಲ. ಹಾಗಾಗಿ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು. ಆದರೆ, ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದು ಕೆಲ ತಿಂಗಳಲ್ಲೇ ಸೌಜನ್ಯ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಯಿತು.
ಈಗ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅದೇ ಸಿದ್ದರಾಮಯ್ಯ ಈಗ ಮುಖ್ಯಮಂತ್ರಿಯಾಗಿದ್ದಾರೆ. ಕಾಕತಾಳೀಯ ಎಂಬಂತೆ ಹತ್ತು ವರ್ಷಗಳ ನಂತರ ಸಿಬಿಐ ತೀರ್ಪು ಬಂದಿದೆ. ಈ ಪ್ರಕರಣವನ್ನು ಮರು ತನಿಖೆ ನಡೆಸಬೇಕು. ಸಮರ್ಥ ಪೊಲೀಸ್ ಅಧಿಕಾರಿಗಳ ತಂಡಕ್ಕೆ ತನಿಖೆಯ ಜವಾಬ್ದಾರಿಯನ್ನು ವಹಿಸಿ ನಿಷ್ಪಕ್ಷಪಾತ ತನಿಖೆ ನಡೆದು ಸೌಜನ್ಯ ಕೊಲೆಯ ಆರೋಪಿಗಳಿಗೆ ತಕ್ಕ ಶಿಕ್ಷೆಯಾದರೆ ಇಷ್ಟು ವರ್ಷಗಳಿಂದ ‘ದೊಡ್ಡವರನ್ನು’ ಎದುರಿಸಿ ಕಾನೂನು ಹೋರಾಟ ನಡೆಸಿದ್ದ ಬಡ ಕುಟುಂಬವೊಂದಕ್ಕೆ ನ್ಯಾಯ ಸಿಕ್ಕಂತಾಗುತ್ತದೆ.

ಹೇಮಾ ವೆಂಕಟ್
ʼಈ ದಿನ.ಕಾಮ್ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.