ಕಳ್ಳತನದ ಆರೋಪದ ಮೇಲೆ ಬಾಲಕನನ್ನು ಮರಕ್ಕೆ ಕಟ್ಟಿಹಾಕಿ, ಆತನ ಮೇಲೆ ಅಮಾನುಷವಾಗಿ ಹಲ್ಲೆಗೈದು, ಆತನ ಗುಪ್ತಾಂಗಕ್ಕೆ ಕೆಂಪು ಇರುವೆ ಬಿಟ್ಟು ಗುಂಪೊಂದು ಕ್ರೌರ್ಯ ಮೆರೆದಿರುವ ಅಮಾನವೀಯ, ಅಮಾನುಷ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
ದಾವಣಗೆರೆಯ ಚನ್ನಗಿರಿ ತಾಲೂಕಿನ ಅಸ್ತಾಪನಹಳ್ಳಿ ಗ್ರಾಮದಲ್ಲಿ ಕ್ರೌರ್ಯದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಘಟನೆಯು ಕೆಲವು ತಿಂಗಳುಗಳ ಹಿಂದೆಯೇ ನಡೆದಿದ್ದು, ಈಗ ವಿಡಿಯೋ ವೈರಲ್ ಆಗಿರುವ ಕಾರಣ, ಬೆಳಕಿಗೆ ಬಂದಿದೆ. ಸಂತ್ರಸ್ತನನ್ನು ಹಕ್ಕಿ-ಪಿಕ್ಕಿ ಸಮುದಾಯದ ಬಾಲಕನೆಂದು ಗುರಿತಿಸಲಾಗಿದೆ. ಬಾಲಕನ ಮೇಲೆ ಸುಮಾರು 10 ರಿಂದ 15 ಮಂದಿಯ ಗುಂಪು ದೊಣ್ಣೆ, ಡ್ರಿಪ್ ಪೈಪ್ ನಿಂದ ಹಲ್ಲೆ ಮಾಡಿದೆ.
ಘಟನೆ ಸಂಬಂಧ ಬಾಲಕನ ಅಜ್ಜ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ 9 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಗ್ರಾಮದ ಸುಭಾಷ್ (23), ಲಕ್ಕಿ(21), ದರ್ಶನ್ (22), ಪರಶು (25), ಶಿವದರ್ಶನ್ (23), ಹರೀಶ್ (25), ಪಟ್ಟಿ ರಾಜು(20), ಭೂಣಿ (18), ಸುಧನ್ ಅಲಿಯಾಸ್ ಮಧುಸೂಧನ್ ಎಂಬ ಆರೋಪಿಗಳು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.