- ಹಿಮಾಚಲ ಪ್ರದೇಶ ಮಂಡಿ ಮತ್ತು ಕುಲ್ಲು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ
- ಮುಂದಿನ ಎರಡು ದಿನಗಳ ಕಾಲ ರಾಜ್ಯದಲ್ಲಿ ಗುಡುಗು ಸಹಿತ ಭಾರೀ ಮಳೆಯ ಎಚ್ಚರಿಕೆ
ಹಿಮಾಚಲ ಪ್ರದೇಶ ರಾಜ್ಯದಲ್ಲಿ ದಿಢೀರ್ ಪ್ರವಾಹ ಮತ್ತು ಭೂಕುಸಿತ ಉಂಟಾಗಿದ್ದು ಸಂಚಾರ ಅಸ್ತವ್ಯಸ್ಥಗೊಂಡು ಪ್ರವಾಸಿಗರು ಪರದಾಡುವಂತಾಗಿದೆ ಎಂದು ಮಾಧ್ಯಮಗಳು ಸೋಮವಾರ (ಜೂನ್ 26) ವರದಿ ಮಾಡಿವೆ.
ರಾಜ್ಯದಲ್ಲಿನ ಮಂಡಿ ಮತ್ತು ಕುಲ್ಲು ನಗರಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಇದ್ದಕ್ಕಿದ್ದಂತೆ ಭೂಕುಸಿತ ಉಂಟಾಗಿ ಸಂಚಾರ ಸ್ಥಗಿತಗೊಂಡಿದೆ.
ಇದರಿಂದ 15 ಕಿ.ಮೀವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದು, ತಮ್ಮ ಸ್ಥಳ ತಲುಪಲು ಹಿಮಾಚಲ ಪ್ರದೇಶ ರಾಜ್ಯದಲ್ಲಿ ಹಾದುಹೋಗುತ್ತಿದ್ದ ವಾಹನ ಸವಾರರು ಈಗ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಪರದಾಡುತ್ತಿದ್ದಾರೆ.
ರಾಜ್ಯದಲ್ಲಿ ಪ್ರವಾಹದ ಪರಿಸ್ಥಿತಿಯೂ ಉಂಟಾಗಿದೆ. ಇದರಿಂದ ಸುಮಾರು 200 ಪ್ರವಾಸಿಗರಿಗೆ ಹೋಟೆಲ್‌ಗಳಲ್ಲಿ ತಂಗಲು ಕೊಠಡಿಗಳು ಸಿಗದೆ ಪರದಾಡುವಂತಾಗಿದೆ ಎಂದು ವರದಿಯಾಗಿದೆ.
ರಾಜ್ಯದ ಗುಡ್ಡಗಾಡು ಪ್ರದೇಶದಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಭಾನುವಾರ ಸಂಜೆ ಹಠಾತ್ ಉಂಟಾದ ಪ್ರವಾಹ ಮತ್ತು ಭೂಕುಸಿತಗಳಿಂದ ರಾಷ್ಟ್ರೀಯ ಹೆದ್ದಾರಿ ಸ್ಥಗಿತಗೊಂಡಿದೆ.
ರಸ್ತೆಗೆ ಉರುಳಿ ಹೆದ್ದಾರಿ ಬಂದ್ ಆಗಲು ಕಾರಣವಾಗಿರುವ ದೊಡ್ಡ ಬಂಡೆಗಳನ್ನು ಸ್ಫೋಟಿಸಲು ಸ್ಫೋಟಕಗಳನ್ನು ಬಳಸಲಾಗುತ್ತಿದೆ. ಇನ್ನೂ ಏಳೆಂಟು ಗಂಟೆಯ ನಂತರ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಈ ಸುದ್ದಿ ಓದಿದ್ದೀರಾ? 62 ವರ್ಷಗಳ ನಂತರ ದೆಹಲಿ, ಮುಂಬೈ ನಗರಗಳಿಗೆ ಒಟ್ಟಿಗೆ ಆಗಮಿಸಿದ ಮುಂಗಾರು
ಚಂಡೀಗಢ – ಮನಾಲಿ ಹೆದ್ದಾರಿಯಲ್ಲೂ ಬಂಡೆಗಳು ಉರುಳಿದ್ದು, ಅವುಗಳನ್ನು ತೆರವುಗೊಳಿಸಲು ರಾಜ್ಯ ವಿಪತ್ತು ನಿರ್ವಹಣಾ ಘಟಕ ಕಾರ್ಯಾಚರಣೆ ನಡೆಸುತ್ತಿದೆ.
ಹಿಮಾಚಲ ಪ್ರದೇಶ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿರುವುದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಮುಂದಿನ ಎರಡು ದಿನಗಳ ಕಾಲ ರಾಜ್ಯದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಸ್ಥಳೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಭಾನುವಾರ ಸಂಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾದ ಭೂಕುಸಿತದಿಂದ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಿ.ಮೀ ಗಟ್ಟಲೆ ವಾಹನಗಳು ಸಾಲುಗಟ್ಟಿರುವುದರಿಂದ ಪ್ರವಾಸಿಗರು ವಾಹನದಲ್ಲೇ ಸಮಯ ಕಳೆಯುತ್ತಿದ್ದಾರೆ. ಕೆಲವರು ವಾಹನಗಳನ್ನು ಅಲ್ಲಿಯೇ ಬಿಟ್ಟು ಹೋಟೆಲ್‌ಗಳನ್ನು ಹುಡುಕುತ್ತಿದ್ದಾರೆ ಎಂದು ವರದಿಯಾಗಿದೆ.