ರಾಜ್ಯದಲ್ಲಿ ಅಂದಿನಿಂದ ಇಂದಿನವರೆಗೆ ಆಳಿ ಹೋದ ಎಲ್ಲಾ ಪಕ್ಷಗಳು ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿವೆ. ವಿದ್ಯೆ, ಉದ್ಯೋಗ, ಅನುದಾನ ಸೇರಿದಂತೆ ಉತ್ತರ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗಾಗಿ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವಾಗಿ ಘೋಷಿಸಬೇಕು ಎಂದು ಅಖಿಲ ಭಾರತ ಜನಗಣ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಎನ್ ಗಂಗಿರೆಡ್ಡಿ ಒತ್ತಾಯಿಸಿದರು.
ನಗರದ ಮುಂಡೂರು ರಾಮಪ್ಪ ಸಭಾಂಗಣದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, “ಹೈದ್ರಾಬಾದ್ ಕರ್ನಾಟಕದ 6 ಜಿಲ್ಲೆಗಳು ಮತ್ತು ಬಾಂಬೇ ಕರ್ನಾಟಕ 7 ಜಿಲ್ಲೆಗಳು ಸೇರಿ ಒಟ್ಟು 13 ಜಿಲ್ಲೆಗಳನ್ನು ಈ ಹಿಂದೆ ಕರ್ನಾಟಕ ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲಾ ಪಕ್ಷಗಳು ನಿರ್ಲಕ್ಷಿಸಿವೆ. ಇದರಿಂದ ಉತ್ತರ ಕರ್ನಾಟಕ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಪಟ್ಟು ಯಾವುದೇ ಅಭಿವೃದ್ಧಿ ಹೊಂದಿಲ್ಲ. ಇಂತಹ ಪ್ರಾದೇಶಿಕ ಅಸಮಾತೋಲನ ಮತ್ತು ತಾರಾತಮ್ಯವನ್ನು ಖಂಡಿಸಿ 13 ಜಿಲ್ಲೆಗಳಿಗೆ ಪ್ರತ್ಯೇಕ ರಾಜ್ಯ ಬೇಕೆಂದು” ಆಗ್ರಹಿಸಿದರು.
“ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದಲ್ಲಿ 13 ಜಿಲ್ಲೆಗಳಲ್ಲಿ ವಿದ್ಯೆ ಉದ್ಯೋಗ ಆರ್ಥಿಕ ರಾಜಕೀಯ ಸೇರಿದಂತೆ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.
“ಜನಗಣ ಒಕ್ಕೂಟದಿಂದ 2010ನೇ ಇಸವಿಯಿಂದ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮಾಡುತ್ತಾ ಬರಲಾಗುತ್ತಿದೆ. 13 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಎಲ್ಲಾ ಜಿಲ್ಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
2010 ರಿಂದ 2024ರ ವರೆಗೆ ಕೇಂದ್ರ ಸರ್ಕಾರಕ್ಕೆ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರಗಳನ್ನೂ ಬರೆಯಲಾಗಿದೆ. ಅಲ್ಲದೆ 4 ಜಿಲ್ಲೆಗಳನ್ನು ಒಳಗೊಂಡ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ಮೊದಲಿನಿಂದಲೂ ಬಳ್ಳಾರಿಯಲ್ಲಿ ಇದೆ. ಈಗ ಕೆಲವು ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ವಿಜಯನಗರ ಜಿಲ್ಲೆಗೆ ವರ್ಗಾವಣೆ ಮಾಡುವ ಹುನ್ನಾರ ನಡೆಸಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬಳ್ಳಾರಿ | ದಲಿತರಿಗೆ ಸೇರಿದ ಜಾಗ, ಬಾವಿ ಅತಿಕ್ರಮಣ; ತೆರವಿಗೆ ಪಿ ಶೇಖರ್ ಆಗ್ರಹ
“ಈ ಹಿಂದೆ ಬಿ.ನಾಗೇಂದ್ರ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಕೊಳಗಲ್ಲು ಗ್ರಾಮದ ಹತ್ತಿರ ಮೆಗಾ ಡೈರಿ ಮಾಡಬೇಕೆಂದು ಜಮೀನು ಮಂಜೂರು ಮಾಡಿಸಿದ್ದರು. ಆದರೆ ಇಲ್ಲಿಯವರೆಗೆ ಆ ಜಮೀನಿನಲ್ಲಿ ಮೆಗಾ ಡೈರಿ ವಿಷಯವಾಗಿ ಯಾವುದೇ ಚಟುವಟಿಕೆ ನಡೆದಿಲ್ಲ. ಕೊಳಗಲ್ಲು ಪ್ರದೇಶದಲ್ಲಿ ಗುರುತಿಸಿದ 25 ಎಕರೆ ಜಮೀನಿನಲ್ಲಿ ಕೂಡಲೇ ಮೆಗಾ ಡೈರಿಯನ್ನು ಆರಂಭಿಸಬೇಕು” ಎಮದು ಒತ್ತಾಯಿಸಿದರು.
