ವಕ್ಫ್ ಕಾನೂನು ಜಾರಿಗೆ ತಂದ ನಂತರ, ಬಿಜೆಪಿ ಈಗ ಕ್ರೈಸ್ತರು, ಜೈನರು, ಬೌದ್ಧರು ಮತ್ತು ಹಿಂದೂ ದೇವಾಲಯಗಳ ಭೂಮಿಯ ಮೇಲೆ ಕಣ್ಣಿಟ್ಟಿದೆ ಎಂದು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಭಾನುವಾರ ಆರೋಪಿಸಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖವಾಣಿಯಾದ ಆರ್ಗನೈಸರ್‌ನಲ್ಲಿನ ಲೇಖನವನ್ನು ಉಲ್ಲೇಖಿಸಿ ಎನ್‌ಸಿಪಿ (ಎಸ್‌ಪಿ) ನಾಯಕ ಜಿತೇಂದ್ರ ಅವ್ಹಾದ್ ಕೂಡ ಇದೇ ರೀತಿಯ ಆರೋಪ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಆರ್‌ಎಸ್‌ಎಸ್‌ನ ಭಾಗವತರು ಮೌನ ಮುರಿದು ಮೋದಿ ಬಗ್ಗೆ ಗೊಣಗುತ್ತಿರುವುದೇಕೆ?
ಭಾನುವಾರ ಈ ಬಗ್ಗೆ ಶಿವ ಸಂಚಾರ ಸೇನೆಯ (ಶಿವಸೇನೆಯ ಐಟಿ ಮತ್ತು ಸಂವಹನ ವಿಭಾಗ) ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ, “ವಕ್ಫ್ ಕಾನೂನಿನ ನಂತರ ಮುಂದಿನ ಹೆಜ್ಜೆ ಕ್ರೈಸ್ತರು, ಜೈನರು, ಬೌದ್ಧರು ಮತ್ತು ಹಿಂದೂ ದೇವಾಲಯಗಳ ಭೂಮಿಯ ಮೇಲೆ ಕಣ್ಣಿಡುವುದಾಗಿದೆ. ತಮ್ಮ ಸ್ನೇಹಿತರಿಗೆ ಈ ಭೂಮಿ ನೀಡುವ ಹುನ್ನಾರವಿದೆ. ಅವರಿಗೆ (ಕೇಂದ್ರದ ಬಿಜೆಪಿ ಸರ್ಕಾರ) ಯಾವುದೇ ಸಮುದಾಯದ ಬಗ್ಗೆ ಪ್ರೀತಿಯಿಲ್ಲ” ಎಂದು ಹೇಳಿದರು.
ಈ ವಾರದ ಆರಂಭದಲ್ಲಿ 12 ಗಂಟೆಗಳ ಕಾಲ ನಡೆದ ಚರ್ಚೆಯ ನಂತರ ಲೋಕಸಭೆ ಮತ್ತು ರಾಜ್ಯಸಭೆ ಎರಡೂ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿದವು. ನಿರೀಕ್ಷೆಯಂತೆ 288 ಮತಗಳು ಮಸೂದೆ ಪರವಾಗಿ, 232 ಮತಗಳು ಮಸೂದೆ ವಿರುದ್ಧವಾಗಿ ಚಲಾವಣೆಯಾದವು. ರಾಜ್ಯಸಭೆಯಲ್ಲಿ, ಮಸೂದೆ ಪರವಾಗಿ 128 ಸದಸ್ಯರು ಮತ್ತು ವಿರುದ್ಧವಾಗಿ 95 ಸದಸ್ಯರು ಮತ ಚಲಾಯಿಸಿದರು. ಈ ಮಸೂದೆಗೆ ರಾಷ್ಟ್ರಪತಿ ಸಹಿ ಹಾಕಿದ್ದು, ಇದೀಗ ಕಾನೂನು ಜಾರಿಯಾಗಲಿದೆ.
Muslims targeted now it will b Christians
— Dr.Jitendra Awhad (@Awhadspeaks) April 6, 2025
An article in the Rashtriya Swayamsevak Sangh (RSS) mouthpiece, Organiser, has said that it is not the Waqf Board but the Catholic Church of India which is the largest landholder in the country.
The article 'Who has more land in India?…
ಈ ಕಾನೂನು ದೇಶದಲ್ಲಿ ಮುಸ್ಲಿಂ ಧಾರ್ಮಿಕ ದತ್ತಿಗಳಿಗೆ ಸಂಬಂಧಿಸಿದ ಸುಧಾರಣೆಗಳಿಗೆ ನಾಂದಿ ಹಾಡುತ್ತದೆ ಎಂದು ಸರ್ಕಾರ ಹೇಳುತ್ತದೆ. ಆದರೆ ಇದು ಮುಸ್ಲಿಮರ ಮೇಲೆ ದಾಳಿ, ಕಾನೂನು ಬಾಹಿರವೆಂದು ವಿಪಕ್ಷಗಳು ಆರೋಪಿಸಿದೆ. ಈಗಾಗಲೇ ಈ ವಿವಾದಾತ್ಮಕ ಕಾನೂನು ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಹಲವು ಅರ್ಜಿಗಳು ದಾಖಲಾಗಿವೆ.
ಇದನ್ನು ಓದಿದ್ದೀರಾ? ವಿಶ್ಲೇಷಣೆ | ಆರ್‌ಎಸ್‌ಎಸ್ ಮೀಸಲಾತಿ ವಿರುದ್ಧ ಇಲ್ಲವೇ?
“ಭವಿಷ್ಯದಲ್ಲಿ, ಎಲ್ಲಾ ವಕ್ಫ್ ಭೂಮಿ ಬಿಜೆಪಿಯ ‘ಕೈಗಾರಿಕಾ ಸ್ನೇಹಿತರ’ ಪಾಳಾಗುತ್ತದೆ” ಎಂದು ಠಾಕ್ರೆ ಅವರ ಪಕ್ಷದ ನಾಯಕ ಸಂಜಯ್ ರಾವತ್ ಹೇಳಿದರು. ಇನ್ನು ಎನ್‌ಸಿಪಿ (ಎಸ್‌ಪಿ) ನಾಯಕ ಜಿತೇಂದ್ರ ಅವ್ಹಾದ್, “ಮುಸ್ಲಿಮರನ್ನು ಗುರಿಯಾಗಿಸಿಕೊಂಡ ನಂತರ, ಈಗ ದೇಶದಲ್ಲಿ ಕ್ರೈಸ್ತರ ಸರದಿ ಬಂದಿದೆ” ಎಂದು ಹೇಳಿದ್ದಾರೆ.
ಆರ್‌ಎಸ್‌ಎಸ್ ಮುಖವಾಣಿ, “ವಕ್ಫ್ ಮಂಡಳಿಯಲ್ಲ, ಬದಲಾಗಿ ದೇಶದ ಅತಿದೊಡ್ಡ ಭೂಮಾಲೀಕರು ಭಾರತದ ಕ್ಯಾಥೋಲಿಕ್ ಚರ್ಚ್” ಎಂದು ಹೇಳಿಕೊಂಡಿದೆ. “ಭಾರತದಲ್ಲಿ ಯಾರಿಗೆ ಹೆಚ್ಚು ಭೂಮಿ ಇದೆ? ಕ್ಯಾಥೋಲಿಕ್ ಚರ್ಚ್ vs ವಕ್ಫ್ ಮಂಡಳಿ ಚರ್ಚೆ” ಎಂಬ ಶೀರ್ಷಿಕೆಯ ಲೇಖನವನ್ನು ಏಪ್ರಿಲ್ 3ರಂದು ಪ್ರಕಟಿಸಲಾಗಿದೆ ಎಂದು ಜಿತೇಂದ್ರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅವ್ಹಾದ್ ಪ್ರಕಾರ, ಕ್ಯಾಥೋಲಿಕ್ ಚರ್ಚ್ ಭಾರತದಾದ್ಯಂತ ಸುಮಾರು 17.29 ಕೋಟಿ ಎಕರೆ (7 ಕೋಟಿ ಹೆಕ್ಟೇರ್) ಭೂಮಿಯನ್ನು ಹೊಂದಿದೆ ಎಂದು ಲೇಖನವು ಹೇಳಿದೆ. “ಹೆಚ್ಚಿನ ಭೂಮಿಯನ್ನು ಬ್ರಿಟಿಷ್ ಆಳ್ವಿಕೆಯಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿದೆ. 1927ರಲ್ಲಿ, ಬ್ರಿಟಿಷ್ ಆಡಳಿತವು ಭಾರತೀಯ ಚರ್ಚ್ ಕಾಯ್ದೆಯನ್ನು ಅಂಗೀಕರಿಸಿದೆ. ಚರ್ಚ್‌ಗೆ ದೊಡ್ಡ ಪ್ರಮಾಣದ ಭೂ ಅನುದಾನವನ್ನು ಪಡೆಯಲು ದಾರಿ ಮಾಡಿಕೊಟ್ಟಿದೆ” ಎಂದು ಅವ್ಹಾದ್ ತನ್ನ ಪೋಸ್ಟ್‌ನಲ್ಲಿ ಲೇಖನವನ್ನು ಉಲ್ಲೇಖಿಸಿ ಬರೆದಿದ್ದಾರೆ.
