ಕೇಂದ್ರ ಸರ್ಕಾರವು ವಕ್ಫ್ ಮಸೂದೆಯನ್ನು ಏಕಪಕ್ಷೀಯವಾಗಿ ಅಂಗೀಕರಿಸಿರುವುದನ್ನು ಸ್ವರಾಜ್ ಇಂಡಿಯಾ ತೀವ್ರವಾಗಿ ಖಂಡಿಸಿದೆ. ಇದು ಸರ್ವಾಧಿಕಾರಿ ನಡೆ, ಭಾರತದ ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳಿಗೆ ಗಂಭೀರ ಹೊಡೆತ ಎಂದು ಸ್ವರಾಜ್ ಇಂಡಿಯಾ ಹೇಳಿದೆ.
“ಅಧಿಕ ಸಾರ್ವಜನಿಕ ಚರ್ಚೆ ನಡೆಸದೆಯೇ ಸಂಸತ್ತಿನ ಮೂಲಕ ಪರಿಚಯಿಸಿ ಈ ಶಾಸನವನ್ನು ಅಂಗೀಕರಿಸಲಾಗಿದೆ. ಇದು ಸಾಂವಿಧಾನಿಕ ತತ್ವಗಳ ಸ್ಪಷ್ಟ ಉಲ್ಲಂಘನೆ. ಧಾರ್ಮಿಕ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳಿಗೆ ಅವಮಾನವಾಗಿದೆ” ಎಂದು ಬೆಂಗಳೂರಿನ ಸ್ವರಾಜ್ ಇಂಡಿಯಾದ ಅಧ್ಯಕ್ಷ ವಿಜಯ್ ಕುಮಾರ್ ಹೇಳಿದರು.
ಇದನ್ನು ಓದಿದ್ದೀರಾ? ವಕ್ಫ್ ಮಸೂದೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಮುಂದಾದ ಆರ್‌ಜೆಡಿ ನಾಯಕರು
“ಯಾವುದೇ ಸಮುದಾಯ ಆಸ್ತಿ, ಧಾರ್ಮಿಕ ಸ್ವಾತಂತ್ರ್ಯ ಅಥವಾ ಆಸ್ತಿ ಹಕ್ಕುಗಳ ಮೇಲೆ ಪರಿಣಾಮ ಬೀರುವ ಯಾವುದೇ ಕಾನೂನು ಜಾರಿಗೆ ತರುವಾಗ ಅದರ ಬಗ್ಗೆ ಅಧಿಕ ಚರ್ಚೆ ನಡೆಯಬೇಕು. ಧಾರ್ಮಿಕ ಸಂಸ್ಥೆಗಳು, ರಾಜ್ಯ ಸರ್ಕಾರಗಳು, ಕಾನೂನು ತಜ್ಞರು, ಇತರೆ ಸಂಘಟನೆಗಳ ಜೊತೆ ಚರ್ಚಿಸದೆ ಜಾರಿಗೆ ತರಲಾದ ವಕ್ಫ್ ಮಸೂದೆಯು ಸರ್ವಾಧಿಕಾರ ನಡೆಯ ಅಪಾಯವನ್ನು ತೋರಿಸುತ್ತದೆ” ಎಂದು ತಿಳಿಸಿದ್ದಾರೆ.
“ಈ ಮಸೂದೆ ಕೇವಲ ಆಡಳಿತಾತ್ಮಕ ಬದಲಾವಣೆಗಳನ್ನು ಮಾಡುವುದಲ್ಲ, ಬದಲಾಗಿ ಭಾರತದ ಬಹುತ್ವದ ರಚನೆಯನ್ನೇ ಬದಲಾಯಿಸುತ್ತದೆ” ಎಂದು ಸ್ವರಾಜ್ ಇಂಡಿಯಾದ ಮುಖಂಡ ಗುಲಾಬ್ ಪಾಷಾ ಹೇಳಿದರು.
ವಕ್ಫ್ ಮಸೂದೆಗೆ ಒಪ್ಪಿಗೆ ನೀಡದಂತೆ ಭಾರತದ ರಾಷ್ಟ್ರಪತಿಗಳಿಗೆ ಕರೆ ನೀಡಿದೆ. ಹಾಗೆಯೇ ಈ ಕಾನೂನು ಬಾಹಿರ ಮಸೂದೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳುವಂತೆ ಸುಪ್ರೀಂ ಕೋರ್ಟ್‌ಗೆ ಶನಿವಾರ (ಏಪ್ರಿಲ್ 5) ಪತ್ರಿಕಾ ಹೇಳಿಕೆಯಲ್ಲಿ ಸ್ವರಾಜ್ ಇಂಡಿಯಾ ತಿಳಿಸಿದೆ. ಭಾನುವಾರ ಬೆಳಿಗ್ಗೆಯೇ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಈ ಮಸೂದೆಗೆ ಅಂಕಿತ ಹಾಕಿದ್ದಾರೆ.
“ಬಲವಂತ ಮತ್ತು ಕೇಂದ್ರೀಕರಣದ ಮೂಲಕ ಭಾರತವನ್ನು ಆಳಲು ಸಾಧ್ಯವಿಲ್ಲ. ಸ್ವರಾಜ್ ಇಂಡಿಯಾ ವಿಕೇಂದ್ರೀಕೃತ ಪ್ರಜಾಪ್ರಭುತ್ವ, ಜಾತ್ಯತೀತ ಆಡಳಿತ ಮತ್ತು ಸಾಂವಿಧಾನಿಕ ನೈತಿಕತೆಯನ್ನು ದೃಢವಾಗಿ ಬೆಂಬಲಿಸುತ್ತದೆ. ಈ ಮೂಲಭೂತ ಆದರ್ಶಗಳನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನವನ್ನೂ ವಿರೋಧಿಸುತ್ತದೆ” ಎಂದು ಸ್ವರಾಜ್ ಇಂಡಿಯಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಈ ವಾರದ ಆರಂಭದಲ್ಲಿ 12 ಗಂಟೆಗಳ ಕಾಲ ನಡೆದ ಚರ್ಚೆಯ ನಂತರ ಲೋಕಸಭೆ ಮತ್ತು ರಾಜ್ಯಸಭೆ ಎರಡೂ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿದವು. ನಿರೀಕ್ಷೆಯಂತೆ 288 ಮತಗಳು ಮಸೂದೆ ಪರವಾಗಿ, 232 ಮತಗಳು ಮಸೂದೆ ವಿರುದ್ಧವಾಗಿ ಚಲಾವಣೆಯಾದವು. ರಾಜ್ಯಸಭೆಯಲ್ಲಿ, ಮಸೂದೆ ಪರವಾಗಿ 128 ಸದಸ್ಯರು ಮತ್ತು ವಿರುದ್ಧವಾಗಿ 95 ಸದಸ್ಯರು ಮತ ಚಲಾಯಿಸಿದರು. ಈ ಮಸೂದೆಗೆ ರಾಷ್ಟ್ರಪತಿ ಸಹಿ ಹಾಕಿದ್ದು, ಇದೀಗ ವಿವಿಧ ರಾಜ್ಯಗಳಲ್ಲಿ ಈ ಕಾನೂನು ಅಂಗೀಕಾರವಾಗಬೇಕಿದೆ.
