ಅತ್ತೆಯ ಮನೆಯಲ್ಲಿ ಇಟ್ಟಿದ್ದ ಹಣವನ್ನು ಕದ್ದು ಪರರ ಮೇಲೆ ಕಳ್ಳತನದ ಕೃತ್ಯವನ್ನು ಹೊರಿಸಲು ಯತ್ನಸಿದ್ದ ಆರೋಪಿಯನ್ನು ಕಲಬುರಗಿ ಜಿಲ್ಲೆಯ ಕಾಳಗಿ ಠಾಣೆಯ ಪೊಲೀಸರು ಬಂಧಿಸಿ, ಆತನಿಂದ ₹9 ಲಕ್ಷ ವಶಕ್ಕೆ ಪಡೆದಿದ್ದಾರೆ.
ಕಾಳಗಿ ತಾಲ್ಲೂಕಿನ ಇವಣಿ ಗ್ರಾಮದ ಮೀನಪ್ಪ ರೇವಣಸಿದ್ದಪ್ಪ ಬೆನ್ನೂರ (38) ಬಂಧಿತ ಆರೋಪಿ. ಸಿದ್ದಮ್ಮ ಮಲ್ಲೇಶಪ್ಪ ರಟಕಲ್ ಅವರ ಮನೆಯ ಕಬ್ಬಿಣ ಪೆಟ್ಟಿಗೆಯಲ್ಲಿಟ್ಟಿದ್ದ ₹11 ಲಕ್ಷ ಕಳತನ ಮಾಡಿದ್ದ ಆರೋಪಿಯು, ಆಕೆಯ ತಮ್ಮನ ಮಗನಾಗಿದ್ದ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ₹1.70 ಲಕ್ಷ ಪಡೆದ ಮೀನಪ್ಪನ ತಮ್ಮ ಅನಿಲ್‌ನನ್ನು ಬಂಧಿಸಬೇಕಿದೆʼ ಎಂದು ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ತಿಳಿಸಿದ್ದಾರೆ.
ʼಪೊಲೀಸರು ಮೀನಪ್ಪನನ್ನು ಟೆಂಗಳಿ ಕ್ರಾಸ್‌ನಲ್ಲಿ ಹಿಡಿದು ವಿಚಾರಣೆಗೆ ಒಳಪಡಿಸಿದಾಗ, ಹಣದ ಆಸೆಗಾಗಿ ತಾನೇ ಕದ್ದಿದ್ದಾಗಿ ಒಪ್ಪಿಕೊಂಡಿದ್ದಾನೆ. ₹1.70 ಲಕ್ಷ ತನ್ನ ತಮ್ಮನಿಗೆ ನೀಡಿದ್ದಾಗಿ ಹೇಳಿದ್ದು, ಆತನನ್ನು ಸಹ ವಶಕ್ಕೆ ಪಡೆಯಬೇಕಿದೆ’ ಎಂದು ಮಾಹಿತಿ ನೀಡಿದರು.
ಮಾರ್ಚ್ 28ರಂದು ಸಿದ್ದಮ್ಮ (ಅತ್ತೆ) ಅವರೊಂದಿಗೆ ಹೊಲಕ್ಕೆ ಹೋದ ಮೀನಪ್ಪ, ಮಧ್ಯಾಹ್ನ ಹೊಲದಲ್ಲಿನ ಪೈಪ್ ಒಡೆದಿದೆ ಕಾಳಗಿ ಪಟ್ಟಣಕ್ಕೆ ತೆರಳಿ ತರುತ್ತೇನೆ ಎಂದು ಹೇಳಿ ಮನೆಗೆ ಬಂದಿದ್ದ. ಮಧ್ಯಾಹ್ನ 2ಗಂಟೆ ಸುಮಾರಿಗೆ ಮನೆಯ ಟ್ರಂಕ್‌ನಲ್ಲಿ ಇರಿಸಿದ್ದ ₹11 ಲಕ್ಷ ಕಳವು ಮಾಡಿದ್ದನು. ಬಳಿಕ ಆ ಹಣವನ್ನು ಇವಣಿ ಗ್ರಾಮದ ತನ್ನ ಮನೆಯಲ್ಲಿ ಇರಿಸಿದ್ದಾನೆʼ ಎಂದು ಹೇಳಿದರು.
ಡಿವೈಎಸ್‌ಪಿ ಶಂಕರಗೌಡ ಪಾಟೀಲ ಅವರ ಮಾರ್ಗದರ್ಶನದಲ್ಲಿ ಸಿಪಿಐ ಜಗದೇವಪ್ಪ ಪಾಳಾ ನೇತೃತ್ವದಲ್ಲಿ ಪಿಎಸ್‌ಐ ತಿಮ್ಮಯ್ಯ, ಸಿಬ್ಬಂದಿ ಗುಂಡಪ್ಪ, ಉಪ್ಪಳೇಪ್ಪ, ನಸೀರ್, ಹುಸೇನ್, ಆನಂದ, ಬಾಬುರಾವ್, ಸುರೇಶ, ಅರ್ಜುನರಾವ್, ಅಂಬರೀಷ್, ಸಂಗಮೇಶ, ಶಿವರಾಜ, ಬಸಪ್ಪ, ಮಂಜು ಅವರಿದ್ದ ತಂಡ ಆರೋಪಿಯನ್ನು ಬಂಧಿಸಿದೆ ಎಂದರು. ಅಧಿಕಾರಿ ಮತ್ತು ಸಿಬ್ಬಂದಿಗೆ ಪ್ರಶಂಸೆ ಪತ್ರಗಳನ್ನು ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಎಸ್‌ಪಿ ಮಹೇಶ ಮೇಘಣ್ಣವರ ಉಪಸ್ಥಿತರಿದ್ದರು.