ಯಾವುದೇ ಸಮಸ್ಯೆಯನ್ನು ಪಕ್ಷಾತೀತ, ಜಾತ್ಯತೀತವಾಗಿ ಹೋರಾಟ ಮಾಡಿ, ಕೊನೆಯ ಹಂತದವರೆಗೂ ಹೋರಾಟವನ್ನು ಕೊಂಡೊಯ್ದಾಗ ಅದಕ್ಕೆ ತಾರ್ಕಿಕ ಅಂತ್ಯ ಸಿಕ್ಕು ಯಶಸ್ಸು ಸಿಗಲಿದೆ ಎಂದು ಸಾಮಾಜಿಕ ಹೋರಾಟಗಾರ, ಲೆಕ್ಕಪರಿಶೋಧಕ ಸಿರಿಗೇರಿ ಪನ್ನಾರಾಜ್ ಹೇಳಿದರು.
ನಗರದ ಬಿಡಿಎ ಸಭಾಂಗಣದಲ್ಲಿ ಇಂದು ಹಾಲು ಉತ್ಪಾದಕರ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“1990 ರಲ್ಲಿ ರಚನೆಯಾಗಿದ್ದ ಹೆಚ್‌ಕೆಡಿಬಿಯಲ್ಲಿ ಬಳ್ಳಾರಿಯನ್ನು ಕೈಬಿಡಲಾಗಿತ್ತು. ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ನೇತೃತ್ವದ ಸರ್ಕಾರದಿಂದ ಹೆಚ್‌ಕೆಡಿಬಿ ಅಭಿವೃದ್ಧಿಗೆ ರೂ.40 ಕೋಟಿ ಅನುದಾನ ಘೋಷಣೆಯಾಗಿತ್ತು. ಹೆಚ್‌ಕೆಡಿಬಿಯಲ್ಲಿ ಬಳ್ಳಾರಿಯನ್ನು ಸೇರಿಸಲು ಬಳ್ಳಾರಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‌ನ ಅಂದಿನ ಅಧ್ಯಕ್ಷರಾಗಿದ್ದ ಕೆ.ತಿಮ್ಮಪ್ಪ ಅವರ ಮುಂದಾಳತ್ವದಲ್ಲಿ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಹೋರಾಟ ಮಾಡಿ ಬಳ್ಳಾರಿ ಜಿಲ್ಲೆಯನ್ನು ಎಚ್‌ಕೆಡಿಬಿ ವ್ಯಾಪ್ತಿಗೆ ತರಲಾಯಿತು” ಎಂದು ಸ್ಮರಿಸಿಕೊಂಡರು.
“ಎಲ್ಲಾ ಸರ್ಕಾರಗಳಿಂದ ಬಳ್ಳಾರಿ ಜಿಲ್ಲೆಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ, ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿಲ್ಲ. ಕಾಮಗಾರಿ ಪೂರ್ಣಗೊಂಡಿದ್ದರೂ ಗಡಿಯಾರ ಗೋಪುರ ಉದ್ಘಾಟನೆ ವಿಳಂಭವಾಗುತ್ತಿದೆ. ಪ್ರತ್ಯೇಕ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆಯಾಗುತ್ತಿಲ್ಲ. ಹೀಗೆ ಬಳ್ಳಾರಿ ಜಿಲ್ಲೆಗೆ ಸತತ ಅನ್ಯಾಯವಾಗುತ್ತಿದೆ.
ದೇಶ ಉದ್ಧಾರ ಆದರೆ ನಾವು ಉದ್ಧಾರ ಆಗುತ್ತೇವೆ ಎಂಬ ಬಾಬು ಜಗಜೀವನ್ ರಾಮ್ ಹೇಳಿದಂತೆ ನಮ್ಮೂರು ಉದ್ಧಾರ ಆದರೆ, ನಾವು ಉದ್ಧಾರ ಆಗುತ್ತೇವೆ” ಎಂದರು.
“ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲೆಗಳ ಹಾಲು ಒಕ್ಕೂಟದ ಆಡಳಿತ ಮಂಡಳಿ ಅವಧಿ ಈಗಾಗಲೇ ಮುಗಿದಿದೆ. ಚುನಾವಣೆ ನಡೆದು ಹೊಸ ಆಡಳಿತ ಮಂಡಳಿ ಬರಬೇಕಿತ್ತು. ಕೆಲವೊಂದು ತಾಂತ್ರಿಕ ಕಾರಣಗಳಿಂದ ಬಂದಿಲ್ಲ. ರಾಬಕೊವಿಯಲ್ಲಿ ಕಳೆದ ವರ್ಷ ರೈತರ ಹಾಲಿನ ದರವನ್ನು ಕಡಿತಗೊಳಿಸಿದ್ದು ರೂ 1.5ಗಳನ್ನು ವಾಪಸ್ ಕೊಡಿಸುವುದು. ಕೊಳಗಲ್ಲು ಬಳಿಯ ಮೆಗಾಡೈರಿ ನಿರ್ಮಾಣಕ್ಕೆ ಗುರುತಿಸಿರುವ 15 ಎಕರೆ ಜಮೀನಿಗೆ ಒಕ್ಕೂಟದಿಂದ ರೂ 2.92 ಕೋಟಿ ಹಣ ಕೊಡಿಸಿ, ಕೆಎಂಇಆರ್‌ಸಿ ರೂ 132 ಕೋಟಿ ಅನುದಾನದಲ್ಲಿ ಬಳ್ಳಾರಿಯಲ್ಲೇ ಮೆಘಾಡೈರಿ ಸ್ಥಾಪಿಸುವುದು ಹೋರಾಟದ ಮೊದಲ ಉದ್ದೇಶವಾಗಿದೆ” ಎಂದರು.
ಇದನ್ನೂ ಓದಿ: ಬಳ್ಳಾರಿ | ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕೆ ಒತ್ತಾಯ
ರಾಬಕೊವಿ ಒಕ್ಕೂಟದ ಮಾಜಿ ನಿರ್ದೇಶಕ ವೀರಶೇಖರರೆಡ್ಡಿ ಮಾತನಾಡಿ, “ಒಕ್ಕೂಟದಲ್ಲಿ ಈ ಹಿಂದೆ ನಾನು ಸಹ ಹಾಲಿ ಅಧ್ಯಕ್ಷರ ವಿರುದ್ಧವೇ ಸಾಕಷ್ಟು ಹೋರಾಟ ಮಾಡಿದ್ದೇವೆ. ಬಳ್ಳಾರಿ ಸಹಕಾರ ಸಂಘಗಳ ಉಪನಿಬಂಧಕರು, ನಿಬಂಧಕರು, ಕಲಬುರ್ಗಿ ವಿಭಾಗದ ರಾಯಚೂರು ಜಂಟಿ ನಿಬಂಧಕರು ಸೇರಿ ನಾಲ್ಕು ಕಡೆ ಒಕ್ಕೂಟದ ಹಾಲಿ ಅಧ್ಯಕ್ಷರ ವಿರುದ್ಧ ನಾವು ದೂರು ನೀಡಿದ್ದೇವೆ. ನಾಲ್ಕು ಕಡೆಯೂ ನಮಗೆ ಜಯಸಿಕ್ಕಿದೆ. ಆದರೆ, ಈ ಎಲ್ಲ ಆದೇಶಗಳಿಗೆ ಹಾಲಿ ಅಧ್ಯಕ್ಷರು, ಹೈಕೋರ್ಟ್ನಲ್ಲಿ ತಡೆಯಾಜ್ಞೆ ತಂದು ಅಧ್ಯಕ್ಷರಾಗಿ ಮುಂದುವರೆಯುತ್ತಿದ್ದಾರೆ. ವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಪ್ರಮಾಣ ಕಡಿಮೆಯಾಗಿದೆ. ಪರಿಣಾಮ ಸೊಸೈಟಿಗಳ ಸಂಖ್ಯೆಯೂ ಕಡಿತವಾಗಿದೆ. ಹಿಂದೆ 170ಕ್ಕೂ ಹೆಚ್ಚು ಇದ್ದ ಸೊಸೈಟಿಗಳ ಸಂಖ್ಯೆ ಇಂದು ಕೇವಲ 30-40ಕ್ಕೆ ಇಳಿಕೆಯಾಗಿದೆ. ಹಾಗಾಗಿ ಹಾಲು ಉತ್ಪಾದನೆ ಮಾಡಿ ಸೊಸೈಟಿಗಳ ಸಂಖ್ಯೆ ಜಾಸ್ತಿ ಮಾಡಿಕೊಳ್ಳಬೇಕು. ರೈತರಲ್ಲಿ ಜಾಗೃತಿ ಮೂಡಿಸಬೇಕು” ಎಂದು ಮನವಿ ಮಾಡಿದರು.
ಒಕ್ಕೂಟದ ನಿರ್ದೇಶಕ ಧನುಂಜಯ ಹಮಾಲ್ ಮಾತನಾಡಿ, “ಮೆಗಾಡೈರಿ ನಿರ್ಮಾಣಕ್ಕೆ ಮಂಜೂರಾಗಿರುವ ಕೆಎಂಇಆರ್‌ಸಿ ಅನುದಾನವನ್ನು ಗಣಿಬಾಧಿತ ಪ್ರದೇಶವಾದ ಬಳ್ಳಾರಿ, ಸಂಡೂರು ಬಿಟ್ಟು ಬೇರೆಕಡೆ ಬಳಸಲು ಬರಲ್ಲ. ಮೆಗಾಡೈರಿ ಸ್ಥಾಪನೆಗೆ ಬಳ್ಳಾರಿಯ ಕೊಳಗಲ್ಲು ಬಳಿ ಗುರುತಿಸಿರುವ 15 ಎಕರೆ ಭೂಮಿಗೆ ಎನ್‌ಡಿಬಿಬಿ ಸಹ ಅನುಮೋದನೆ ನೀಡಿದೆ. ಆದರೆ, ಜಮೀನಿಗೆ ಇರುವ ಮೌಲ್ಯ ರೂ 2.92 ಕೋಟಿ ಹಣವನ್ನು ಪಾವತಿಸುವಲ್ಲಿ ಒಕ್ಕೂಟ ವಿಳಂಬ ಧೋರಣೆ ಅನುಸರಿಸುತ್ತಿದೆ. ಒಕ್ಕೂಟದ ಹಾಲಿ ಅಧ್ಯಕ್ಷರು, ಸಿಎಂ ಆಪ್ತರೆಂದು, ಒಕ್ಕೂಟದ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲ್ಲುವ ಸಲುವಾಗಿ ಈ ಹುನ್ನಾರ ನಡೆಸಲಾಗುತ್ತಿದೆ” ಎಂದು ಆರೋಪಿಸಿದರು.
ಇದನ್ನೂ ಓದಿ: ಬಳ್ಳಾರಿ | ದಲಿತರಿಗೆ ಸೇರಿದ ಜಾಗ, ಬಾವಿ ಅತಿಕ್ರಮಣ; ತೆರವಿಗೆ ಪಿ ಶೇಖರ್ ಆಗ್ರಹ
ವಿಚಾರ ಸಂಕೀರ್ಣದಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಆರ್.ಮಾಧವರೆಡ್ಡಿ, ಕಮ್ಯುನಿಷ್ಟ್ ಪಕ್ಷದ ಶಿವಶಂಕರ್, ತುಂಗಭದ್ರಾ, ದರೂರು ಪುರುಷೋತ್ತಮಗೌಡ, ಯಶ್ವಂತ್‌ರಾಜ್ ನಾಗಿರೆಡ್ಡಿ, ವೆಂಕಟೇಶ್ ಹೆಗಡೆ, ಜೋಳದರಾಶಿ ತಿಮ್ಮಪ್ಪ, ಈ. ಗಾದೆಪ್ಪ ಮಿಂಚು ಸೀನಾ, ಹನುಮಂತ, ಜೆ.ಸತ್ಯಬಾಬು, ಸಂಗನಕಲ್ಲು ವಿಜಯ್ ಕುಮಾರ್, ಹುಸೇನಪ್ಪ, ದುರುಗಪ್ಪ ತಳವಾರ್, ಮೋಹನ್ , ಕ ಮೋಕ ಮುದಿಮಲ್ಲಯ್ಯ, ಬರಮ ರೆಡ್ಡಿ, ಸಿಂಧುನೂರು ಸತ್ಯನಾರಯಣ, ಗಂಗಾಧರ ಸಂಗನಕಲ್ಲು, ಸತ್ಯ, ಜನಾರ್ದನ್, ಗಾಳಿ ಬಸವ ರಾಜ್, ಉಮೇಶ್ ಹಾಗೂ ಇತರರಿದ್ದರು.
