ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರನ್ನು ಪರೋಕ್ಷವಾಗಿ ಟೀಕಿಸಿದ ಕಾರಣಕ್ಕೆ ತನ್ನ ವಿರುದ್ಧ ದಾಖಲಾದ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಸ್ಟಾಂಡ್ಅಪ್ ಕಾಮೆಡಿಯನ್ ಕುನಾಲ್ ಕಾಮ್ರಾ ಅವರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಏಪ್ರಿಲ್ 5ರಂದು ಕುನಾಲ್ ಅರ್ಜಿ ಸಲ್ಲಿಸಿದ್ದಾರೆ.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಕುನಾಲ್ ಪರೋಕ್ಷವಾಗಿ ಶಿಂದೆ ಅವರನ್ನು ಟೀಕಿಸಿದ್ದರು. ತನ್ನ ಶಿವಸೇನೆ ಪಕ್ಷವನ್ನೇ ಇಬ್ಭಾಗ ಮಾಡಿದ ದ್ರೋಹಿ ಎಂದು ಹೇಳಿದ್ದರು. ಶಿಂದೆ ಉದ್ದೇಶಿಸಿ ತನ್ನ ಹಾಸ್ಯ ಹಾಡಿನಲ್ಲಿ ಶಿಂದೆ ಹೆಸರನ್ನೂ ಎಲ್ಲಿಯೂ ಉಲ್ಲೇಖಿಸದ ಕುನಾಲ್ ‘ಥಾಣೆಯ ನಾಯಕ’ ಎಂದು ಸಂಭೋದಿಸಿದ್ದಾರೆ. ಶಿಂದೆ ಶಿವಸೇನೆಯಿಂದ ಹೊರಬಂದು ಪ್ರತ್ಯೇಕವಾಗಿ ತಮ್ಮದೇ ಶಿವಸೇನೆ ಪಕ್ಷವನ್ನು ಕಟ್ಟಿಕೊಂಡಿದ್ದಾರೆ. ಉದ್ಧವ್ ಠಾಕ್ರೆ ಅವರ ಶಿವಸೇನೆ (ಯುಬಿಟಿ) ಪ್ರತ್ಯೇಕ ಪಕ್ಷವಾಗಿದೆ.
ಇದನ್ನು ಓದಿದ್ದೀರಾ? 2020ರಲ್ಲಿ ಕಂಗನಾ ಪರ ನಿಂತ ಕೇಂದ್ರ ಈಗ ಕುನಾಲ್ ಕಾಮ್ರಾಗೆ ರಕ್ಷಣೆ ಒದಗಿಸಲಿ: ಸಂಜಯ್ ರಾವತ್
ವಿಡಿಯೋ ವೈರಲ್ ಆಗುತ್ತಿದ್ದಂತೆ ಆಕ್ರೋಶಗೊಂಡ ಶಿವಸೇನೆ ಕಾರ್ಯಕರ್ತರು ಈ ಕಾರ್ಯಕ್ರಮ ನಡೆದ ಸ್ಟುಡಿಯೋ ಇರುವ ಹೊಟೇಲ್ನಲ್ಲಿ ದಾಂಧಲೆ ನಡೆಸಿತ್ತು. ಅಷ್ಟು ಮಾತ್ರವಲ್ಲದೆ ಕುನಾಲ್ ಅವರಿಗೆ ಶಿವಸೇನೆ ನಾಯಕರು ಜೀವ ಬೆದರಿಕೆಯನ್ನೂ ಹಾಕಿದ್ದರು. ಕುನಾಲ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಈ ಎಫ್ಐಆರ್ ರದ್ದು ಕೋರಿ ಕುನಾಲ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ತನ್ನ ವಿರುದ್ಧ ಕ್ರಮ ಕೈಗೊಳ್ಳುವುದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ. ಹಾಗೆಯೇ ಭಾರತದ ಸಂವಿಧಾನದ ಅಡಿಯಲ್ಲಿ ಖಾತರಿಪಡಿಸಲಾದ ಯಾವುದೇ ವೃತ್ತಿ ಮತ್ತು ವ್ಯವಹಾರವನ್ನು ನಡೆಸುವ ಹಕ್ಕು, ಜೀವನ ಮತ್ತು ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಕೂಡಾ ಕುನಾಲ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ವಕೀಲ ಮೀನಾಜ್ ಕಾಕಾಲಿಯಾ ಅವರವ ಮೂಲಕ ಕುನಾಲ್ ಅರ್ಜಿ ಸಲ್ಲಿಸಿದ್ದ ಏಪ್ರಿಲ್ 21ರಂದು ನ್ಯಾಯಮೂರ್ತಿ ಸಾರಂಗ್ ಕೊತ್ವಾಲ್ ನೇತೃತ್ವದ ಪೀಠ ವಿಚಾರಣೆ ನಡೆಸುವ ಸಾಧ್ಯತೆಯಿದೆ.
ಇನ್ನು ಕುನಾಲ್ ಕಾಮ್ರಾ ಕಳೆದ ತಿಂಗಳು ತಮ್ಮ ವಿರುದ್ಧ ದಾಖಲಾದ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ನಿಂದ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಆದರೆ ಈವರೆಗೂ ಯಾವುದೇ ವಿಚಾರಣೆ ಹಾಜರಾಗಿಲ್ಲ. ಈವರೆಗೂ ಕುನಾಲ್ ವಿರುದ್ಧ ಮೂರು ಸಮನ್ಸ್ ಜಾರಿ ಮಾಡಲಾಗಿದೆ.
