ಯಾರು ಯಾರಿಗೂ ಲಂಚ ಕೊಡೋ ಹಾಗಿಲ್ಲ. ತಕೊಳೊ ಹಾಗಿಲ್ಲ. ಎಲ್ಲ ಸರ್ಕಾರಿ ಕಚೇರಿಗಳಲ್ಲೂ ಭ್ರಷ್ಟಾಚಾರದ ವಿರುದ್ಧ ಜನರು ಮಾಹಿತಿ ನೀಡಲು ಫಲಕಗಳನ್ನು ಅಳವಡಿಸಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ರಾಮನಗರ ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. “ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಸರ್ಕಾರಿ ಅಧಿಕಾರಿಗಳಿದ್ದೀರಿ. ಜನರ ಸಮಸ್ಯೆಗಳನ್ನು ಪರಿಹರಿಸುವುದು ರಾಜಕಾರಣಿ ಮತ್ತು ಅಧಿಕಾರಿಗಳ ಕರ್ತವ್ಯ. ಪ್ರತಿಯೊಬ್ಬ ಅಧಿಕಾರಿಯೂ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕು” ಎಂದು ಹೇಳಿದರು.
“ಬಿಜೆಪಿ ಆಡಳಿತವನ್ನು ಜನರು ನೋಡಿದ್ದಾರೆ. ರಾಜ್ಯಕ್ಕೆ ಭ್ರಷ್ಟಾಚಾರದ ರಾಜಧಾನಿ ಎನ್ನುವ ಹಣೆಪಟ್ಟಿಯನ್ನು ಬಿಜೆಪಿ ಸರ್ಕಾರ ತಂದಿದೆ. ಅದನ್ನು ಬದಲಾಯಿಸಬೇಕು. ಅಧಿಕಾರಿಗಳು ಲಂಚದಿಂದ ದೂರ ಉಳಿಯಬೇಕು” ಎಂದರು.
“ಎಲ್ಲ ಅಧಿಕಾರಿಗಳಿಗೂ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ ಮಾಡಬೇಕು. ಕಚೇರಿಯ ಎಲ್ಲ ಅಧಿಕಾರಿಗಳ ಮಾಹಿತಿಯನ್ನು ಅವರ ಫೋಟೋ, ಹೆಸರು, ವಿಳಾಸಗಳೊಂದಿಗೆ ಪುಸ್ತಕ ಮಾಡಿಡಬೇಕು” ಎಂದು ಅವರು ಹೇಳಿದರು.
“ಒಂದು ತಿಂಗಳು ಅವಕಾಶ ಕೊಡುತ್ತೇನೆ. ಅಷ್ಟದಲ್ಲಿ ಎಲ್ಲ ಅಧಿಕಾರಿಗಳು ಹೆಡ್ ಕ್ವಾಟ್ರಸ್‌ನಲ್ಲಿ ಮನೆ ಮಾಡಿಕೊಳ್ಳಬೇಕು. ಗ್ರಾಮ ಪಂಚಾಯತಿಯಿಂದ ಹಿಡಿದು, ಉನ್ನತ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು. ಯಾರಾದರೂ ಹೆಡ್ ಕ್ವಾಟ್ರಸ್ ಬಿಟ್ಟು ಹೋದರೆ, ಜಿಲ್ಲಾಧಿಕಾರಿಗಳು ನಮಗೆ ಮಾಹಿತಿ ನೀಡಬೇಕು” ಎಂದು ಡಿ.ಕೆ ಶಿವಕುಮಾರ್ ಹೇಳಿದರು.