ಮೈಸೂರು ಮಹಾರಾಜ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ಐಕ್ಯೂಎಸಿ ಆಶ್ರಯದಲ್ಲಿ ‘ ವ್ಯಕ್ತಿತ್ವ ವಿಕಸನ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪತ್ರಿಕೆಗಳ ಪಾತ್ರ ‘ ಕುರಿತು ವಿಶೇಷ ಉಪನ್ಯಾಸ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಡಾ. ಕೂಡ್ಲಿ ಗುರುರಾಜ ಮಾತನಾಡಿ ‘ ಪತ್ರಿಕೆಗಳು ಸಮಾಜದ ಪ್ರಚಲಿತ ವಿದ್ಯಮಾನಗಳ ಬಗ್ಗೆ ಬರಹಗಳ ಮೂಲಕ ಸಮಾಜಕ್ಕೆ ತಿಳಿಸುತ್ತವೆ. ಆದ್ದರಿಂದ, ಪತ್ರಿಕೆ ಸಮಾಜದ ಪ್ರತಿಬಿಂಬ ‘ ಎಂದರು.
” ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಆಸಕ್ತಿ ಹೊಂದಿರುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ಪ್ರತಿದಿನ ಪತ್ರಿಕೆಗಳನ್ನು ಓದುವವರ ಸಂಖ್ಯೆ ಬೆರಳೆಣಿಕೆಯಷ್ಟು. ಹೀಗಾದರೆ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದಾದರೂ ಹೇಗೆ? ಎಂದು ಪ್ರಶ್ನಿಸಿದರು.
ವಿದ್ಯಾರ್ಥಿಗಳು ಪ್ರತಿದಿನ ಪತ್ರಿಕೆಗಳನ್ನು ಓದಬೇಕು. ವ್ಯಕ್ತಿತ್ವ ವಿಕಸನಕ್ಕೆ ಇದು ಸಹಕಾರಿ. ಬರವಣಿಗೆಯ ಕೌಶಲ ಬೆಳೆಯುತ್ತದೆ. ಪ್ರಚಲಿತ ವಿದ್ಯಮಾನಗಳ ಮಾಹಿತಿ ದೊರೆಯುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಇದು ಸಹಾಯಕವಾಗುತ್ತದೆ.
ಪತ್ರಿಕೆಗಳನ್ನು ಸುಮ್ಮನೆ ಓದುವುದಲ್ಲ. ಅಧ್ಯಯನ ಮಾಡಬೇಕು. ವರದಿ,ಲೇಖನ, ಅಂಕಣ,ಬರಹಗಳ ಶೈಲಿಯನ್ನು ಅರಿಯಬೇಕು. ವಿಷಯಗಳನ್ನು ತಿಳಿಯಬೇಕು. ಇದರಿಂದ ಯಾವುದೇ ವಿಷಯವನ್ನು ವಿಶ್ಲೇಷಣಾತ್ಮಕ ವಾಗಿ ನೋಡುವುದು ಸಾಧ್ಯವಾಗುತ್ತದೆ. ಬರವಣಿಗೆಯ ಕಲೆಯೂ ಸಿದ್ದಿಸುತ್ತದೆ. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ನೆರವಾಗುತ್ತದೆ ” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ಕೊಡಗು | ಸರ್ಕಾರಿ ಭೂಮಿ ಸಂರಕ್ಷಿಸುವತ್ತ ಅಧಿಕಾರಿಗಳು ಆಸಕ್ತಿ ವಹಿಸಿ : ನ್ಯಾ. ಬಿ.ಎ.ಪಾಟೀಲ್
ಮಹಾರಾಜ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಚ್. ಸಿ ದೇವರಾಜೇ ಗೌಡ, ಆಡಳಿತ ಅಧಿಕಾರಿ ಪ್ರೊ.ಕೆ. ತಿಮ್ಮಯ್ಯ, ಐಕ್ಯೂಎಸಿ ಸಂಚಾಲಕ ಪ್ರೊ. ನಟರಾಜು, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಡಾ. ಗೋಪಾಲ, ಡಾ. ಶ್ವೇತಾ ಎಂ. ಹನ್ಸ್, ಡಾ. ಆರ್. ರಾಘವೇಂದ್ರ, ಕೇಶವಮೂರ್ತಿ ಸೇರಿದಂತೆ ಇನ್ನಿತರರು ಇದ್ದರು.