ಹೆಣದ ಮೇಲೆ ಹಾಕಿದ ಹಣವನ್ನು ಎಂದೂ ತೆಗೆಯಬಾರದು. ಆದರೆ ಕಾಂಗ್ರೆಸ್ ಸರ್ಕಾರ ಹೆಣದ ಮೇಲೂ ಹಣ ಸಂಪಾದಿಸುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಬಿಜೆಪಿಯಿಂದ ಆರಂಭವಾದ ಜನಾಕ್ರೋಶ ಯಾತ್ರೆಯಲ್ಲಿ ಮಾತನಾಡಿದ ಅವರು, “ಬಿಯರ್ ಕುಡಿಯುವವರು ಹೆಚ್ಚುವರಿ 50 ರೂ. ಇಟ್ಟುಕೊಳ್ಳಬೇಕು. ಬೆಂಗಳೂರಿನ ಮನೆಗಳ ಕಸಕ್ಕೂ ತೆರಿಗೆ ಹಾಕಿದ್ದಾರೆ. ಇನ್ನು ಮುಂದೆ ಶೌಚಾಲಯಕ್ಕೂ ಶುಲ್ಕ ವಿಧಿಸಲಿದ್ದಾರೆ. ಸ್ವಲ್ಪ ದಿನಗಳಲ್ಲಿ ಕುಡಿಯುವ ನೀರಿನ ದರ ಏರಿಕೆಯಾಗಲಿದೆ” ಎಂದರು.
ಇದನ್ನು ಓದಿದ್ದೀರಾ? ಬೆಲೆ ಏರಿಕೆ | ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೋರಾಟ: ಆರ್ ಅಶೋಕ್
“ಇಂಧನ ಇಲಾಖೆಯಿಂದ ಮನೆಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಸಿ, ಅದರಲ್ಲಿ 15 ಸಾವಿರ ಕೋಟಿ ರೂ. ಹಗರಣ ಮಾಡಲಾಗುತ್ತಿದೆ. ಲೂಟಿ ಮಾಡುತ್ತಿರುವ ಈ ಸರ್ಕಾರಕ್ಕೆ ಯಾಕಾದರೂ ಓಟು ಹಾಕಿ ಪಾಪ ಮಾಡಿದ್ದೇವೆ ಎಂದು ಜನರು ಯೋಚಿಸುತ್ತಿದ್ದಾರೆ” ಎಂದು ವಿಪಕ್ಷ ನಾಯಕ ಆರೋಪಿಸಿದರು.
“ಡೀಸೆಲ್ ದರ ಏರಿಸಿದ್ದು ಕೇಂದ್ರ ಸರ್ಕಾರ ಎಂದು ಒಬ್ಬ ಸಚಿವರು ಹೇಳುತ್ತಾರೆ. ಮತ್ತೊಬ್ಬ ಸಚಿವರಿಗೆ ಕನ್ನಡ ಬರೆಯಲು ಕೂಡ ಬರುವುದಿಲ್ಲ. ಸಚಿವರೆಲ್ಲರೂ ಅಜ್ಞಾನಿಗಳಾಗಿದ್ದಾರೆ. ಇವರೆಲ್ಲರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜ್ಞಾನಿಯಾಗಿದ್ದಾರೆ” ಎಂದು ಕುಟುಕಿದರು.
“ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸುವಾಗ ತೆರಿಗೆ ವಿಧಿಸಲಿಲ್ಲ. ಈಗ ಪ್ರತಿಯೊಂದಕ್ಕೂ ತೆರಿಗೆ ವಿಧಿಸಲಾಗುತ್ತಿದೆ. ಇವರು ಎಂತಹ ವಂಚಕರು ಎಂಬುದು ಇದರಿಂದಲೇ ಗೊತ್ತಾಗುತ್ತದೆ” ಎಂದು ಆರ್ ಅಶೋಕ್ ಟೀಕಿಸಿದರು.
“ವಕ್ಫ್ ಮಂಡಳಿ ರೈತರ ಜಮೀನು ಲೂಟಿ ಮಾಡುವುದನ್ನು ತಪ್ಪಿಸಲು ಪ್ರಧಾನಿ ನರೇಂದ್ರ ಮೋದಿ ಹೊಸ ಮಸೂದೆ ತಂದಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದ ಸಲ್ಲಿಸಬೇಕು. ಹಾಗೆಯೇ ಈ ಜನಾಕ್ರೋಶ ಯಾತ್ರೆಯ ಪ್ರತಿಭಟನೆಯನ್ನು ಇನ್ನಷ್ಟು ಮುಂದುವರಿಸಿ ತಾರ್ಕಿಕ ಅಂತ್ಯಕ್ಕೆ ಒಯ್ಯಬೇಕು” ಎಂದರು.
