ಡಿಸೆಂಬರ್‌ನಲ್ಲಿ ನಡೆಯಲಿರುವ ತೆಲಂಗಾಣ ವಿಧಾನಸಭಾ ಚುನಾವಣೆಗೂ ಮುನ್ನವೇ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ನೇತೃತ್ವದ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿಗೆ ದೊಡ್ಡ ಆಘಾತವುಂಟಾಗಿದೆ. ಮಾಜಿ ಸಚಿವರು, ಶಾಸಕರು, ಸಂಸದರು ಸೇರಿ ಸುಮಾರು 35ಕ್ಕೂ ಹೆಚ್ಚು ಪ್ರಮುಖ ನಾಯಕರು ಕಾಂಗ್ರೆಸ್ ಸೇರಲು ಸಜ್ಜಾಗಿದ್ದಾರೆ.
ಇದಕ್ಕೆ ಮುನ್ಸೂಚನೆಯೆಂಬಂತೆ ಈ ನಾಯಕರೆಲ್ಲರೂ ಇಂದು ನವದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಮತ್ತು ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥ ಎ ರೇವಂತ್ ರೆಡ್ಡಿ ಅವರನ್ನು ಭೇಟಿಯಾದರು.
ಭೇಟಿ ಮಾಡಿದ ಬಿಆರ್‌ಎಸ್ ನಾಯಕರಲ್ಲಿ ಮಾಜಿ ಸಂಸದ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ, ಮಾಜಿ ಸಚಿವ ಜೂಪಲ್ಲಿ ಕೃಷ್ಣರಾವ್, ಮಾಜಿ ಶಾಸಕರಾದ ಪಣ್ಯಂ ವೆಂಕಟೇಶ್ವರಲು, ಕೋರಂ ಕನಕಯ್ಯ, ರಾಕೇಶ್ ರೆಡ್ಡಿ, ಕೋಟ ರಾಮ್ ಬಾಬು ಸೇರಿದಂತೆ 35ಕ್ಕೂ ಅಧಿಕ ನಾಯಕರು ಉಪಸ್ಥಿತರಿದ್ದರು. ಈ ನಾಯಕರೆಲ್ಲ ಬಿಆರ್‌ಎಸ್ ತ್ಯಜಿಸಿ ಕಾಂಗ್ರೆಸ್ ಸೇರುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಜೀನಾಮೆ ನೀಡಿ ಕೆಲಸ ತೊರೆದಿದ್ದ ಮಹಿಳಾ ಬಸ್ ಚಾಲಕಿಗೆ ಕಾರು ಉಡುಗೊರೆ ನೀಡಿದ ಕಮಲ್ ಹಾಸನ್
ಜುಲೈ ಮೊದಲ ವಾರದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಉಪಸ್ಥಿತಿಯೊಂದಿಗೆ ತೆಲಂಗಾಣದ ಕಮ್ಮಂನಲ್ಲಿ ಅದ್ಧೂರಿ ಸಾರ್ವಜನಿಕ ಸಭೆ ನಡೆಸಲು ಉದ್ದೇಶಿಸಲಾಗಿದೆ. ಈ ಸಮಾರಂಭದಲ್ಲಿ ಬಿಆರ್‌ಎಸ್ ನಾಯಕರು ಮಾತ್ರವಲ್ಲದೆ ಬಿಜೆಪಿಯ ಕೆಲವು ನಾಯಕರು ಕೂಡ ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.