ಸ್ವಂತ ಮನೆ ಇಲ್ಲದೆ, ಮನೆ ಬಾಡಿಗೆಯನ್ನೂ ಕಟ್ಟಲಾಗದೆ ಒಂಟಿ ಮಹಿಳೆಯೊಬ್ಬರು ಬೀದಿಯಲ್ಲಿ ವಾಸ ಮಾಡುತ್ತಿರುವ ವಿದ್ರಾವಕ ಘಟನೆ ಕೊಪ್ಪಳದ ಭಾಗ್ಯನಗರದಲ್ಲಿ ನಡೆದಿದೆ.
ಕೊಪ್ಪಳದ ತೆಗ್ಗಿನಕೇರಿ ಓಣಿಯಲ್ಲಿ ಬಾಡಿಗೆ ಮನೆಯಲ್ಲಿ ರತ್ನಮ್ಮ ಎಂಬಾಕೆ ವಾಸವಾಗಿದ್ದರು. ಈಕೆಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬ ಮಗ ಮಾನಸಿಕ ಅಸ್ವಸ್ಥ, ಮತ್ತೊಬ್ಬ ಮಗ ದುಶ್ಚಟಗಳ ದಾಸ. ಮನೆಕೆಲಸ ಮಾಡಿ ಬದುಕು ಸಾಗಿಸುತ್ತಿರುವ ಈ ಮಹಿಳೆಗೆ ಜೀವನ ನಿರ್ವಹಣೆಯೇ ದುಸ್ತರವಾಗಿದೆ. ಕಳೆದ ಕೆಲ ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಇವರನ್ನು 1 ವರ್ಷದಿಂದ ಬಾಡಿಗೆ ಕಟ್ಟದ ಕಾರಣ ಮಲೆ ಮಾಲಿಕರು ಹೊರ ಹಾಕಿದ್ದಾರೆ. ಇವರ ಜೀವನ ಸದ್ಯ ಬೀದಿಯಲ್ಲಿಯೇ. ಇಷ್ಟಾದರೂ ಸ್ಥಳೀಯ ಆಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ.
3 ದಿನಗಳಿಂದ ಭಾಗ್ಯನಗರ ರಸ್ತೆಯ ತಾಯಮ್ಮ ದೇವಸ್ಥಾನದ ಮುಂದೆ ರಸ್ತೆ ಪಕ್ಕದಲ್ಲಿ ಸಾಮಾನು ಸರಂಜಾಮುಗಳ ಜೊತೆ ರತ್ನಮ್ಮ ಕಾಲ ಕಳೆಯುತ್ತಿದ್ದಾರೆ.
ಇದನ್ನೂ ಓದಿ: ಕೊಪ್ಪಳ | ಕಚೇರಿ ವೇಳೆ ಬದಲಾದರೂ ಬದಲಾಗದ ನೌಕರರು
2023ರಲ್ಲಿ ನಗರಸಭೆ ಮುಂದೆ ತಿಂಗಳುಗಟ್ಟಲೆ ವಸತಿಹೀನರು ನಡೆಸಿದ ಆಶ್ರಯ ವಸತಿಗಾಗಿ ಹೊರಾಟದಲ್ಲಿಯೂ ಈ ಮಹಿಳೆ ಭಾಗವಹಿಸಿದ್ದಾರೆ. ಆದರೆ ಈವರೆಗೂ ಇವರಿಗೆ ನಿವೇಶನ ಸಿಕ್ಕಿಲ್ಲ. ಇವರ ನೆರವಿಗೆ ಶಾಸಕರು ಮತ್ತು ಆಡಳಿತ ಧಾವಿಸಬೇಕು ಎಂದು ಹೋರಾಟಗಾರರಾದ ಅಲ್ಲಮಪ್ರಭು ಬೆಟ್ಟದೂರು, ಸಂಜಯದಾಸ ಚನ್ನದಾಸರ ಇತರರು ಒತ್ತಾಯಿಸಿದ್ದಾರೆ.