ಮಹಿಳೆಯೊಬ್ಬರಿಗೆ ಯಾರೋ ಮಾಟ , ಮಂತ್ರ ಮಾಡಿಸಿದ್ದಾರೆ ಎಂದು ನಂಬಿಸಿ ಚಿಕಿತ್ಸೆಯ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿ, ಸುಮಾರು ಒಂದು ಲಕ್ಷ ರೂಪಾಯಿವರೆಗೆ ವಂಚಿಸಿದ ಆರೋಪದಲ್ಲಿ ಮಂಗಳೂರು ನಗರದ ಕೂಳೂರು ಉಸ್ತಾದ್ ಅವರನ್ನು ಮಂಗಳೂರು ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಗುರುವಾಯನಕೆರೆಯ ನಿವಾಸಿ ಜಿ.ಅಬ್ದುಲ್ ಕರೀಮ್ ಅಲಿಯಾಸ್ ಕೂಳೂರು ಉಸ್ತಾದ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ಖಿನ್ನತೆಯಿಂದ ಬಳಲುತ್ತಿರುವುದನ್ನೇ ತನ್ನ ಲಾಭಕ್ಕೆ ಬಳಸಿಕೊಂಡು ಈ ಕೃತ್ಯವೆಸಗಿದ್ದಾನೆ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಮದುವೆಯಾಗುವುದಾಗಿ ನಂಬಿಸಿ 77 ಮಹಿಳೆಯರಿಗೆ ವಂಚನೆ; ದುಷ್ಕರ್ಮಿ ಬಂಧನ
ಸಂತ್ರಸ್ತೆಗೆ 2022ರಲ್ಲಿ ಖಿನ್ನತೆ ಕಾಣಿಸಿಕೊಂಡಿದೆ. ತನ್ನ ಅಕ್ಕನ ಪತಿಯ ಸಲಹೆಯಂತೆ ಹೆಜಮಾಡಿಯಲ್ಲಿದ್ದ ಉಸ್ತಾದ್ ಅಬ್ದುಲ್ ಕರೀಮ್ ಮನೆಗೆ ಹೋಗಿದ್ದರು. ಕೂಳೂರು ಉಸ್ತಾದ್ ಎಂದು ಕರೆಸಿಕೊಳ್ಳುವ ಅಬ್ದುಲ್ ಮಹಿಳೆಯನ್ನು ನೋಡಿ ಯಾರೋ ಮಾಟ ಮಂತ್ರ ಮಾಡಿದ್ದಾರೆ ಎಂದು ಹೇಳಿ ನಂಬಿಸಿದ್ದಾನೆ.
ಇದರ ನಿವಾರಣೆ ಮಾಡುವುದಾಗಿ ಹೇಳಿದ ಕಾರಣ ಮಹಿಳೆ ತನ್ನ ಅಕ್ಕನ ಜೊತೆ ಈ ವ್ಯಕ್ತಿ ಬಳಿ ಹಲವು ಬಾರಿ ಹೋಗಿದ್ದಾರೆ. ಅಲ್ಲಿ ಆರೋಪಿ ಕೆಲವು ಬಾರಿ ಮಹಿಳೆಯಿಂದ ಕುರಾನ್ ಓದಿಸಿದ್ದಾನೆ ದೂರಿನಲ್ಲಿ ತಿಳಿಸಲಾಗಿದೆ.
2022ರ ಫೆ.10 ರಂದು ಸಂತ್ರಸ್ತೆಯ ಅಕ್ಕನಿಗೆ ಕೆಲಸ ಇದ್ದ ಕಾರಣ ಸಂತ್ರಸ್ತೆ ಒಬ್ಬಳೇ ಹೆಜಮಾಡಿ ಮನೆಗೆ ಹೋಗಿದ್ದು, ಅಲ್ಲಿ ಈ ಕೂಳೂರು ಉಸ್ತಾದ್ ಕುರಾನ್ ಓದಿಸಿ ಬಳಿಕ ಚಿಕಿತ್ಸೆ ನೆಪದಲ್ಲಿ ಮೈಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ.
ಇದನ್ನು ಓದಿದ್ದೀರಾ? ವಂಚನೆ ಪ್ರಕರಣ: ವಿಮಾನ ನಿಲ್ದಾಣದಲ್ಲೇ ಮಾಜಿ ಪಿಡಿಒ ಬಂಧನ
ಮಹಿಳೆಯಿಂದ 55,000 ರೂ. ಪಡೆದಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ. ಇನ್ನು ಚಿಕಿತ್ಸೆಗೆ ಹೆಚ್ಚು ಖರ್ಚಾಗುವುದಾಗಿ ಹೇಳಿ ಒಟ್ಟು ಸರಿ ಸುಮಾರು ಒಂದು ಲಕ್ಷ ರೂಪಾಯಿವರೆಗೆ ವಂಚಿಸಿರುವುದಾಗಿ ಸಂತ್ರಸ್ತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮಂಗಳೂರು ಮಹಿಳಾ ಪೊಲೀಸ್ ಠಾಣೆಯ ನಿರೀಕ್ಷಕರಾದ ಬಾಲಕೃಷ್ಣ ನಾಯಕ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
