ಈ ದಿನ ಸಂಪಾದಕೀಯ | ಮುಸ್ಲಿಮರು, ನಂತರ ಕ್ರೈಸ್ತರು… ಆನಂತರ?

Date:

Advertisements
ಸರಕಾರ ವಕ್ಫ್(waqf) ಮೇಲೆ ಹಿಡಿತ ಸಾಧಿಸಿದ ಬೆನ್ನಲ್ಲೇ, ಮುಂದಿನ ಗುರಿ ಕ್ಯಾಥೋಲಿಕ್(Catholic Church) ಚರ್ಚ್‌ಗಳ ಆಸ್ತಿಗಳ ಮೇಲೆ ಎನ್ನುವುದನ್ನು 'ಆರ್ಗನೈಸರ್'(organiser) ಬಹಿರಂಗಪಡಿಸಿದೆ. ಮಾರ್ಟಿನ್ ನಿಮೋಲರ್ ಹೇಳಿದ ಫ್ಯಾಸಿಸಂ ಇಲ್ಲೂ ಜಾರಿಯಾಗಿದೆ. ಈಗ ಮುಸ್ಲಿಮರು, ನಂತರ ಕ್ರೈಸ್ತರು, ಆನಂತರ ಶೂದ್ರರು...

‘ಅವರು ಮೊದಲು ಯಹೂದಿಯರನ್ನು ಹಿಡಿದು ಜೈಲಿಗೆ ಹಾಕಿದರು, ನಾನು ಯಹೂದಿಯಲ್ಲದ್ದರಿಂದ ನಾನು ಮೌನವಾಗಿದ್ದೆ. ಅವರು ಬಳಿಕ ಕಮ್ಯುನಿಸ್ಟರನ್ನು ಹಿಡಿದು ಜೈಲಿಗಟ್ಟಿದರು, ನಾನು ಕಮ್ಯುನಿಸ್ಟನಾಗಿರಲಿಲ್ಲ ತಟಸ್ಥನಾಗಿದ್ದೆ. ಮತ್ತೆ ಅವರು ಕ್ಯಾಥೋಲಿಕ್‌ಗಳನ್ನು ಬಂಧಿಸಿ ಜೈಲಿಗಟ್ಟಿದರು, ನಾನು ಪ್ರೊಟೆಸ್ಟೆಂಟ್ ಆಗಿದ್ದುದರಿಂದ ಪ್ರತಿಭಟಿಸಲಿಲ್ಲ. ಕೊನೆಗೆ ಅವರು ನನ್ನನ್ನು ಬಂಧಿಸಿದಾಗ ನನ್ನ ಬಗ್ಗೆ ಮಾತನಾಡಲು ಯಾರೂ ಇರಲಿಲ್ಲ’ ಎಂದು ಜರ್ಮನ್ ಕವಿ ಮಾರ್ಟಿನ್ ನಿಮೋಲರ್, ಫ್ಯಾಸಿಸಂ ಅಪಾಯಗಳ ಕುರಿತು ಅರ್ಥಗರ್ಭಿತವಾಗಿ ಲೋಕಕ್ಕೆ ತಿಳಿಸಿದ್ದರು.

ಅಂದರೆ, ಇವತ್ತು ನಿಮಗಾಗಿದ್ದು ನಾಳೆ ನಮಗೆ ಆಗಲಿದೆ ಎಂಬ ಸೂಚನೆ ನೀಡಿದ್ದರು. ಎಚ್ಚರಿಸುವ ಮೂಲಕ ಫ್ಯಾಸಿಸಂನ ಕಾರ್ಯಸೂಚಿಯನ್ನು ತಿಳಿಸಿದ್ದರು. ಭಾರತೀಯ ಬಲಪಂಥೀಯ ಸಿದ್ಧಾಂತಕ್ಕೆ ಶತ್ರುಗಳಾರು ಎನ್ನುವುದು ಈಗ, ಅದು ದೇಶದ ವರ್ತಮಾನದ ವಕ್ಫ್ ವಿದ್ಯಮಾನದಲ್ಲಿ ನಿಚ್ಚಳವಾಗಿ ಗೋಚರಿಸುತ್ತಿದೆ.

ವಕ್ಫ್ (ತಿದ್ದುಪಡಿ) ಮಸೂದೆ-2025ರ ಮೇಲೆ ಲೋಕಸಭೆ ಮತ್ತು ರಾಜ್ಯಸಭೆಯ ಚರ್ಚೆಯ ಸಮಯದಲ್ಲಿ ವಿರೋಧ ಪಕ್ಷಗಳ ಸಂಸದರು ‘ಇದು ಮುಸ್ಲಿಮರ ವಕ್ಫ್ ಆಸ್ತಿಗಳನ್ನು ಗುರಿಯಾಗಿಸಿಕೊಂಡಿದೆ. ಮುಂದುವರೆದು ಇತರ ಸಮುದಾಯಗಳತ್ತ ತಿರುಗಲಿದೆ. ವಕ್ಫ್ ಮಸೂದೆಗೆ ತಿದ್ದುಪಡಿ ತಂದಂತೆ, ಮುಂದೆ ಚರ್ಚ್​ಗಳ ಮೇಲಿನ ನಿಯಂತ್ರಣಕ್ಕೂ ಬಿಜೆಪಿ ಕಾನೂನು ತರಲಿದೆ. ದೇಶವು ಅಪಾಯಕಾರಿ ಪರಿಸ್ಥಿತಿಯತ್ತ ಸಾಗುತ್ತಿದೆ’ ಎಂಬ ಆತಂಕವನ್ನು ವ್ಯಕ್ತಪಡಿಸಿದರು.

Advertisements

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬೆಲೆ ಏರಿಸಿ ಆರಿಸಿದವರನ್ನೇ ಮೂರ್ಖರನ್ನಾಗಿಸುತ್ತಿರುವ ಸರ್ಕಾರಗಳು

ವಿರೋಧ ಪಕ್ಷಗಳ ಸದಸ್ಯರ ಆತಂಕ ಮರೆಯಾಗುವ ಮುನ್ನವೇ, ದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ದಾಳಿ ಮಾಡುವ, ಅವನ್ನು ಅಶಕ್ತರನ್ನಾಗಿಸುವ ಸಂಘ ಪರಿವಾರದ ಕಾರ್ಯಸೂಚಿ ಜಾರಿಗೆ ಬಂದಿದೆ. ಅಲ್ಪಸಂಖ್ಯಾತರ ನಡುವೆ ಭಿನ್ನಾಭಿಪ್ರಾಯ ಬಿತ್ತಿ, ಅವರನ್ನು ಪ್ರತ್ಯೇಕಿಸುವ ವ್ಯವಸ್ಥಿತ ಸಂಚು ಚಾಲ್ತಿಯಲ್ಲಿದೆ. 

ಕೇರಳದಲ್ಲಿ ಮುಸ್ಲಿಮರ-ಕ್ರೈಸ್ತರ ನಡುವಿನ ಭೂ ವಿವಾದಕ್ಕೆ ಇತಿಹಾಸವೇ ಇದೆ. ಆ ಬೆಂಕಿಗೆ ಈಗ ಬಿಜೆಪಿ ತುಪ್ಪ ಸುರಿದಿದೆ. ಎರ್ನಾಕುಲಂ ಜಿಲ್ಲೆಯ ಮುನಂಬಮ್‌ನಲ್ಲಿ ತಲೆಮಾರುಗಳಿಂದ ಕ್ರಿಶ್ಚಿಯನ್ನರ ವಶದಲ್ಲಿರುವ ಸುಮಾರು 400 ಎಕರೆ ಭೂಮಿ ವಿವಾದದಲ್ಲಿದೆ. ವಕ್ಫ್ ಬೋರ್ಡ್ ಆ ಭೂಮಿ ತನ್ನದು ಎಂದು ಕೋರ್ಟಿನ ಮೆಟ್ಟಿಲು ಹತ್ತಿದೆ.

ಭೂಮಿಯನ್ನು ಅನುಭವಿಸುತ್ತಿರುವ ಕ್ರಿಶ್ಚಿಯನ್ನರು ಈಗ ಕೇಂದ್ರದ ವಕ್ಫ್ ತಿದ್ದುಪಡಿ ಮಸೂದೆಯ ಪರವಿದ್ದಾರೆ. ಅದಕ್ಕೆ ಕೇರಳ ಕ್ಯಾಥೋಲಿಕ್ ಬಿಷಪ್ ಸಂಘಟನೆ ಬೆಂಬಲ ನೀಡಿದೆ. ಕೇರಳ ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಕ್ರಿಶ್ಚಿಯನ್ನರ ಪರ ವಕಾಲತ್ತು ವಹಿಸಿ, ಮುಸ್ಲಿಮರ ವಿರುದ್ಧ ಕ್ರಿಶ್ಚಿಯನ್ನರನ್ನು ಎತ್ತಿಕಟ್ಟುತ್ತಿದ್ದಾರೆ. ಅಲ್ಪಸಂಖ್ಯಾತ ಸಮುದಾಯಗಳ ನಡುವೆ ಬಿರುಕುಂಟಾಗಿದೆ, ಸಂಘರ್ಷವೇರ್ಪಟ್ಟಿದೆ. ಅಲ್ಲಿಗೆ ಸಂಘಪರಿವಾರದ ಕಾರ್ಯಸೂಚಿ ವ್ಯವಸ್ಥಿತವಾಗಿಯೇ ಜಾರಿಯಾದಂತಾಗಿದೆ.

ಇದು ಕೇರಳದ ಕತೆಯಾದರೆ, ದೇಶದ ಇತರ ಭಾಗಗಳಲ್ಲಿ ವಕ್ಫ್ ಆಸ್ತಿಗಳನ್ನು ಅತಿಕ್ರಮಿಸಿದ ಕೆಲ ಪ್ರಭಾವಿ ಮುಸ್ಲಿಮರೂ ಸೇರಿದಂತೆ ಹಲವರು ಈಗ ಬಿಜೆಪಿ ಸೇರುತ್ತಿದ್ದಾರೆ. ಅಂದರೆ ಕಳ್ಳರು, ಲೂಟಿಕೋರರು, ಭ್ರಷ್ಟರು ಬಿಜೆಪಿ ಸೇರಿದರೆ, ಬಿಜೆಪಿಯ ವಾಷಿಂಗ್ ಮಷೀನ್‌ನಲ್ಲಿ ಅವರು ಶುಭ್ರರಾಗಿ ಹೊರಬರುತ್ತಾರೆ. ಅವರನ್ನು ಮುಂದಿಟ್ಟು, ಬಿಜೆಪಿ ಮುಸ್ಲಿಮರ ದ್ವೇಷಿಯಲ್ಲ ಎಂದು ಹೇಳಿಕೊಳ್ಳುವುದಕ್ಕೆ ಅದು ಸುಲಭವಾಗುತ್ತದೆ.  

ಏತನ್ಮಧ್ಯೆ ಇನ್ನೊಂದು ಆಘಾತಕಾರಿ ಸುದ್ದಿ ಸ್ಫೋಟಗೊಂಡಿದೆ. ಆರ್‌ಎಸ್‌ಎಸ್‌ನ ಮುಖವಾಣಿಯಾದ ‘ಆರ್ಗನೈಸರ್’ ಪತ್ರಿಕೆ ಲೇಖನವೊಂದನ್ನು ಪ್ರಕಟಿಸಿದೆ.

ಆ ಲೇಖನದಲ್ಲಿ, ಭಾರತದಲ್ಲಿ ಅತಿ ಹೆಚ್ಚು ಭೂಮಿಯ ಒಡೆತನ ಇರುವುದು ವಕ್ಫ್ ಮಂಡಳಿಯ ಕೈಯಲ್ಲಲ್ಲ, ಬದಲಾಗಿ ಭಾರತದ ಕ್ಯಾಥೋಲಿಕ್ ಚರ್ಚ್‌ಗಳ ಬಳಿಯಲ್ಲಿ ಎಂದು ಉಲ್ಲೇಖಿಸಿದೆ. ಅಷ್ಟೇ ಅಲ್ಲ, ಕ್ಯಾಥೋಲಿಕ್ ಚರ್ಚನ್ನು ಭಾರೀ ಪ್ರಮಾಣದ ಭೂಮಿಯನ್ನು ಹೊಂದಿರುವ ಅತಿ ದೊಡ್ಡ ಸರಕಾರೇತರ ಸಂಸ್ಥೆ ಎಂದು ಹೇಳಿದೆ. ಚರ್ಚ್‌ಗಳು, ಶಾಲೆಗಳು, ಕಾಲೇಜುಗಳು ಮತ್ತು ಆಸ್ಪತ್ರೆಗಳಿಗೆ ಬಳಸುವ ಆಸ್ತಿಗಳು ಸೇರಿದಂತೆ ಕ್ಯಾಥೋಲಿಕ್ ಚರ್ಚ್ ಭಾರಿ ಪ್ರಮಾಣದ ಭೂಮಿಯನ್ನು ನಿಯಂತ್ರಿಸುತ್ತದೆ. ಇದರ ಅಂದಾಜು ಮೌಲ್ಯ 20,000 ಕೋಟಿ ರೂಪಾಯಿಗಳು ಎಂದು ಲೇಖನದಲ್ಲಿ ವಿವರಿಸಲಾಗಿದೆ. ಕ್ಯಾಥೋಲಿಕ್ ಚರ್ಚ್ ದೇಶಾದ್ಯಂತ ಸುಮಾರು 17.29 ಕೋಟಿ ಎಕರೆ ಅಂದರೆ, 7 ಕೋಟಿ ಹೆಕ್ಟೇರ್ ಭೂಮಿಯನ್ನು ಹೊಂದಿದೆ; ಭಾರತದಲ್ಲಿ ಮುಸ್ಲಿಮರ ವಕ್ಫ್‌ಗಿಂತ ಅತಿ ಹೆಚ್ಚು ಭೂಮಿ ಕ್ಯಾಥೋಲಿಕ್ ಚರ್ಚ್‌ಗಳ ಬಳಿಯಲ್ಲಿದೆ ಎಂದು ಅಂಕಿ-ಅಂಶಗಳ ಸಮೇತ ಬಹಿರಂಗಗೊಳಿಸಿದೆ.

ವಕ್ಫ್ ಮಂಡಳಿಯಲ್ಲಿ ಅಕ್ರಮವಾಗಿದೆ, ಬಡ ಮುಸ್ಲಿಮರಿಗೆ ಅನ್ಯಾಯವಾಗಿದೆ ಎಂದ ಕೇಂದ್ರ ಸರ್ಕಾರ, ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದೆ. ಅದೇ ಸಮಯದಲ್ಲಿ ಆರ್‌ಎಸ್‌ಎಸ್‌ನ ಮುಖವಾಣಿ ‘ಆರ್ಗನೈಸರ್’ ದೇಶದಲ್ಲಿ ಕ್ಯಾಥೋಲಿಕ್ ಚರ್ಚ್ ಭಾರೀ ಭೂಮಿ ಹೊಂದಿದೆ ಎಂಬ ಮಾಹಿತಿಯನ್ನೂ ಹೊರಹಾಕಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬುಲ್ಡೋಝರ್ ಅನ್ಯಾಯ- ಸುಪ್ರೀಮ್ ತೀರ್ಪನ್ನು ಹರಿದು ಗಾಳಿಗೆ ತೂರುತ್ತಿರುವ ಬಿಜೆಪಿ ಸರ್ಕಾರಗಳು

ಅಂದರೆ, ಸರಕಾರ ವಕ್ಫ್ ಮೇಲೆ ಹಿಡಿತ ಸಾಧಿಸಿದ ಬೆನ್ನಲ್ಲೇ, ಮುಂದಿನ ಗುರಿ ಕ್ಯಾಥೋಲಿಕ್ ಚರ್ಚ್‌ಗಳ ಆಸ್ತಿಗಳ ಮೇಲೆ ಎನ್ನುವುದನ್ನು ಸಾಂಕೇತಿಕವಾಗಿ ಸೂಚಿಸುತ್ತಿದೆ. ಎಲ್ಲವೂ ಸಂಘಪರಿವಾರದ ಯೋಜಿತ ಕೃತ್ಯದಂತೆ ಕಾಣತೊಡಗಿದೆ. ಏಕೆಂದರೆ ಭಾರತೀಯ ಜನತಾ ಪಕ್ಷಕ್ಕೆ ಸೈದ್ಧಾಂತಿಕ ತಳಹದಿಯನ್ನು ಹಾಕಿಕೊಟ್ಟಿರುವುದು ಹಾಗೂ ಸಂಘಟನಾ ಶಕ್ತಿಯನ್ನು ಒದಗಿಸುತ್ತಿರುವುದು ಆರ್‌ಎಸ್‌ಎಸ್‌. ಅದರ ಆಣತಿಯಂತೆಯೇ ಕೇಂದ್ರ ಸರ್ಕಾರ ಕಾರ್ಯಾಚರಿಸುತ್ತಿದೆ. ಅದು ವಕ್ಫ್ ತಿದ್ದುಪಡಿ ಮಸೂದೆಯನ್ನು ಕಾಯ್ದೆಯಾಗಿ ಜಾರಿಗೆ ತರುವಲ್ಲಿ ತೋರುತ್ತಿರುವ ಅತ್ಯುತ್ಸಾಹದಲ್ಲಿ ಕಾಣುತ್ತಿದೆ.  

ಈ ಮಹತ್ವದ ಮಾಹಿತಿ ‘ಆರ್ಗನೈಸರ್‘ ಪತ್ರಿಕೆಯಲ್ಲಿ ಪ್ರಕಟವಾದ ಮರುದಿನವೇ ಲೇಖನವನ್ನು ತೆಗೆದುಹಾಕಲಾಗಿದೆ. ಆ ಬರಹದ ವಿವರಗಳನ್ನು ‘ಎಕ್ಸ್‌ಪ್ರೆಸ್’ ಪ್ರಕಟಿಸಿದೆ. ಆದರೆ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಾಯಕರಾರೂ ಅದನ್ನು ಅಲ್ಲಗಳೆದಿಲ್ಲ. ಅಂದರೆ ಅವರ ಕಾರ್ಯಸೂಚಿ ಪೂರ್ವನಿರ್ಧಾರಿತ. ಜರ್ಮನಿಯ ಮಾರ್ಟಿನ್ ನಿಮೋಲರ್ ಹೇಳಿದ ಫ್ಯಾಸಿಸಂ ಇಲ್ಲೂ- ನಮ್ಮ ದೇಶದಲ್ಲೂ ಜಾರಿಯಾಗಿದೆ. ಈಗ ಮುಸ್ಲಿಮರು, ನಂತರ ಕ್ರೈಸ್ತರು, ಆನಂತರ ಶೂದ್ರರು. ದೇಶದ ಬಹುಸಂಖ್ಯಾತ ಶೂದ್ರ ಸಮುದಾಯ ಎಚ್ಚೆತ್ತುಕೊಳ್ಳದಿದ್ದರೆ, ಭಾರತ- ಬಹುತ್ವ ಭಾರತವಾಗಿ ಉಳಿಯುವುದಿಲ್ಲ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X