2024-25ನೇ ಸಾಲಿನಲ್ಲಿ ಬೀದರ ಜಿಲ್ಲೆಯ 185 ಗ್ರಾಮ ಪಂಚಾಯಿತಿಗಳಲ್ಲಿ ₹15.22 ಕೋಟಿ ತೆರಿಗೆ ಬಾಕಿ ವಸೂಲಾತಿ ಸಂಗ್ರಹವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಎಂಟು ತಾಲ್ಲೂಕುಗಳಿದ್ದು, ಈ ತಾಲ್ಲೂಕುಗಳಲ್ಲಿ ಬರುವ ಎಲ್ಲಾ ಗ್ರಾಮ ಪಂಚಾಯತಗಳಲ್ಲಿ ತೆರಿಗೆ ವಸೂಲಾತಿ ಮಂದಗತಿಯಲ್ಲಿ ಸಾಗುತ್ತಿರುವುದನ್ನು ಕಂಡು ತೆರಿಗೆ ವಸೂಲಾತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಈ ವಿಶೇಷ ಅಭಿಯಾನದ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ. ಹಳ್ಳಿಗಳ ಅಭಿವೃದ್ಧಿಗೆ ಪೂರಕವಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿಗದಿತ ಸಮಯದಲ್ಲಿ ಸರಿಯಾಗಿ ತೆರಿಗೆ ಸಂಗ್ರಹ ವಸೂಲಾತಿ ಬಹುಮುಖ್ಯʼ ಎಂದರು.
ʼಗ್ರಾಮದಲ್ಲಿ ಸೂಕ್ತ ಸೌಲಭ್ಯಗಳನ್ನು ಒದಗಿಸಬೇಕು ಎಂದಾಗ ಗ್ರಾಮ ಪಂಚಾಯತಿ ಅಧಿಕಾರಿಗಳ ಉತ್ತಮ ಸೇವೆಯ ಜೊತೆಗೆ ಸ್ಥಳೀಯ ಸಾರ್ವಜನಿಕರ ಸಹಕಾರ ತುಂಬಾ ಮುಖ್ಯವಾಗುತ್ತದೆ. 2024-25 ನೇ ಸಾಲಿನಲ್ಲಿ ತೆರಿಗೆ ಅಭಿಯಾನದ ಫಲವಾಗಿ ಒಟ್ಟು ₹15.22 ಕೋಟಿ ಸಂಗ್ರಹಿಸುವ ಮೂಲಕ (ಶೇ.70) ರಾಜ್ಯದಲ್ಲಿ ಉತ್ತಮ ಸ್ಥಾನ ಪಡೆದಿದ್ದೇವೆ. ಇದರಿಂದಾಗಿ ಗ್ರಾಮ ಪಂಚಾಯಿತಿಗಳ ಆರ್ಥಿಕ ಬಲ ಹೆಚ್ಚಾಗಿದೆʼ ಎಂದು ತಿಳಿಸಿದರು.
ಚಿಟಗುಪ್ಪ ಮೊದಲ ಸ್ಥಾನ :
ತೆರಿಗೆ ವಸೂಲಾತಿ ಅಭಿಯಾನದಲ್ಲಿ ಚಿಟಗುಪ್ಪಾ ತಾಲ್ಲೂಕು ಜಿಲ್ಲೆಯಲ್ಲಿ ಮೊದಲ ಸ್ಥಾನ ಪಡೆದಿದೆ. ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ₹1.19 ಕೋಟಿ ತೆರಿಗೆ ವಸೂಲಿ (ಶೇ83.37) ಮಾಡುವ ಮೂಲಕ ಜಿಲ್ಲೆಯಲ್ಲಿ ಮೊದಲನೆ ಸ್ಥಾನದಲ್ಲಿದೆ. 2023-24ನೇ ಸಾಲಿಗಿಂತ ಪ್ರಸಕ್ತ ಸಾಲಿನಲ್ಲಿ ತೆರಿಗೆ ವಸೂಲಿಯಲ್ಲಿ ಶೇ38 ರಷ್ಟು ಹೆಚ್ಚಳವಾಗಿದೆʼ ಎಂದು ಮಾಹಿತಿ ನೀಡಿದರು.
ʼ2023-24ರಲ್ಲಿ ಒಟ್ಟು ₹8.44 ಕೋಟಿಗಳ (ಶೇ32.01) ತೆರಿಗೆ ವಸೂಲಾತಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ತೆರಿಗೆ ವಸೂಲಾತಿಯ ಕುರಿತು ಗ್ರಾಮಗಳ ಸಾರ್ವಜನಿಕರಿಗೆ ಅರಿವು ಮೂಡಿಸಲು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗಿತ್ತುʼ ಎಂದು ತಿಳಿಸಿದರು.
ʼ2023-2024ನೇ ಸಾಲಿನ ಡಿಸೆಂಬರ್ ತಿಂಗಳ ಅಂತ್ಯದ ವೇಳೆ ನಾನು ಅಧಿಕಾರ ಸ್ವೀಕರಿಸಿ 2024ರ ವರ್ಷದಲ್ಲಿ ಸತತ 5 ಬಾರಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕರ ವಸೂಲಾತಿ ಅಭಿಯಾನಗಳನ್ನು ಆರಂಭಿಸಿದ್ದೇನೆ. ಜಿಲ್ಲೆಯ ಎಲ್ಲಾ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮೊಬೈಲ್ ಟವರ್, ಕೈಗಾರಿಕಾ ಕಾರ್ಖಾನೆ ಹಾಗೂ ವಾಣಿಜ್ಯ ಆಸ್ತಿಗಳಿಗೆ ಹೆಚ್ಚು ಒತ್ತು ನೀಡಲಾಯಿತು. ಕರ ವಸೂಲಾತಿ ಪ್ರಮಾಣ ಹೆಚ್ಚಿಸಲು ಪ್ರತಿ ತಾಲೂಕಿಗೆ ಒಬ್ಬರಂತೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿತ್ತುʼ ಎಂದು ಮಾಹಿತಿ ನೀಡಿದರು.
ʼಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಕರವಸೂಲಿಗಾರರು ಮತ್ತು ಕಂಪ್ಯೂಟರ್ ಆಪರೇಟರ್ ಹಾಗೂ ಸ್ವಸಹಾಯ ಸಂಘಗಳ ಮಹಿಳೆಯರನ್ನು ನೇಮಿಸಿ, ಮನೆ-ಮನೆಗೆ ತೆರಳಿ ಕರ ವಸೂಲಾತಿ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ತೆರಿಗೆ ಸಂಗ್ರಹಿಸಲು ಸೂಚಿಸಲಾಯಿತು. ಇದರೊಂದಿಗೆ ಅನೇಕ ಬಾರಿ ಖುದ್ದಾಗಿ ನಾನು ಕರ ವಸೂಲಾತಿ ಅಭಿಯಾನದಲ್ಲಿ ಪಾಲ್ಗೊಂಡ ಪರಿಣಾಮವಾಗಿ ತೆರಿಗೆ ವಸೂಲಾತಿ ಅಭಿಯಾನ ಬಹುತೇಕ ಯಶಸ್ವಿ ಕಂಡಿದೆʼ ಎಂದರು.
ಈ ಸುದ್ದಿ ಓದಿದ್ದೀರಾ? ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ. 73.45 ವಿದ್ಯಾರ್ಥಿಗಳು ಉತ್ತೀರ್ಣ
ಜಿಲ್ಲೆಯ 185 ಗ್ರಾಮ ಪಂಚಾಯಿತಿಗಳಲ್ಲಿ ಕರ ವಸೂಲಾತಿ ಪ್ರಗತಿ ಸಾಧಿಸಲು ತಾಲ್ಲೂಕು ಪಂಚಾಯಿತಿ ಮಟ್ಟದ ಅಧಿಕಾರಿ, ಸಿಬ್ಬಂದಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕರ ವಸೂಲಿಗಾರರು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಿರಂತರ ಸಭೆಗಳು ನಡೆಸಿ ಉತ್ತಮ ಪ್ರಗತಿ ಸಾಧಿಸಲು ವಿಶೇಷ ಶ್ರಮವಹಿಸಿ ಅಭಿಯಾನಗಳನ್ನು ಯಶಸ್ವಿಗೊಳಿದ್ದಾರೆʼ ಎಂದು ಸಿಇಒ ಡಾ.ಗಿರೀಶ ಬದೋಲೆ ಅವರು ಶ್ಲಾಘಿಸಿದ್ದಾರೆ.