ದಲಿತ ಸಮುದಾಯಕ್ಕೆ ಸೇರಿದ ರಾಜಸ್ಥಾನ ವಿಧಾನಸಭೆಯ ವಿಪಕ್ಷ ನಾಯಕ ಟೀಕಾರಾಮ್ ಜುಲ್ಲಿ ಅವರು ರಾಮ ಮಂದಿರಕ್ಕೆ ಭೇಟಿ ನೀಡಿದ ನಂತರ, ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಶಾಸಕ ಜ್ಞಾನ್ ದೇವ್ ಅಹುಜಾ ಮಂದಿರದಲ್ಲಿ ಗಂಗಾ ಜಲ ಸಿಂಪಡಿಸಿದ ಆರೋಪ ಕೇಳಿ ಬಂದಿದೆ. ಇದರಿಂದ ರಾಜಸ್ಥಾನದಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.
ಭಾನುವಾರ ಅಲ್ವಾರ್ ನ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಟೀಕಾರಾಮ್ ಜುಲ್ಲಿ ಭಾಗವಹಿಸಿದ ನಂತರ, ಈ ಘಟನೆ ನಡೆದಿದೆ.
ವರದಿಗಳ ಪ್ರಕಾರ, ಟೀಕಾರಾಮ್ ಜುಲ್ಲಿ ಅವರು ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೆಲವೇ ಕ್ಷಣಗಳಲ್ಲಿ, ಆ ಸ್ಥಳವನ್ನು ಶುದ್ಧೀಕರಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿರುವ ಜ್ಞಾನ್ ದೇವ್ ಅಹುಜಾ, ಮಂದಿರದ ಆವರಣದಲ್ಲಿ ಗಂಗಾ ಜಲವನ್ನು ಸಿಂಪಡಿಸಲು ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ.
ಟೀಕಾರಾಮ್ ಜುಲ್ಲಿ ಅವರು ದಲಿತ ಸಮುದಾಯಕ್ಕೆ ಸೇರಿರುವುದರಿಂದ ಜ್ಞಾನ್ ದೇವ್ ಅಹುಜಾರ ಈ ನಡೆಯು ವ್ಯಾಪಕ ಟೀಕೆಗೆ ಗುರಿಯಾಗಿದೆ. ಜಾತಿ ಆಧಾರಿತ ತಾರತಮ್ಯ ಹಾಗೂ ಅಸ್ಪೃಶ್ಯತೆಯ ಚರ್ಚೆಗಳು ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಸ್ಲಿಮರು, ನಂತರ ಕ್ರೈಸ್ತರು… ಆನಂತರ?
ಈ ಕುರಿತು ಎಕ್ಸ್ ನಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ಟೀಕಾರಾಮ್ ಜುಲ್ಲಿ, ”ಬಿಜೆಪಿಯ ಹಿರಿಯ ನಾಯಕರ ಈ ಕೃತ್ಯವು
ಬಿಜೆಪಿಯ ದಲಿತರೆಡೆಗಿನ ಪೂರ್ವಗ್ರಹವನ್ನು ತೋರಿಸಿದೆ. ಬಿಜೆಪಿಯ ಹಿರಿಯ ನಾಯಕ ಜ್ಞಾನ್ ದೇವ್ ಅಹುಜಾ ನೀಡಿರುವ ಹೇಳಿಕೆಯು ದಲಿತರ ಬಗ್ಗೆ ಬಿಜೆಪಿಯ ಮನಸ್ಥಿತಿಯನ್ನು ಬಹಿರಂಗಗೊಳಿಸಿದೆ. ನಾನು ವಿಧಾನಸಭೆಯಲ್ಲಿ ನಿರಂತರವಾಗಿ ದಲಿತರ ಪರ ಧ್ವನಿ ಎತ್ತಿದ್ದೆ ಹಾಗೂ ಅಸ್ಪೃಶ್ಯತೆಯ ವಿರುದ್ಧ ಅಭಿಯಾನ ನಡೆಸಿದ್ದೆ. ಆದರೆ, ಬಿಜೆಪಿಯ ಮನಸ್ಥಿತಿ
ಹೇಗಿದೆಯೆಂದರೆ, ನಾನು ಓರ್ವ ದಲಿತನಾಗಿ ಮಂದಿರಕ್ಕೆ ಭೇಟಿ ನೀಡಿದ್ದರಿಂದ, ಅದನ್ನು ಗಂಗಾ ಜಲದಿಂದ ಶುದ್ಧೀಕರಿಸಬೇಕು ಎಂಬ ಮಟ್ಟಕ್ಕಿದೆ. ಇದು ಕೇವಲ ನನ್ನ ವೈಯಕ್ತಿಕ ನಂಬಿಕೆಯ ಮೇಲಿನ ದಾಳಿ ಮಾತ್ರವಲ್ಲ, ಬದಲಿಗೆ, ಅಮಾನವೀಯತೆ ಹಾಗೂ ಅಸ್ಪೃಶ್ಯತೆಯಂತಹ ಕಾನೂನು ಬಾಹಿರ ರೂಢಿಗಳಿಗೆ ಪುರಾವೆಯಾಗಿದೆ” ಎಂದು ಹೇಳಿದರು.
”ದಲಿತರಾದ ನಾವು ಪೂಜೆ ಮಾಡುವುದನ್ನೂ ಸಹಿಸದಷ್ಟು ಬಿಜೆಪಿ ನಮ್ಮನ್ನು ದ್ವೇಷಿಸುತ್ತದೆಯೆ? ದೇವರು ಬಿಜೆಪಿ ನಾಯಕರ ವೈಯಕ್ತಿಕ ಆಸ್ತಿಯಾಗಿ ಬಿಟ್ಟಿದ್ದಾನ? ದಲಿತರು ದೇವಾಲಯಗಳಿಗೆ ಭೇಟಿ ನೀಡಿದಾಗ ನಡೆಯುವ ಇಂತಹ ಜಾತೀಯತೆಯ ನಡವಳಿಕೆಗಳಿಗೆ ತಮ್ಮ ಬೆಂಬಲವಿದೆಯೆ ಎಂಬುದನ್ನು ಮುಖ್ಯಮಂತ್ರಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರು ಸ್ಪಷ್ಟಪಡಿಸಲೇಬೇಕು” ಎಂದು ಹೇಳಿದರು.
ಘಟನೆ ನಂತರ ಜ್ಞಾನ್ ದೇವ್ ಅಹುಜಾ ಅವರನ್ನು ರಾಜ್ಯ ಬಿಜೆಪಿ ಘಟಕ ಅಮಾನತುಗೊಳಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಷೋಕಾಸ್ ನೋಟಿಸ್ ನೀಡಲಾಗಿದೆ.