ಪರಿಶಿಷ್ಟ ಜಾತಿಗಳ ಎಲ್ಲಾ ಕುಟುಂಬಗಳ ನಿಖರ ಮಾಹಿತಿಗಾಗಿ ರಾಜ್ಯ ಸರ್ಕಾರ ಸಮೀಕ್ಷೆ ನಡೆಸಲು ಮುಂದಾಗುತ್ತಿದ್ದು, ಅಧಿಕಾರಿಗಳು ಸಮೀಕ್ಷೆಗೆ ಬಂದಾಗ ಮಾದಿಗ ಅಥವಾ ಮಾದರ ಎಂದು ನಮೂದಿಸಬೇಕು ಎಂದು ಮಾದಿಗರ ಸಮಾಜದ ಮುಖಂಡ ಉಡಚಪ್ಪ ಮಾಳಗಿ ಹೇಳಿದರು.
ಜಿಲ್ಲಾ ಪ್ರವಾಸಿ ಮಂದಿರದಲ್ಲಿ ಪರಿಶಿಷ್ಟ ಜಾತಿ ಸಮೀಕ್ಷೆಯ ಕುರಿತು ಕರೆಯಲಾದ ಜಿಲ್ಲಾ ಮಟ್ಟದ ಮಾದಿಗ ಸಮುದಾಯದ ಸಭೆಯಲ್ಲಿ ಅವರು ಮಾತನಾಡಿದರು.
ಒಳಮೀಸಲಾತಿ ಸಮೀಕ್ಷೆ ಏ.6 ರಿಂದ ಪ್ರಾರಂಭವಾಗಿದ್ದು, ಜಿಲ್ಲೆಯ ಎಲ್ಲಾ ತಾಲೂಕಿನ ಎಲ್ಲಾ ಗ್ರಾಮಗಳಿಗೆ ಸಮೀಕ್ಷೆಯ ಅಧಿಕಾರಿಗಳು ಆಗಮಿಸಿದಾಗ ಪರಿಶಿಷ್ಟ ಜಾತಿಗಳ ಸಮೀಕ್ಷೆಗೆ ಸಹಕಾರ ನೀಡುವ ಕೆಲಸವಾಗಬೇಕು. ಪರಿಶಿಷ್ಟ ಜಾತಿಯ ಆದಿ ಜಾಂಬವ, ಆದಿ ಡ್ರಾವಿಡ, ಎಸ್‌ಸಿ, ಆದಿ ಕರ್ನಾಟಕ ಹಾಗೂ ಹರಿಜನ ಪದಗಳನ್ನು ಬರೆಸಿರುವ ಮಾದಿಗ ಹಾಗೂ ಮಾದರ ಸಮುದಾಯದವರು ಜಾತಿ ಕಾಲಂನಲ್ಲಿ ಮಾದಿಗ ಅಥವಾ ಮಾದರ ಎಂದು ಬರೆಯಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಬೇರೆ ಪದಗಳನ್ನು ಬಳಸಿ ನಮಗೆ ಸಿಗಬಹುದಾಗ ಸೌಲಭ್ಯಗಳನ್ನು ಪಡೆಯುವ ಪ್ರಸಂಗಗಳು ಕಂಡು ಬರುತ್ತಿದೆ. ನಮ್ಮ ಸಮುದಾಯ ಸರ್ಕಾರಗಳ ಸೌಲಭ್ಯ ಪಡೆದು ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಬೇಕಾಗಿದೆ. ಸಮೀಕ್ಷೆ ಸಮಯದಲ್ಲಿ ಜಾಗೃತಿವಹಿಸುವುದು ಅಗತ್ಯವಾಗಿದ್ದು, ಏನಾದರೂ ತಮಗೆ ಹೆಚ್ಚಿನ ಮಾಹಿತಿ ಬೇಕಾದರೆ ಮಾದಿಗ ಸಮುದಾಯದ ಮುಖಂಡರುಗಳನ್ನು ಸಂಪರ್ಕಿಸಿ” ಎಂದು ತಿಳಿಸಿದರು.
ಇದನ್ನೂ ಓದಿ: ಹಾವೇರಿ | ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಕೊಳೆತ ಆಹಾರ ಪೂರೈಕೆ: ಎಸ್ಎಫ್ಐ ಆರೋಪ
ಸಭೆಯಲ್ಲಿ ಸಮುದಾಯದ ಮುಖಂಡ ಬಸವರಾಜ ಹೆಡಿಗೊಂಡ, ಎಸ್ ಜಿ ಹೊನ್ನಪ್ಪನವರ, ಏಳಕೊಟೆಪ್ಪ ಎಸ್ ಪಾಟೀಲ, ಅಶೋಕ ಮರೆಯಣ್ಣನವರ, ಸಂಜಯಗಾಂಧಿ ಸಂಜೀವಣ್ಣನವರ, ಮಾರುತಿ ಸೊಟ್ಟಪ್ಪನವರ, ಸುರೇಶ ಅಳ್ಳಳ್ಳಿ, ಭೀಮಣ್ಣ ಯಲ್ಲಾಪುರ, ಶಿವಣ್ಣ ನಾಗಮ್ಮನವರ, ಮಂಜು ವಡ್ಡರ, ಯಲ್ಲಪ್ಪ ಅಂದಲಗಿ, ನಾಗರಾಜ ಮಾಳಮ್ಮನವರ, ಹನಮಂತ ಹಲಗೇರಿ, ಮಂಜು ದಿಡಗೂರ, ಗುಡ್ಡಪ್ಪ ಬಣಕಾರ, ಸುನೀಲ ಕಡೂರ, ನೀಲಪ್ಪ ದೇವರಮನಿ, ನಿಂಗಪ್ಪ ಹರಿಜನ, ಫಕ್ಕಿರೇಶ ಪುರದ, ಮಾರುತಿ ಬಣಕಾರ, ಗುತ್ತೆಪ್ಪ ಆಲದಕಟ್ಟಿ, ನವೀನ ಸಿದ್ದಣ್ಣನವರ, ಜಗದೀಶ ಹರಿಜನ, ನಾಗರಾಜ ಬಣಕಾರ ಸೇರಿದಂತೆ ಮಾದಿಗರ ಸಮುದಾಯದ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.