ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಏ.12 ಮತ್ತು 13ರಂದು ಹಮ್ಮಿಕೊಂಡಿರುವ ’14ನೇ ವಿಜಯಪುರ ಸಾಂಸ್ಕೃತಿಕ ಜನೋತ್ಸವ’ದಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕೆಂದು ‘ಆವಿಷ್ಕಾರ’ ಪ್ರಗತಿಪರ ಸಾಂಸ್ಕೃತಿಕ ವೇದಿಕೆ, ಎಐಡಿಎಸ್‌ಒ, ಎಐಎಮ್ಎಸ್‌ಎಸ್ ಹಾಗೂ ಎಐಡಿವೈಒ ಸಂಘಟನೆ ಒಳಗೊಂಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಭರತ ಕುಮಾರ್ ಎಚ್ ಟಿ ಹೇಳಿದರು.
ವಿಜಯಪುರ ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾ ಭವನದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
“ಭಗತ್ ಸಿಂಗ್, ನೇತಾಜಿ, ವಿದ್ಯಾಸಾಗರ, ಜ್ಯೋತಿಬಾಫುಲೆ ಮುಂತಾದವರ ವಿಚಾರಗಳನ್ನು, ಉನ್ನತ ನೀತಿ-ಸಂಸ್ಕೃತಿ, ಮೌಲ್ಯಗಳನ್ನು ಜನರ ಮಧ್ಯದಲ್ಲಿ ಬಿತ್ತುವ ಪ್ರಯತ್ನ ಇಂದಿಗೆ ತುರ್ತು ಅವಶ್ಯಕವಾಗಿದೆ. ಈ ಕಾರ್ಯದ ಭಾಗವಾಗಿ ಪ್ರಗತಿಪರ ಸಾಂಸ್ಕೃತಿಕ ವೇದಿಕೆ, ಎಐಡಿವೈಒ, ಎಐಡಿಎಎಸ್‌ಒ ಹಾಗೂ ಎಐಎಂಎಸ್ಎಸ್ ಗಳ ಸಂಯುಕ್ತಾಶ್ರಯದಲ್ಲಿ 14ನೇ ‘ವಿಜಯಪುರ ಸಾಂಸ್ಕೃತಿಕ ಜನೋತ್ಸವ’ವನ್ನು ಸಂಘಟಿಸಲಾಗಿದೆ. ಈ ಕಾರ್ಯಕ್ರಮವನ್ನು ನವೋದಯದ ಹರಿಕಾರ ಜ್ಯೋತಿಬಾ ಫುಲೆ ಅವರ ಜನ್ಮ ದಿನಕ್ಕೆ ಸಮರ್ಪಿಸಲಾಗಿದೆ. ಇಲ್ಲಿ ಹಲವಾರು ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ” ಎಂದು ತಿಳಿಸಿದರು.
ಏ.12 ಶನಿವಾರದಂದು ಸಂಜೆ 6-00ಕ್ಕೆ ಜಾಜಿ ಮಲ್ಲಿಗೆ ಕವಿ ಎಂದೇ ಖ್ಯಾತರಾದ ಬಾಗಲಕೋಟೆಯ ಡಾ. ಸತ್ಯಾನಂದ ಪಾತ್ರೋಟ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಎಐಯುಟಿಯುಸಿ ಕಾರ್ಮಿಕ ಸಂಘಟನೆಯ ರಾಜ್ಯ ಅಧ್ಯಕ್ಷ ಸೋಮಶೇಖರ ಅವರು ಆಗಮಿಸಲಿದ್ದಾರೆ. ನಂತರ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜಯಪುರದ ವಿದೂಷಿ ಲಕ್ಷ್ಮೀ ತೇರದಾಳಮಠ ಅವರ ನಾಟ್ಯಕಲಾ ಡಾನ್ಸ್ ಕ್ಲಾಸ್‌ನವರಿಂದ ನೃತ್ಯ ರೂಪಕ, ಧಾರವಾಡ ಆಕಾಶವಾಣಿಯ ಬಿ ಹೈಗ್ರೇಡ್ ಕಲಾವಿದೆ ಕುಮಾರಿ ಕೃತಿಕಾ ವಿ ಜಂಗಿನಮಠ ಅವರಿಂದ ಕೊಳಲು ವಾದನ, ತಿಕೋಟಾದ ಸ್ವಾಮಿ ವಿವೇಕಾನಂದ ಮಾಡೆಲ್ ಸ್ಕೂಲ್ ಅವರಿಂದ ಜನಪದ ನೃತ್ಯ ಹಾಗೂ ವಿಜಯಪುರದ ಸ್ವಯಂಭೂ ಆರ್ಟ್ ಫೌಂಡೇಶನ್ನನ ನಟಿ ಹಾಗೂ ಭರತನಾಟ್ಯ ಕಲಾವಿದೆ ವಿದೂಷಿ ದೀಕ್ಷಾ ಭೀಸೆ ಹಾಗೂ ದಿವ್ಯಾ ಭೀಸೆ ಮತ್ತು ತಂಡದವರಿಂದ ನೃತ್ಯ ಪ್ರದರ್ಶನ ಕಾಯಕ್ರಮಗಳು ಜರುಗಲಿವೆ.
ನಂತರ ಮೂಲ ಬಾದಲ್ ಸರ್ಕಾರರವರು ರಚಿಸಿದ. ರಾಜೇಂದ್ರ ಕಾರಂತ್ ಅವರು ಕನ್ನಡಕ್ಕೆ ರೂಪಾಂತರಿಸಿದ ನಾಟಕ ‘ಮೋಜಿನ ಸೀಮೆಯಾಚೆ ಒಂದೂರು’ ಪ್ರದರ್ಶನಗೊಳ್ಳಲಿದೆ. ಈ ನಾಟಕವನ್ನು ಭಾನುಪ್ರಕಾಶ್ ಕಡಗತ್ತೂರು ನಿರ್ದೇಶಿಸಿದ್ದು, ಮುತ್ತುರಾಜ ಗೌರಾಣಿ ಸಂಗೀತ ಹಾಗೂ ಅರುಣ ರಾಜ್ ತಬಲಾ ಸಾಥ್ ನೀಡಿದ್ದಾರೆ.
ಇದನ್ನೂ ಓದಿ: ವಿಜಯಪುರ | ರೈತರಿಗೆ ಪರಿಸರಸ್ನೇಹಿ ಕೀಟನಾಶಕ ಬಳಕೆ ಕುರಿತ ಅರಿವು ಅಗತ್ಯ: ಅಶೋಕ ಎಸ್. ಸಜ್ಜನ
ಏ.13 ರವಿವಾರದಂದು ಬೆಳಗ್ಗೆ 11-00ಕ್ಕೆ ‘ಕವಿಗೋಷ್ಠಿ’ ಹಮ್ಮಿಕೊಳ್ಳಲಾಗಿದೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಸುಭಾಷ್ ಯಾದವಾಡ ವಹಿಸಲಿದ್ದಾರೆ. ಸಂಜೆ 5-30 ಗಂಟೆಗೆ ಬಿ. ಸುರೇಶ ಅವರ ನಿರ್ದೇಶನದ ‘ದೇವರ ನಾಡಲ್ಲಿ’ ಸಿನೆಮಾ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಈ ಸಿನೆಮಾವನ್ನು ಬಿ. ಸುರೇಶ ಹಾಗೂ ಶೈಲಜಾ ನಾಗ್ ನಿರ್ಮಿಸಿದ್ದು, ಖ್ಯಾತ ನಟರಾದ ಪ್ರಕಾಶ್ ರೈ, ಅಚ್ಯುತ್ ಕುಮಾರ್, ಮಂಡ್ಯ ರಮೇಶ ಹಾಗೂ ಅವರ ಮಗಳು ದಿಶಾ ರಮೇಶ ಸೇರಿ ಹಲವರು ನಟಿಸಿದ್ದಾರೆ.
ಸಿನೆಮಾ ಪ್ರದರ್ಶನದ ನಂತರ ವಿಜಯಪುರದ ಹಿರಿಯ ಪತ್ರಕರ್ತ ಅನಿಲ್ ಹೊಸಮನಿಯವರು ಸಿನೆಮಾ ಕುರಿತು ಸಂವಾದ ನಡೆಸಿಕೊಡಲಿದ್ದಾರೆ.